

ಬೆಂಗಳೂರು, 15 ಮಾರ್ಚ್ (ಹಿ.ಸ.):
ಆ್ಯಂಕರ್:ಒಡಿಶಾ ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಯತ್ನಿಸಿದ್ದ ಆರೋಪದಲ್ಲಿ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಬೆಂಗಳೂರಿನ ಬಳಿ ಬಿಡದಿ ಸಮೀಪದ ವಂಡರ್ಲಾ ರೆಸಾರ್ಟ್ ನಲ್ಲಿ ಭಾನುವಾರ ಬೆಳಕಿಗೆ ಬಂದಿದೆ.
ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ “ಆಪರೇಷನ್ ಕಮಲ” ಆತಂಕದ ನಡುವೆ ಒಡಿಶಾದ ಕಾಂಗ್ರೆಸ್ ಶಾಸಕರು ಮಾರ್ಚ್ 12ರಿಂದ ಬಿಡದಿಯ ವಂಡರ್ಲಾ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದರು. ಈ ಸಂದರ್ಭದಲ್ಲಿ ನಾಲ್ವರು ವ್ಯಕ್ತಿಗಳು ಶನಿವಾರ ರಾತ್ರಿ ರೆಸಾರ್ಟ್ನಲ್ಲಿ ರೂಂ ಬುಕ್ ಮಾಡಿಕೊಂಡು ಉಳಿದುಕೊಂಡಿದ್ದರು. ಭಾನುವಾರ ಬೆಳಿಗ್ಗೆ ಅವರಲ್ಲಿ ಒಬ್ಬರು ಒಡಿಶಾ ಕಾಂಗ್ರೆಸ್ ಶಾಸಕನೊಂದಿಗೆ ಮಾತುಕತೆ ನಡೆಸಿದ ಬಳಿಕ ಫೋಟೋ ತೆಗೆದುಕೊಳ್ಳುವುದನ್ನು ಸ್ಥಳೀಯ ಕಾಂಗ್ರೆಸ್ ಮುಖಂಡರು ಗಮನಿಸಿ ಅನುಮಾನಗೊಂಡಿದ್ದಾರೆ.
ನಂತರ ಅವರನ್ನು ಪ್ರಶ್ನಿಸಿದ ವೇಳೆ ಇಬ್ಬರು ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದು, ಇಬ್ಬರು ಸಿಕ್ಕಿಬಿದ್ದಿದ್ದಾರೆ. ಬಿರೇಂದ್ರ ಪ್ರಸಾದ್ ಮತ್ತು ಅಜಿತ್ ಕುಮಾರ್ ಸಾಹು ಎಂಬವರು ಸಿಕ್ಕಿಬಿದ್ದಿದ್ದು, ಅವರನ್ನು ಬಿಡದಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಒಡಿಶಾ ಕಾಂಗ್ರೆಸ್ ಸಂಸದ ಸಪ್ತಗಿರಿ ಶಂಕರ್ ಉಲಕ, “ಬಿಜೆಪಿಯವರು ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಯತ್ನಿಸಿದ್ದಾರೆ. ನಮ್ಮ ಶಾಸಕರಿಗೆ ₹5 ಕೋಟಿ ಹಣದ ಆಫರ್ ನೀಡಲಾಗಿದೆ. ಖಾಲಿ ಚೆಕ್ ಮೂಲಕ ಬಿಜೆಪಿಗೆ ಮತ ಹಾಕುವಂತೆ ಒತ್ತಡ ಹಾಕಲಾಗಿದೆ. ಆದರೆ ನಮ್ಮ ಶಾಸಕರು ಯಾವುದೇ ಆಮಿಷಕ್ಕೆ ಒಳಗಾಗಿಲ್ಲ. ಆಮಿಷ ತೋರಲು ಬಂದವರನ್ನು ಸ್ಥಳೀಯ ಕಾಂಗ್ರೆಸ್ ಮುಖಂಡರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ,” ಎಂದು ತಿಳಿಸಿದ್ದಾರೆ.
ಈ ಕುರಿತು ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ, “ನಮ್ಮ ಒಡಿಶಾ ಶಾಸಕರು ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದರು. ಬಿಜೆಪಿ ಸಂಬಂಧಿತ ವ್ಯಕ್ತಿಗಳು ರೂಂ ಬುಕ್ ಮಾಡಿಕೊಂಡು ₹5 ಕೋಟಿ ಆಮಿಷ ನೀಡಲು ಯತ್ನಿಸಿದ್ದಾರೆ. ಖಾಲಿ ಚೆಕ್ ಸಮೇತ ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದೇವೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ತಿಳಿಸಿದ್ದಾರೆ.
ಆಪರೇಷನ್ ಕಮಲದ ಆತಂಕದ ಹಿನ್ನೆಲೆಯಲ್ಲಿ ರೆಸಾರ್ಟ್ನಲ್ಲಿ ಇದ್ದ ಕಾಂಗ್ರೆಸ್ ಶಾಸಕರನ್ನು ಬಳಿಕ ಪೊಲೀಸ್ ಭದ್ರತೆಯಲ್ಲಿ ಬೆಂಗಳೂರಿನ ಸದಾಶಿವನಗರದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಬಸ್ ಮೂಲಕ ಸ್ಥಳಾಂತರಿಸಲಾಗಿದೆ. ಈ ವೇಳೆ ಎಂಟು ಶಾಸಕರನ್ನು ಪೊಲೀಸ್ ಎಸ್ಕಾರ್ಟ್ನಲ್ಲಿ ಕರೆತರಲಾಗಿದೆ.
ಇದೇ ವೇಳೆ ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀನಿವಾಸ ಗೌಡ ರೆಸಾರ್ಟ್ಗೆ ಭೇಟಿ ನೀಡಿ, ಪೊಲೀಸ ವಶದಲ್ಲಿರುವ ಇಬ್ಬರು ವ್ಯಕ್ತಿಗಳ ವಿಚಾರಣೆ ನಡೆಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa