
ಬಾಗಲಕೋಟೆ, 17 ಮಾರ್ಚ್ (ಹಿ.ಸ.)
ಆ್ಯಂಕರ್ : ಎಚ್.ವೈ. ಮೇಟಿ ಅವರ ಅಗಲಿಕೆಯಿಂದ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ. ಅವರ ಕುಟುಂಬಕ್ಕೆ ಟಿಕೆಟ್ ನೀಡಿದರೆ ಸಂಪೂರ್ಣ ಬೆಂಬಲ ನೀಡುತ್ತೇನೆ. ಆದರೆ ಪಕ್ಷ ಬದಲಾವಣೆ ಬಯಸಿ ಬೇರೆ ಅಭ್ಯರ್ಥಿಯನ್ನು ಪರಿಗಣಿಸಿದರೆ ನನಗೆ ಅವಕಾಶ ನೀಡಬೇಕು ಎಂದು ಬಾಗಲಕೋಟೆ ಕೆಪಿಸಿಸಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ರಕ್ಷಿತಾ ಭರತ ಕುಮಾರ ಈಟಿ ಮನವಿ ಮಾಡಿದ್ದಾರೆ.
ಈ ಕುರಿತು ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, “ನಾನು ಮೇಟಿ ಅವರ ಕುಟುಂಬದಲ್ಲಿ ಜನಿಸದಿದ್ದರೂ, ಅವರು ನನ್ನನ್ನು ಕುಟುಂಬ ಸದಸ್ಯೆಯಂತೆ ನೋಡಿಕೊಂಡಿದ್ದರು. ನನ್ನ ರಾಜಕೀಯ ಬೆಳವಣಿಗೆಗೆ ಅವರು ಬೆನ್ನೆಲುಬಾಗಿ ನಿಂತಿದ್ದರು” ಎಂದು ಸ್ಮರಿಸಿದರು.
ಕಳೆದ 17 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಿರುವುದಾಗಿ ತಿಳಿಸಿದ ಅವರು, ಏಳು ವರ್ಷ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದೇನೆ ಎಂದರು. ಈ ಹಿಂದೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೇಳಿದ್ದೆ. ಆಗ ವರಿಷ್ಠರು ಮುಂದಿನ ದಿನಗಳಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು ಎಂದು ಹೇಳಿದರು.
ಈಗ ಉಪಚುನಾವಣೆಯಲ್ಲಿ ಮೇಟಿ ಕುಟುಂಬಕ್ಕೆ ಟಿಕೆಟ್ ನೀಡಿದರೆ ತಮ್ಮ ಸಂಪೂರ್ಣ ಬೆಂಬಲವಿದ್ದು, ಪಕ್ಷ ಬದಲಾವಣೆ ನಿರ್ಧಾರ ಕೈಗೊಂಡರೆ ತಮ್ಮನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಟಿಕೆಟ್ ಪೈಪೋಟಿ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ರಕ್ಷಿತಾ ಈಟಿ ಅವರ ಈ ಹೇಳಿಕೆ ಮತ್ತಷ್ಟು ಪಕ್ಷಕ್ಕೆ ತಲೆ ನೋವಾಗಿ ಪರಿಣಮಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande