ಕೋಲಾರದಲ್ಲಿ ಡಿ.ವಿ.ಜಿಯವರ ೧೩೯ ನೇ ಜಯಂತಿ ಆಚರಣೆ
ಕೋಲಾರದಲ್ಲಿ ಡಿ.ವಿ.ಜಿಯವರ ೧೩೯ ನೇ ಜಯಂತಿ ಆಚರಣೆ
ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಡಿ.ವಿ.ಗುಂಡಪ್ಪ ಅವರ ೧೩೯ ನೇ ಜಯಂತಿ ಆಚರಣೆ ಮಾಡಲಾಯಿತು.


ಕೋಲಾರ,೧೭ಮಾರ್ಚ್ (ಹಿ.ಸ.):

ಆಂಕರ್ ; ಡಿ.ವಿ.ಜಿ ರವರ ಆದರ್ಶಗಳನ್ನು ಪ್ರತಿಯೊಬ್ಬ ಪತ್ರಕರ್ತ ಪಾಲಿಸುವಂತಾಗಬೇಕ ಪ್ರಸ್ತುತ ಪತ್ರಿಕೋದ್ಯಮ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಪತ್ರಕರ್ತರಾದವರು ಆತ್ಮ ಅವಲೋಕನ ಮಾಡಿಕೊಳ್ಳುವುದಲ್ಲದೆ, ಡಿ.ವಿ.ಜಿ ರವರ ಆದರ್ಶಗಳನ್ನು ಪ್ರತಿಯೊಬ್ಬ ಪತ್ರಕರ್ತ ಪಾಲಿಸುವಂತಾಗಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಕಿವಿ ಮಾತು ಹೇಳಿದರು.

ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಡಿ.ವಿ.ಗುಂಡಪ್ಪ ಅವರ ೧೩೯ ನೇ ಜಯಂತಿ ಆಚರಣೆಯಲ್ಲಿ ಅವರು ಭಾಗವಹಿಸಿ ಮಾತನಾಡುತ್ತಾ, ಡಿವಿಜಿಯವರು ನಮ್ಮ ಕೋಲಾರ ಜಿಲ್ಲೆಯವರು ಎಂದು ಹೇಳಿಕೊಳ್ಳುವುದಕ್ಕೆ ಪ್ರತಿಯೊಬ್ಬ ಪತ್ರಕರ್ತರಿಗೆ ಹೆಮ್ಮೆ ಪಡಬೇಕು.

ಕೆ.ಯು.ಡಬ್ಲ್ಯೂ.ಜೆ ಸಂಸ್ಥಾಪಕರಾದ ಡಿ.ವಿ.ಗುಂಡಪ್ಪ ನವರು ಕಟ್ಟಿದ ಸಂಘಕ್ಕೆ ೨೦೩೨ ನೇ ಇಸವಿಗೆ ನೂರು ವರ್ಷಗಳು ತುಂಬಲಿದ್ದು, ರಾಜ್ಯ ಸಂಘ ದೊಡ್ಡ ಮಟ್ಟದ ಶತಮಾನೋತ್ಸವ ಆಚರಣೆ ಮಾಡಲು ತೀರ್ಮಾನ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

ಈ ಹಿಂದೆ ಪತ್ರಕರ್ತರು ಸರ್ಕಾರಗಳ ಲೋಪದೋಷಗಳ ಬಗ್ಗೆ ಬರೆದಾಗ ಜನಪ್ರತಿನಿಧಿಗಳು, ಸರ್ಕಾರದ ಅಧಿಕಾರಿಗಳಿಂದ ಸ್ಪಂದನೆ ಸಿಗುತ್ತಿತ್ತು. ಆದರೆ ಇವತ್ತು ಪತ್ರಿಕೋದ್ಯಮವನ್ನು ನೋಡುವ ರೀತಿ ಬೇರೆಯಾಗಿದೆ. ಇದರ ನಡುವೆಯೂ ಕೆಲವು ಪತ್ರಕರ್ತರು ತಮ್ಮ ವೃತ್ತಿಗೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತಿರುವುದರಿಂದ ಪತ್ರಿಕೋದ್ಯಮ ಇನ್ನೂ ಜೀವಂತವಾಗಿದೆ ಎಂದು ಹೇಳಿದರು.

ನಿಕಟ ಪೂರ್ವ ಅಧ್ಯಕ್ಷರಾದ ಬಿ.ವಿ.ಗೋಪಿನಾಥ್ ಮಾತನಾಡಿ, ಮಹನೀಯರ ಆಚರಣೆಗಳು ಕೇವಲ ತೋರಿಕೆಗೆ ಆಗದೆ ಅವರು ನಡೆದುಕೊಂಡ ರೀತಿಯಲ್ಲಿ ಬಾಳುವಂತಾಗಬೇಕು, ನಾವು ಪ್ರತಿ ವಿಷಯವನ್ನು ಬರೆಯುವಂತಾಗಬೇಕು, ಸಮಾಜಕ್ಕೆ ಏನಾದರೂ ಕೊಡುವಂತಾಗಬೇಕು, ಕನಿಷ್ಟ ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗದ ಬಗ್ಗೆ ಅರಿತರೆ ಬದುಕಿನ ಭಾಗ್ಯದ ಅರಿವು ಆಗುತ್ತದೆ.

ಡಿ.ವಿ.ಜಿ ಯವರ ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವಂತೆ ಸಮಾಜಕ್ಕೆ ನೀಡಿ ಬದುಕಿದವರು. ಅದರಂತೆ ನಾವು ನಡೆದುಕೊಳ್ಳುತ್ತಿದ್ದೀವ ಎಂದು ಯೋಜಿಸಬೇಕು. ಅವರ ಮಂಕುತಿಮ್ಮನ ಕಗ್ಗ ಸಂಗ್ರಹ ಕನ್ನಡದ ಭಗವದ್ಗೀತೆ, ರಾಮಾಯಣ, ಮಹಾಭಾರತ ಇದ್ದಂತೆ. ದಾರ್ಶನಿಕರು ಜೀವನ ನಮಗೆ ದಾರಿ ದೀಪವಾಗಲಿ ಎಂದು ಹೇಳಿದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ, ಡಿ.ವಿ.ಜಿ ಯವರ ಹಾದಿಯಲ್ಲಿ ನಾವು ಸಾಗೋಣ ಆಗ ಮಾತ್ರ ನಮ್ಮ ಪತ್ರಿಕೋದ್ಯಮಕ್ಕೆ ಬೆಲೆ ಸಿಗುತ್ತದೆ ಎಂದರು.

ಹಿರಿಯ ಪತ್ರಕರ್ತ ಅನಂತರಾಮ ಮಾತನಾಡಿ, ಎಲ್ಲಾ ಅರ್ಹತೆ ಇರುವ ಡಿ.ವಿ.ಜಿ ರವರಿಗೆ ಜ್ಞಾನ ಪೀಠ ಪ್ರಶಸ್ತಿ ನೀಡಬೇಕಾಗಿತ್ತು. ಕನಿಷ್ಟ ಅವರಿಗೆ ಮರಣೋತ್ತರ ಜ್ಞಾನ ಪೀಠ ಪ್ರಶಸ್ತಿ ನೀಡಲಿ. ಇದರ ಬಗ್ಗೆ ಸರ್ಕಾರದ ಗಮನ ಸೆಳೆಯುವ ಕೆಲಸ ಆಗಬೇಕಾಗಿದೆ ಎಂದರು.

೯೪೫ ಕಗ್ಗಗಳನ್ನು ಓದಿದಾಗ ಅರ್ಥ ಮಾಡಿ ಕೊಳ್ಳುವುದು ಕಷ್ಟ ಆದರೂ ಕಗ್ಗದ ತಾತ್ಪರ್ಯ ಓದಿದಾಗ ನಾವು ಹೇಗೆ ಬದುಕ ಬೇಕು ಎಂದು ಅರ್ಥ ಆಗುತ್ತದೆ.ಕಗ್ಗಗಳ ಬಗ್ಗೆ ಪತ್ರಕರ್ತರ ಸಂಘದ ಪದಾಧಿಕಾರಿಗಳು ವಿಚಾರ ಸಂಕಿರಣಗಳನ್ನು ನಡೆಸಿದರೆ ನಮ್ಮಗಳ ಜ್ಞಾನ ಹೆಚ್ಚಿಸಿಕೊಳ್ಳಲು ಅನುಕೂಲ ಆಗುತ್ತದೆ. ಇದರ ಬಗ್ಗೆ ಪತ್ರಕರ್ತರ ಸಂಘದ ಪದಾಧಿಕಾರಿಗಳು ಗಮನ ಹರಿಸುವಂತೆ ಮನವಿ ಮಾಡಿದರು.

ಪತ್ರಕರ್ತ ಕೋ.ನಾ.ಮಂಜುನಾಥ್ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಹುಟ್ಟಿದ ಡಿ.ವಿ.ಜಿ ರವರು ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿದಂತವರು, ಅವರ ಜನ್ಮ ದಿನಾಚರಣೆಯನ್ನು ಪ್ರತಿ ವರ್ಷವೂ ಆಚರಣೆ ಮಾಡುತ್ತೇವೆ ಆದರೆ ಡಿ.ವಿ.ಜಿ ರವರ ಹಾದಿಯಲ್ಲಿ ನಡೆಯುತ್ತಿದೇವ, ಅವರ ಆದರ್ಶಗಳನ್ನು ಅಳವಡಿಸಿಕೊಂಡಿದ್ದೇವ ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ ಎಂದರಲ್ಲದೆ ಡಿ.ವಿ.ಜಿ ಯವರ ಆದರ್ಶಗಳನ್ನು ಪಾಲಿಸೋಣ ಎಂದರು.

ಕಾರ್ಯಕ್ರಮದ ಮುನ್ನ ಡಿ.ವಿ.ಜಿ ಯವರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸುವ ಮೂಲಕ ಗೌರವ ಸಮರ್ಪಣೆ ನೆರವೇರಿಸಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯ ಸಿ.ವಿ ನಾಗರಾಜ್ ಅವರು ನಿರೂಪಿಸಿದ ಕಾರ್ಯಕ್ರಮ ದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎ.ಜಿ.ಸುರೇಶ್ಕುಮಾರ್, ಖಜಾಂಚಿ ಬಿ.ಎಲ್.ರಾಜೇಂದ್ರಸಿಂಹ ಸೇರಿದಂತೆ ಹಿರಿಯ ಹಾಗೂ ಕಿರಿಯ ಪತ್ರಕರ್ತರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande