
ಕೋಲಾರ,೧೭ಮಾರ್ಚ (ಹಿ.ಸ.)
ಆಂಕರ್ ; ಒಳ ಮೀಸಲಾತಿ ರೋಸ್ಟರ್ ಪದ್ಧತಿಯನ್ನು ವಿರೋಧಿಸಿ, ಹಳೆಯ ಮೀಸಲಾತಿಯನ್ನು ಮುಂದುವರಿಸುವಂತೆ ಒತ್ತಾಯಿಸಿ, ಬಂಜಾರ ಭೋವಿ ಕೊರಮ ಕೊರಚ ಚರ್ಮಕಾರ ಸೂಕ್ಷ್ಮ ಪರಿಶಿಷ್ಟ ಜಾತಿಗಳ ನೇತೃತ್ವದಲ್ಲಿ ಮಾರ್ಚ್ ೨೪ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಸಮುದಾಯದಿಂದ ಯಶಸ್ವಿಗೆ ಮುಂದಾಗಬೇಕು ಎಂದು ಭೋವಿ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಸಿ.ವಿ ಗೋಪಾಲ್ ಹೇಳಿದರು.
ಕೋಲಾರದಲ್ಲಿ ಹಳೆಯ ಮೀಸಲಾತಿಯನ್ನು ಮುಂದುವರಿಸಲು ಮಾರ್ಚ್ ೨೪ ರಂದು ಬೆಂಗಳೂರು ಚಲೋ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಹಳೆಯ ಮೀಸಲಾತಿಯ ನಿಯಮ ಶೇ. ೫೦ರ ಅನ್ವಯ ನೇಮಕಾತಿ ಮತ್ತು ಶೈಕ್ಷಣಿಕ ಪ್ರವೇಶ ಪ್ರಕ್ರಿಯೆಯನ್ನು ಮುಂದು ವರಿಸುವುದಾಗಿ ರಾಜ್ಯ ಸರ್ಕಾರ ಆದೇಶಿಸಿರು ವುದು ಸ್ವಾಗತವಾಗಿದೆ, ತ್ವರಿತವಾಗಿ ನೇಮಕಾತಿ ಆಧಿಸೂಚನೆ ಹೊರಡಿಸಿ, ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಬೇಕು ಎಂದರು.
ದೇಶ ವ್ಯಾಪಿ ನಡೆಯುತ್ತಿರುವ ಜನಗಣತಿಯ ಸಮಗ್ರ ದತ್ತಾಂಶ ಬರುವವರೆಗೂ ಒಳ ಮೀಸಲಾತಿ ಕುರಿತು ಏಕ ಪಕ್ಷ ನಿರ್ಧಾರ ಮಾಡಬಾರದು ಜತೆಯಲ್ಲೇ ರಾಜ್ಯದಲ್ಲಿ ಒಳ ಮೀಸಲಾತಿ ಹಂಚಿಕೆಯ ಪ್ರಕ್ರಿಯೆ ಪ್ರಾರಂಭಿಸುವ ಮುನ್ನ ಸಮುದಾಯದ ಮುಖಂಡರ ಜೊತೆಗೆ ಸಮಾಲೋಚನೆ ಸಭೆ ನಡೆಸಬೇಕೆಂದು ರಾಜ್ಯ ಸರಕಾರವನ್ನು ಆಗ್ರಹಿಸಿದರು.
ಶಿಕ್ಷಣ ಪ್ರವೇಶ ಹಾಸ್ಟೆಲ್ ಪ್ರವೇಶ ಮತ್ತು ಉದ್ಯೋಗ ಮೀಸಲಾತಿ ಕುರಿತು ಇತ್ತೀಚಿಗೆ ಹೊರಡಿಸಿರುವ ಎಲ್ಲಾ ರೋಸ್ಟರ್ ಹಂಚಿಕೆ ಆದೇಶ ಸುತ್ತೋಲೆಗಳನ್ನು ಹಿಂಪಡೆಯಬೇಕು ಈಗಾಗಲೇ ಹೊರಡಿಸಿರುವ ವಿವಿಧ ನೇಮಕಾತಿ ಆದಿ ಸೂಚನೆಗಳನ್ನು ರದ್ದುಗೊಳಿಸಬೇಕು ಪರಿಶಿಷ್ಟ ಜಾತಿ ಪ್ರವರ್ಗದ ಎಬಿಸಿ ಎಂದು ನಮೂದಿಸಿ ನೀಡಲಾಗಿರುವ ಜಾತಿ ಪ್ರಮಾಣ ಪತ್ರಗಳನ್ನು ಹಿಂಪಡೆಯಬೇಕು ಹಳೆ ಜಾತಿ ಪ್ರಮಾಣ ಪತ್ರಗಳನ್ನು ಪರಿಗಣಿಸಬೇಕೆಂದು ಮನವಿ ಮಾಡಿದರು.
ಭೋವಿ ಕ್ಷೇಮಾಭಿವೃದ್ಧಿ ಸಂಘದ ಯುವ ವೇದಿಕೆ ಜಿಲ್ಲಾಧ್ಯಕ್ಷ ಎಲ್. ಜಿ. ಮುನಿರಾಜು ಮಾತನಾಡಿ, ಈ ಹಿಂದೆ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಶೇಕಡ ೧೭ರಷ್ಟು ಮತ್ತು ಪರಿಶಿಷ್ಟ ಪಂಗಡಗಳ ಶೇಕಡ ೭ರಷ್ಟು ಮೀಸಲಾತಿಯನ್ನು ಹೆಚ್ಚಳ ಮಾಡಿರುವ ಆದೇಶವನ್ನು ಸಂವಿಧಾನದ ಷೆಡ್ಯೂಲ್ ಒಂಬತ್ ನಲ್ಲಿ ಸೇರಿಸಲು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಪ್ರಧಾನಿಗಳ ಬಳಿ ನಿಯೋಗ ಹೋಗಬೇಕು ಕೇಂದ್ರ ಸರ್ಕಾರ ಮನವೊಲಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯ ಅಂಕಿ ಅಂಶಗಳು ಅಸ್ಪಷ್ಟ ಮತ್ತು ಸಾಲು ಸಾಲು ತಪ್ಪುಗಳಿಂದ ಕೂಡಿರುವಂತೆ ಭಾಸವಾಗುತ್ತಿದ್ದು, ತಕ್ಷಣ ಈ ಸಮೀಕ್ಷೆಯ ತಾಲೂಕುವಾರು ಸಮಗ್ರ ದತ್ತಾಂಶ ಮಾಹಿತಿಗಳನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಪರಿಶಿಷ್ಟರಿಗೆ ಮೀಸಲಾಗಿರುವ ಎಸ್ಸಿಪಿ ಮತ್ತು ಟಿಎಸ್ಪಿ ಅನುದಾನವನ್ನು ಅನ್ಯ ಯೋಜನೆಗಳಿಗೆ ವರ್ಗಾವಣೆ ತಡೆಗಟ್ಟಲು ಕಾನೂನು ತಿದ್ದುಪಡೆ ಮಾಡಬೇಕು ಯಾರದೋ ಒತ್ತಡಕ್ಕೆ ಮಣಿದು ಅಪ್ರಾಯೋಗಿಕವಾಗಿರುವ ಈ ಒಳ ಮೀಸಲಾತಿಯನ್ನು ಏಕಪಕ್ಷವಾಗಿ ವರ್ಗಿಕರಣ ಮಾಡಬಾರದು ಮೂಲ ಮೀಸಲಾತಿಯ ಸಂರಕ್ಷಣೆಗಾಗಿ ನಾಡಿನ ಬಂಜಾರ, ಭೋವಿ, ಚರ್ಮಕಾರ, ಸಮಾಗಾರ, ಕೊರಮ, ಕೊರಚ, ಬಲಗೈ ಛಲವಾದಿ, ಅಲೆಮಾರಿ ಸೂಕ್ಷ್ಮ ಸಮುದಾಯಗಳು ಜಂಟಿಯಾಗಿ ಆಯೋಜಿಸಿರುವ ಐತಿಹಾಸಿಕ ಹೋರಾಟದಲ್ಲಿ ಪ್ರತಿಯೊಂದು ಗ್ರಾಮದ ಬಂಧುಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಬಂಗಾರಪೇಟೆ ತಾಲೂಕು ಅಧ್ಯಕ್ಷ ಕೆ.ಜಿ ಮಂಜುನಾಥ್, ಕೋಲಾರ ತಾಲೂಕು ಅಧ್ಯಕ್ಷ ಚೆಲುವನಳ್ಳಿ ಶ್ರೀನಿವಾಸಪ್ಪ, ಜಿಲ್ಲಾ ಕಾರ್ಯದರ್ಶಿ ಎಂ. ರವಿ, ಜಿಲ್ಲಾ ಉಪಾಧ್ಯಕ್ಷ ಎಸ್ ನಾರಾಯಣ್, ಜಿಲ್ಲಾ ಖಜಾಂಚಿ ಶ್ರೀನಾಥ್, ಜಿಲ್ಲಾ ಸಂಘಟನಾ ಸಂಚಾಲಕ ಮಾರಪ್ಪ, ಸಹ ಸಂಚಾಲಕ ಚಲಪತಿ,ಯುವ ವೇದಿಕೆಯ ಬಂಗಾರಪೇಟೆ ತಾಲೂಕ ಅಧ್ಯಕ್ಷ ವಿ ನಾರಾ ಯಣಸ್ವಾಮಿ ಕೆ ಜಿ ಎಫ್ ಯುವ ವೇದಿಕೆಯ ಅಧ್ಯಕ್ಷ ಪ್ರಸಾದ್, ಮುಳಬಾಗಲು ಯುವ ವೇದಿಕೆ ಅಧ್ಯಕ್ಷ ಶ್ರೀನಾಥ್, ಬಂಗಾರಪೇಟೆ ಎಂಎಂ ಮಂಜು, ಶಿವಕುಮಾರ್ ಅಮರಾವತಿ ಮಂಜು ನಾಥ್, ಬಂಗಾರಪೇಟೆ ವಿಕ್ಕಿ ಬಂಗಾರಪೇಟೆ ನಗರಸಭಾ ಅಧ್ಯಕ್ಷ ಗೋವಿಂದು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್