
ಗದಗ, 17 ಮಾರ್ಚ್ (ಹಿ.ಸ.)
ಆ್ಯಂಕರ್: ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ಪ್ರದೇಶದಲ್ಲಿ ಕಣೇರಿ ಕಾಡಸಿದ್ಧೇಶ್ವರ ಮಠದ ಶ್ರೀ ಕಾಡಸಿದ್ಧೇಶ್ವರ ಸ್ವಾಮಿಗಳ ಹೆಸರನ್ನು ಉಲ್ಲೇಖಿಸಿ ತೋಂಟದಾರ್ಯ ಮಠದ ವಿರುದ್ಧ ಮಾಡಲಾಗಿದೆ ಎನ್ನಲಾದ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ, ಡಂಬಳ-ಗದಗದ ಶ್ರೀ ಜಗದ್ಗುರು ತೋಂಟದಾರ್ಯ ಮಠದ ಶ್ರೀ ತೋಂಟದ ಸಿದ್ಧರಾಮ ಸ್ವಾಮಿಗಳು ಅಧಿಕೃತ ಪ್ರಕಟಣೆ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.
ಇತ್ತೀಚೆಗೆ ನೀಡಿದ ಹೇಳಿಕೆಯಲ್ಲಿ “ಒಬ್ಬ ಸ್ವಾಮಿ” ಎಂಬ ಏಕವಚನ ಶಬ್ದದಿಂದ ಆರಂಭಿಸಿ, ತೋಂಟದ ಮಠವು ಮರಾಠಿ ಭಾಷೆಯ ಕುರಾನನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದೆ ಹಾಗೂ ಭಗವದ್ಗೀತೆಯನ್ನು ನಿಂದಿಸಿದೆ ಎಂದು ಕಣೇರಿ ಶ್ರೀಗಳು ಆರೋಪಿಸಿರುವುದಾಗಿ ತಿಳಿದುಬಂದಿದೆ. ಈ ಕುರಿತು ಪ್ರತಿಕ್ರಿಯಿಸಿದ ತೋಂಟದ ಶ್ರೀಗಳು, “ಈ ಆರೋಪಗಳು ಸಂಪೂರ್ಣ ಆಧಾರರಹಿತವಾಗಿದ್ದು, ವಾಸ್ತವಕ್ಕೆ ವಿರುದ್ಧವಾಗಿವೆ” ಎಂದು ಸ್ಪಷ್ಟಪಡಿಸಿದ್ದಾರೆ.
“ನಾವು ಅನುವಾದಿಸಿರುವುದು ಕುರಾನ ಅಲ್ಲ; ಹಿಂದೂಧರ್ಮದ ಶ್ರೇಷ್ಠ ಸಂತ ವಿನೋಬಾ ಭಾವೆ ಅವರ ‘ಇಸ್ಲಾಂ ಧರ್ಮ ಸಂದೇಶ’ ಎಂಬ ಹಿಂದಿ ಕೃತಿ. ಅದು ಮರಾಠಿ ಭಾಷೆಯಲ್ಲಿಯೂ ಅಲ್ಲ, ಕುರಾನವೂ ಅಲ್ಲ. ಅದರ ಜೊತೆಗೆ ಆ ಕೃತಿಯನ್ನು ನಮ್ಮ ಮಠದಿಂದ ಪ್ರಕಟಣೆ ಮಾಡಿಲ್ಲ” ಎಂದು ವಿವರಿಸಿದ್ದಾರೆ.
ಇದೇ ಕೃತಿ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಲೋಕಾರ್ಪಣೆಗೊಂಡಿದ್ದು, ಆ ಕಾರ್ಯಕ್ರಮಕ್ಕೆ ಕಣೇರಿ ಶ್ರೀಗಳಿಗೂ ಆಹ್ವಾನ ನೀಡಲಾಗಿತ್ತು ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.
ಭಗವದ್ಗೀತೆಯನ್ನು ನಿಂದಿಸಿರುವುದಾಗಿ ಮಾಡಿರುವ ಆರೋಪವನ್ನೂ ತಳ್ಳಿಹಾಕಿದ ಶ್ರೀಗಳು, “ನಾವು ಯಾವತ್ತೂ ಯಾವುದೇ ಧರ್ಮ, ದೇವರು ಅಥವಾ ಭಗವದ್ಗೀತೆಯನ್ನು ನಿಂದಿಸಿರುವುದಿಲ್ಲ. ಆ ರೀತಿಯ ಆರೋಪಗಳು ಕುತ್ಸಿತ ಮನೋಭಾವದಿಂದ ಮಾಡಲ್ಪಟ್ಟ ಸುಳ್ಳುಗಳಾಗಿವೆ. ಬದಲಾಗಿ ಭಾರತೀಯ ತತ್ತ್ವಶಾಸ್ತ್ರ ಕೃತಿಯಲ್ಲಿ ಡಾ. ಚಂದ್ರಧರ ಶರ್ಮಾ ಅವರ ಭಗವದ್ಗೀತೆಯ ಭಾಗವನ್ನು ನಾವು ಸುಂದರವಾಗಿ ಅನುವಾದಿಸಿ ಕೊಟ್ಟಿದ್ದೇವೆ. ಅಲ್ಲದೆ, ಪೂಜ್ಯ ಸಿದ್ಧೇಶ್ವರ ಶ್ರೀಗಳ ಭಗವದ್ಗೀತಾ ಪ್ರವಚನದ ಕರಡು ಪ್ರತಿಯನ್ನು ಶ್ರದ್ಧೆಯಿಂದ ತಿದ್ದಿ ಕೊಟ್ಟಿದ್ದೇವೆ” ಎಂದು ಹೇಳಿದರು.
ಪದೇ ಪದೇ ಈ ರೀತಿಯ ಆಧಾರರಹಿತ ಆರೋಪಗಳನ್ನು ಮಾಡುವುದು ಒಬ್ಬ ವ್ಯಕ್ತಿಯ ಚಾರಿತ್ರ್ಯ ಹನನ ಮಾಡಲು ಹಾಗೂ ಸಮಾಜದಲ್ಲಿ ದ್ವೇಷ ಸೃಷ್ಟಿಸಲು ಉದ್ದೇಶಿತ ಕ್ರಮವಾಗಿದ್ದು, ಇದು ಮೂರನೇ ಬಾರಿ ನಡೆಯುತ್ತಿದೆ ಎಂದು ತೋಂಟದ ಶ್ರೀಗಳು ಆರೋಪಿಸಿದ್ದಾರೆ. “ಜನರು ಇಂತಹ ಸುಳ್ಳು ಪ್ರಚಾರಗಳನ್ನು ನಂಬಬಾರದು ಎಂಬ ಉದ್ದೇಶದಿಂದ ಹಾಗೂ ಶ್ರೀಮಠದ ಭಕ್ತರ ಆಗ್ರಹದ ಮೇರೆಗೆ ಈ ಸ್ಪಷ್ಟೀಕರಣ ನೀಡಲಾಗಿದೆ” ಎಂದು ತಿಳಿಸಿದ್ದಾರೆ.
ಇದೇ ವೇಳೆ, ಕಣೇರಿ ಶ್ರೀಗಳ ಹೇಳಿಕೆಗಳು ಸಮಾಜದಲ್ಲಿ ಅಶಾಂತಿ ಹಾಗೂ ಗೊಂದಲಕ್ಕೆ ಕಾರಣವಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, “ಇಂತಹ ಹೇಳಿಕೆಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಈಗಾಗಲೇ ಸೂಚಿಸಿದ್ದರೂ ಸಹ ಅವರು ಪದೇ ಪದೇ ಅನಾಗರಿಕವಾಗಿ ವರ್ತಿಸುತ್ತಿರುವುದು ನೋವಿನ ಸಂಗತಿ” ಎಂದು ಹೇಳಿದರು.
ಒಟ್ಟಾರೆ, ಈ ವಿವಾದ ಧಾರ್ಮಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಪರಸ್ಪರ ಗೌರವ ಹಾಗೂ ಸಹಿಷ್ಣುತೆ ಕಾಪಾಡುವ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP