ದೆಹಲಿ–ಕೋಲ್ಕತ್ತಾದಲ್ಲಿ ಚಿನ್ನ ಕಳ್ಳಸಾಗಣೆ ಜಾಲ ಭೇದನೆ:ಆರು ಮಂದಿ ಬಂಧನ
ನವದೆಹಲಿ, 15 ಮಾರ್ಚ್ (ಹಿ.ಸ.): ಆ್ಯಂಕರ್: ಡಿಆರ್‌ಐ ಅಧಿಕಾರಿಗಳು ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿದೇಶಿ ಚಿನ್ನದ ಕಳ್ಳಸಾಗಣೆ ಜಾಲವನ್ನು ಭೇದಿಸಿ, ಆರು ಮಂದಿಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಚಿನ್ನ, ಬೆಳ್ಳಿ ಹಾಗೂ ಭಾರತೀಯ ಕರೆನ್ಸಿ ಸೇರಿ ಒಟ್ಟು ₹14.13 ಕೋಟಿ
Dri


ನವದೆಹಲಿ, 15 ಮಾರ್ಚ್ (ಹಿ.ಸ.):

ಆ್ಯಂಕರ್:

ಡಿಆರ್‌ಐ ಅಧಿಕಾರಿಗಳು ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿದೇಶಿ ಚಿನ್ನದ ಕಳ್ಳಸಾಗಣೆ ಜಾಲವನ್ನು ಭೇದಿಸಿ, ಆರು ಮಂದಿಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಚಿನ್ನ, ಬೆಳ್ಳಿ ಹಾಗೂ ಭಾರತೀಯ ಕರೆನ್ಸಿ ಸೇರಿ ಒಟ್ಟು ₹14.13 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಡಿಆರ್‌ಐ ನೀಡಿದ ಮಾಹಿತಿ ಪ್ರಕಾರ, ಕಳ್ಳಸಾಗಣೆ ಮಾಡಿದ ವಿದೇಶಿ ಚಿನ್ನವನ್ನು ರೈಲು ಮಾರ್ಗದ ಮೂಲಕ ನವದೆಹಲಿಗೆ ತರಲಾಗುತ್ತಿತ್ತು. ಬಳಿಕ ಅಕ್ರಮ ಘಟಕಗಳಲ್ಲಿ ಚಿನ್ನವನ್ನು ಕರಗಿಸಿ ಅದರ ಮೇಲಿರುವ ಗುರುತುಗಳನ್ನು ತೆಗೆದುಹಾಕಿ ಸ್ಥಳೀಯ ಮಾರುಕಟ್ಟೆಯಲ್ಲಿ ರಹಸ್ಯವಾಗಿ ಮಾರಾಟ ಮಾಡಲಾಗುತ್ತಿತ್ತು.

ಕಾರ್ಯಾಚರಣೆಯಲ್ಲಿ ಒಟ್ಟು ₹13.41 ಕೋಟಿ ಮೌಲ್ಯದ 8286.81 ಗ್ರಾಂ ಚಿನ್ನ, ₹19.67 ಲಕ್ಷ ಮೌಲ್ಯದ 7350.4 ಗ್ರಾಂ ಬೆಳ್ಳಿ ಮತ್ತು ₹51,74,100 ಮೌಲ್ಯದ ಭಾರತೀಯ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಕ್ರಮವನ್ನು ಅಬಕಾರಿ ಕಾಯ್ದೆ, 1962 ನ ನಿಯಮಗಳಡಿ ಕೈಗೊಳ್ಳಲಾಗಿದೆ.

ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಡಿಆರ್‌ಐ ಅಧಿಕಾರಿಗಳು ದೆಹಲಿ ರೇಲ್ವೆ ನಿಲ್ದಾಣದಲ್ಲಿ ಕೋಲ್ಕತ್ತಾದಿಂದ ರೈಲಿನಲ್ಲಿ ಬಂದ ಪ್ರಯಾಣಿಕನನ್ನು ತಡೆದು ಪರಿಶೀಲನೆ ನಡೆಸಿದರು. ಆತ ವಿದೇಶಿ ಗುರುತು ಹೊಂದಿದ ಚಿನ್ನವನ್ನು ಹೊರಗಿನ ವ್ಯಕ್ತಿಗೆ ಒಪ್ಪಿಸಲು ಸಾಗಿಸುತ್ತಿದ್ದುದಾಗಿ ಪತ್ತೆಯಾಯಿತು. ಇದರಿಂದ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿ ಹಾಗೂ ಸ್ವೀಕರಿಸಲು ಬಂದ ವ್ಯಕ್ತಿಯನ್ನು ಬಂಧಿಸಲಾಯಿತು.

ತನಿಖೆ ಮುಂದುವರಿದಂತೆ ದೆಹಲಿಯ ಹಲವು ಸ್ಥಳಗಳಲ್ಲಿ ದಾಳಿ ನಡೆಸಿ ಅಕ್ರಮ ಚಿನ್ನ ಕರಗಿಸುವ ಘಟಕವನ್ನು ಪತ್ತೆಹಚ್ಚಲಾಯಿತು. ಅಲ್ಲಿ ವಿದೇಶಿ ಚಿನ್ನವನ್ನು ಕರಗಿಸಿ ಗುರುತುಗಳನ್ನು ಅಳಿಸಲಾಗುತ್ತಿತ್ತು. ಸ್ಥಳದಿಂದ ಹೆಚ್ಚುವರಿ ಚಿನ್ನ, ಬೆಳ್ಳಿ ಮತ್ತು ನಗದು ಹಣವನ್ನು ವಶಪಡಿಸಿಕೊಂಡಿದ್ದು, ಘಟಕದ ವ್ಯವಸ್ಥಾಪಕರನ್ನೂ ಬಂಧಿಸಲಾಗಿದೆ.

ನಂತರ ತನಿಖೆ ಕೋಲ್ಕತ್ತಾ ತನಕ ವಿಸ್ತರಿಸಲ್ಪಟ್ಟಿದ್ದು, ಅಲ್ಲಿ ಗ್ಯಾಂಗ್‌ನ ಮಾಸ್ಟರ್ ಮೈಂಡ್ ಮತ್ತೊಂದು ಅಕ್ರಮ ಕರಗಿಸುವ ಘಟಕದಲ್ಲಿ ಪತ್ತೆಯಾಗಿದ್ದಾನೆ. ಅಲ್ಲಿಂದ ಕರಗಿಸಿದ ಚಿನ್ನವನ್ನು ವಶಪಡಿಸಿಕೊಂಡು ಮಾಸ್ಟರ್ ಮೈಂಡ್ ಸೇರಿದಂತೆ ಇಬ್ಬರು ವಾಹಕರನ್ನು ಬಂಧಿಸಲಾಗಿದೆ.

ವಿಚಾರಣೆ ವೇಳೆ ಆರೋಪಿಗಳು ಕಳ್ಳಸಾಗಣೆ ಮಾಡಿದ ವಿದೇಶಿ ಚಿನ್ನವನ್ನು ಕರಗಿಸಿ ಅದರ ಗುರುತನ್ನು ಅಳಿಸಿ ಬಳಿಕ ರೈಲಿನಲ್ಲಿ ದೆಹಲಿಗೆ ಕಳುಹಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ.

ಚಿನ್ನದ ಕಳ್ಳಸಾಗಣೆ, ಸಾಗಣೆ, ಕರಗಿಸುವಿಕೆ ಮತ್ತು ಮಾರಾಟದಲ್ಲಿ ಭಾಗಿಯಾಗಿದ್ದ ಎಲ್ಲಾ ಆರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande