ಆರ್ಎಸ್ಎಸ್ ಶತಾಬ್ದಿ ಕಾರ್ಯಕ್ರಮಗಳಿಗೆ ಉತ್ತಮ ಸ್ಪಂದನೆ
ಬೆಂಗಳೂರು, 17 ಮಾರ್ಚ್ (ಹಿ.ಸ.): ಆ್ಯಂಕರ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ದೇಶಾದ್ಯಂತ ತನ್ನ ಸಂಘಟನಾ ವಿಸ್ತಾರವನ್ನು ಮತ್ತಷ್ಟು ಬಲಪಡಿಸಿಕೊಂಡಿದ್ದು, 2025-26ನೇ ಸಾಲಿನಲ್ಲಿ ಶಾಖೆಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂ
RSS


ಬೆಂಗಳೂರು, 17 ಮಾರ್ಚ್ (ಹಿ.ಸ.):

ಆ್ಯಂಕರ್:

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ದೇಶಾದ್ಯಂತ ತನ್ನ ಸಂಘಟನಾ ವಿಸ್ತಾರವನ್ನು ಮತ್ತಷ್ಟು ಬಲಪಡಿಸಿಕೊಂಡಿದ್ದು, 2025-26ನೇ ಸಾಲಿನಲ್ಲಿ ಶಾಖೆಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಹಾಗೂ ಪ್ರಾಂತ ಸಂಘಚಾಲಕ ಜಿ.ಎಸ್. ಉಮಾಪತಿ ಈ ಕುರಿತು ಮಾಹಿತಿ ನೀಡಿದರು.

ದೇಶದಾದ್ಯಂತ 55,683 ಸ್ಥಳಗಳಲ್ಲಿ ಒಟ್ಟು 88,949 ದೈನಂದಿನ ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಕಳೆದ ವರ್ಷಕ್ಕಿಂತ 5,820 ಶಾಖೆಗಳು ಹೆಚ್ಚಳವಾಗಿದೆ. ವಾರಕ್ಕೊಮ್ಮೆ ನಡೆಯುವ ‘ಮಿಲನ್’ಗಳ ಸಂಖ್ಯೆ 32,606ಕ್ಕೆ ಏರಿಕೆಯಾಗಿದ್ದು, ತಿಂಗಳಿಗೆ ನಡೆಯುವ ಮಂಡಳಿಗಳು 13,211 ಆಗಿವೆ. ಒಟ್ಟಾರೆ ಶಾಖೆ, ಮಿಲನ್ ಹಾಗೂ ಮಂಡಳಿಗಳ ಸಂಖ್ಯೆ 1,34,766ಕ್ಕೆ ತಲುಪಿದೆ.

ಕಾರ್ಯಕರ್ತರ ತರಬೇತಿ ಕಾರ್ಯಕ್ರಮಗಳಡಿಯಲ್ಲಿ 63 ಸಂಘ ಶಿಕ್ಷಾ ವರ್ಗಗಳು ನಡೆದಿದ್ದು, 14,024 ಮಂದಿ ಭಾಗವಹಿಸಿದ್ದಾರೆ. ವಿವಿಧ ಹಂತದ ಕಾರ್ಯಕರ್ತ ಅಭಿವೃದ್ಧಿ ಶಿಬಿರಗಳಲ್ಲೂ ಸಾವಿರಾರು ಮಂದಿ ತರಬೇತಿ ಪಡೆದಿದ್ದಾರೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಚಟುವಟಿಕೆ ವಿಸ್ತಾರ:

ರಾಜ್ಯದಲ್ಲಿ 4,127 ದೈನಂದಿನ ಶಾಖೆಗಳು, 1,389 ಮಿಲನ್‌ಗಳು ಹಾಗೂ 60 ಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ. ಹಿಂದೂ ಸಮಾಜೋತ್ಸವ ಕಾರ್ಯಕ್ರಮಗಳಲ್ಲಿ 19.61 ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದಾರೆ. ಗೃಹಸಂಪರ್ಕ ಅಭಿಯಾನದಲ್ಲಿ 48.68 ಲಕ್ಷ ಮನೆಗಳಿಗೆ ಸಂಪರ್ಕ ಸಾಧಿಸಲಾಗಿದೆ ಎಂದು ಹೇಳಿದರು.

ಯುವಕರಿಗಾಗಿ ‘ನವೀನತೆ’ ಕಾರ್ಯಕ್ರಮವನ್ನು 48 ಸ್ಥಳಗಳಲ್ಲಿ ಆಯೋಜಿಸಲಾಗಿದ್ದು, 8,799 ವಿದ್ಯಾರ್ಥಿಗಳು ಹಾಗೂ 3,973 ಯುವ ಉದ್ಯೋಗಿಗಳು ಭಾಗವಹಿಸಿದ್ದಾರೆ. ಧಾರವಾಡದಲ್ಲಿ ಶಿಕ್ಷಣ ಸಂಸ್ಥೆಗಳ ಪ್ರಮುಖರೊಂದಿಗೆ ನಡೆದ ಸಂವಾದದಲ್ಲಿ 920 ಮಂದಿ ಉಪಸ್ಥಿತರಿದ್ದರು. ವಿಜಯಪುರದಲ್ಲಿ ‘ಯುವ ಸಾಧು-ಸಂತ ಸಂವಾದ’ದಲ್ಲಿ 230 ಸಂತರು ಪಾಲ್ಗೊಂಡಿದ್ದಾರೆ ಎಂದರು.

ಶತಾಬ್ದಿ ಕಾರ್ಯಕ್ರಮಗಳಿಗೆ ಜನಬೆಂಬಲ:

ವಿಜಯದಶಮಿ ಉತ್ಸವಗಳು ದೇಶಾದ್ಯಂತ 62,555 ಸ್ಥಳಗಳಲ್ಲಿ ನಡೆದಿದ್ದು, 32 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ. ಗೃಹಸಂಪರ್ಕ ಅಭಿಯಾನದಲ್ಲಿ 10 ಕೋಟಿಗೂ ಹೆಚ್ಚು ಮನೆಗಳಿಗೆ ತಲುಪಲಾಗಿದೆ. ಹಿಂದೂ ಸಮಾಜೋತ್ಸವಗಳಲ್ಲಿ 3.49 ಕೋಟಿ ಜನರು ಪಾಲ್ಗೊಂಡಿರುವುದು ಗಮನಾರ್ಹ ಎಂದು ತಿಳಿಸಿದರು.

ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ:

ರಾಜ್ಯದ 23 ಜಿಲ್ಲೆಗಳ 86 ತಾಲ್ಲೂಕುಗಳಲ್ಲಿ ‘ಡ್ರಗ್ಸ್ ಮುಕ್ತ ಕರ್ನಾಟಕ’ ಜಾಗೃತಿ ಅಭಿಯಾನ ನಡೆಸಲಾಗಿದ್ದು, 60,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಾವಿರಾರು ಸಾರ್ವಜನಿಕರು ಪಾಲ್ಗೊಂಡಿದ್ದಾರೆ. ಮುಂದಿನ ಐದು ವರ್ಷಗಳ ಕಾಲ ಈ ಅಭಿಯಾನ ಮುಂದುವರಿಸಲು ಯೋಜಿಸಲಾಗಿದೆ.

ಇದೇ ವೇಳೆ, ರಾಣಿ ಅಬ್ಬಕ್ಕ ಅವರ 500ನೇ ಜಯಂತಿ ಅಂಗವಾಗಿ ರಾಜ್ಯದಾದ್ಯಂತ ನೂರಾರು ಕಾರ್ಯಕ್ರಮಗಳನ್ನು ಆಯೋಜಿಸಿ, ಸುಮಾರು 23 ಸಾವಿರ ವಿದ್ಯಾರ್ಥಿಗಳಿಗೆ ಇತಿಹಾಸ ಪರಿಚಯಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮುಂದಿನ ದಿನಗಳಲ್ಲಿ ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande