


ಕೊಪ್ಪಳ, 12 ಮಾರ್ಚ್ (ಹಿ.ಸ.)
ಆ್ಯಂಕರ್:
ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ 133ನೇ ದಿನದಲ್ಲಿ ನಡೆದ ಮಾಲಿನ್ಯಕಾರಕ ಕಾರ್ಖಾನೆಗಳನ್ನು ಸ್ಥಳಾಂತರ ಮಾಡಿ, ಬಲ್ಡೋಟ ಅತಿಕ್ರಮಣದಿಂದ ಬಸಾಪುರ ಕೆರೆ ಮುಕ್ತಗೊಳಿಸಿ, ತುಂಗಭದ್ರಾ ವಿಷಗೊಳಿಸಿದ ಕಾರ್ಖಾನೆಗಳನ್ನು ಸೀಜ್ ಮಾಡಿ, ಬಲ್ಡೋಟ ಹಟಾವೋ ಎನ್ನುವ ಘೋಷಣೆಯೊಂದಿಗೆ ಕಾರ್ಖಾನೆ ಬಾಧಿತ ಹಳ್ಳಿಗಳಾದ ಕಿಡದಾಳ, ಬಸಾಪುರ, ಗಿಣಿಗೇರಿ, ಕನಕಾಪುರ, ಕಾಸನಕಂಡಿ, ಹಿರೇಬಗನಾಳ, ಚಿಕ್ಕಬಗನಾಳ, ಲಾಚನಕೇರಿ, ಕುಣಕೇರಿ, ಕುಣಕೇರಿ ತಾಂಡಾ, ಹಾಲವರ್ತಿ ಗ್ರಾಮಗಳಲ್ಲಿ ಬೈಕ್ ರ್ರ್ಯಾಲಿ ನಡೆಸಿ ಕಾರ್ಖಾನೆಗಳ ಮಾಲಿನ್ಯ ಕುರಿತು ಜಾಗೃತಿ ಮೂಡಿಸಲಾಯಿತು.
ಹಿರೇಕಾಸನಕಂಡಿ ಬಹಿರಂಗ ಸಭೆಯಲ್ಲಿ ಡಾ. ಮಂಜುನಾಥ ಸಜ್ಜನ್ ರವರು ಮಾತನಾಡಿ, ಇಲ್ಲಿರುವ ಯಾವುದೇ ಕಾರ್ಖಾನೆಗಳು ಪರಿಸರ ಸ್ನೇಹಿಯಾಗಿಲ್ಲ. ಕಪ್ಪುದೂಳಿನ ಅಪಾಯಕ್ಕಿಂತ ಬಿಳಿಬಣ್ಣದ ದಟ್ಟಹೊಗೆ ಅತ್ಯಂತ ಅಪಾಯಕಾರಿಯಾದ ವಿಷಾನಿಲವಾಗಿದೆ. ಇದು ಮರಗಿಡಗಳ ಮೇಲೆ ಬಿದ್ದರೆ ಕಂಡುಬರುವುದಿಲ್ಲ. ಇದನ್ನು ಉಸಿರಾಡಿದರೆ ಖಂಡಿತ ಶ್ವಾಸಕೋಶ ಕ್ಯಾನ್ಸರ್ ಒಳಗೊಂಡು ನರರೋಗ, ಕುರುಡುತನ ಬರುತ್ತದೆ.
ನಮ್ಮಲ್ಲಿರುವ ಅಲರ್ಜಿ, ಚರ್ಮರೋಗ ಇದಕ್ಕಿಂತ ಭಯಾನಕ ರೋಗಗಳು ಕಾರ್ಖಾನೆ ಆರಂಭದ 10 ವರ್ಷಗಳ ನಂತರ ಕಾಣಿಸಿಕೊಂಡಿವೆ. ಆರಂಭದ ನಿಮ್ಮ ನಿಷ್ಕಾಳಜಿ ಇವತ್ತು ಸಾವಿನ ಅಂಚಿಗೆ ತಂದು ನಿಲ್ಲಿಸಿದೆ. ಮುಂದಿನ ಪೀಳಿಗೆ ಉಳಿಯಬೇಕಾದರೆ ಈ ವಿಷಾನಿಲ ಕಾರುವ ಕಾರ್ಖಾನೆಗಳನ್ನು ಬಂದ್ ಮಾಡಿಸುವದೇ ಏಕೈಕ ಮಾರ್ಗವಾಗಿದೆ. ಇದರಿಂದ ಮಾತ್ರವೇ ಜೀವ ಕಾಪಾಡಿಕೊಳ್ಳಲು ಸಾಧ್ಯ ಎಂದು ಸಲಹೆ ನೀಡಿದರು.
ವೇದಿಕೆಯ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಹಿರೇಬಗನಾಳ ಬಾಧಿತರನ್ನು ಉದ್ದೇಶಿಸಿ ಮಾತನಾಡಿ, ಮಾಲಿನ್ಯ ನಿಯಂತ್ರಣ ಮಂಡಳಿ ಚೇರ್ಮನ್ ನರೇಂದ್ರ ಸ್ವಾಮಿಯವರು ಯಾವುದೋ ಒತ್ತಡ ಅಥವಾ ಕಾರ್ಖಾನೆಗಳ ಆಮಿಷಕ್ಕೆ ಒಳಗಾಗಿ ಶಾಶ್ವತವಾಗಿ ಬಾಧಿತ 20 ಹಳ್ಳಿಯ ಜನರನ್ನು ಸಂತ್ರಸ್ತರನ್ನಾಗಿ ಮಾಡಬಾರದು. ತುಂಗಭದ್ರಾ ತಟದಲ್ಲಿ ಈ ಕಾರ್ಖಾನೆಗಳು ಸ್ಥಾಪನೆಯಾದರೆ ಮಾಲಿನ್ಯವಾಗುತ್ತದೆ ಎಂದು ಯಾಕೆ ಯಾರಿಗೂ ತಿಳಿಯಲಿಲ್ಲ. ರಾಸಾಯನ ಗೊಬ್ಬರ, ಆಸಿಡ್ ತಯಾರಿಸುವ ಕಾರ್ಖಾನೆಗಳು ಭೂಗರ್ಭ ಆಳಕ್ಕೆ ಕೊರೆದು ಆಸಿಡ್ ಹರಿಬಿಟ್ಟು ಅಂತರ್ಜಲ ವಿಷಗೊಳಿಸಿದ್ದಾರೆ. ಹಾಲವರ್ತಿ ಗ್ರಾಮದ ಕೆ.ಪಿ.ಆರ್. ಕ್ರಾಪ್ ಸೈನ್ಸ್, ನವಭಾರತ ಫರ್ಟಿಲೈಜರ್, ಕೋರಮಂಡಲ್ ಕೆಮಿಕಲ್ಸ್, ಸುಣ್ಣ, ಸಿಮೆಂಟ್ ತಯಾರಿಸುವ ಘಟಕಗಳು ಮಾಡುವ ಮಾಲಿನ್ಯದಿಂದ ಹಾಳು ಮಾಡಿದ ಶುದ್ಧ ನೀರು ಮೊದಲಿನಂತೆ ಸಿಹಿ ಮಾಡಿಕೊಡಲು ಯಾರಿಂದ ಸಾಧ್ಯ. ಸ್ಪಾಂಜ್ ಐರನ್ ಘಟಕಗಳು ತುಂಗಭದ್ರಾ ಜಲಾಶಯ ಮಾಲಿನ್ಯ ಮಾಡುತ್ತಿವೆ. ಇದನ್ನು ಕಂಡು ಕಾಣದಂತೆ ಪರಿಸರ ಅಧಿಕಾರಿಗಳು ವರ್ತಿಸುವ ನಡೆ ಸರಿಯಲ್ಲ. ಇದೇ ನೀರು ಲಕ್ಷಗಟ್ಟಲೆ ಜನ ಕುಡಿದು ರೋಗಗ್ರಸ್ಥರಾಗಲು ಯಾರು ಹೊಣೆ. ಕೃಷಿ ಬೆಳೆ ಹಾನಿ, ಜಾನುವಾರು ಸಾವಿಗೆ, ಜನರ ಅನಾರೋಗ್ಯದಿಂದ ಸಾಯಲು ಕಾರಣವಾಗುವ ಎಲ್ಲಾ ಕಾರ್ಯಗಳನ್ನು ಬಂದ್ ಮಾಡಿ ಎಂದರು.
ಬೈಕ್ ರ್ಯಾಲಿಯಲ್ಲಿ ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಭಾಗ್ಯನಗರದ ಯುವ ಮುಖಂಡ ಗ್ಯಾನೇಶ ಹ್ಯಾಟಿ, ಮಹಿಳಾ ನಾಯಕಿ ಸರೋಜಾ ಬಾಕಳೆ, ಬಸವರಾಜ ಪೂಜಾರ ಕಾಸನಕಂಡಿ, ಶಿವಪ್ಪ ದೇವರಮನಿ ಹಿರೇಬಗನಾಳ, ಶರಣು ಗಡ್ಡಿ, ಗವಿಸಿದ್ದಪ್ಪ ಪುಟಗಿ ಹಿರೇಬಗನಾಳ, ನಟರಾಜ ಸವಡಿ, ಮಹಾಂತೇಶ ಕೊತಬಾಳ, ನಿವೃತ್ತ ಪ್ರಾಚಾರ್ಯ ಎಸ್.ಬಿ. ರಾಜೂರು ಮಾತನಾಡಿದರು.
ರ್ಯಾಲಿಯಲ್ಲಿ ಪರಿಸರ ಇಂಜಿನೀಯರ್ ವಿನಯ್ ಸಜ್ಜನ್, ಮಹಾದೇವಪ್ಪ ಮಾವಿನಮಡು, ಮೂಕಪ್ಪ ಮೇಸ್ತ್ರಿ ಬಸಾಪುರ, ಮಹೇಶ ವದ್ನಾಳ ಹಿರೇಬಗನಾಳ, ನಿವೃತ್ತ ನ್ಯಾಯಾಂಗ ಅಧಿಕಾರಿ ಜಿ.ಬಿ. ಪಾಟೀಲ್, ಮಂಜುನಾಥ ಕೆಂಚನಗೌಡ್ರ, ಶರಣು ಪಾಟೀಲ್, ವಿದ್ಯಾ ನಾಲ್ವಾಡ, ಶರಣು ಶೆಟ್ಟರ್, ನಾಗರಾಜ ಕುಷ್ಟಗಿ ಲಾಚನಕೇರಿ, ವೈ. ಸತ್ಯನಾರಾಮಣ, ಯಮನೂರಪ್ಪ ಹಾಲಳ್ಳಿ ಬಸಾಪುರ, ಡಾ. ಬಸವರಾಜ ಪೂಜಾರ, ಸುಭಾನ್ ಸಾಬ್ ನೀರಲಗಿ, ರಾಜಶೇಖರ ಏಳುಬಾವಿ, ಬಸವರಾಜ ಹಳ್ಳಿಕೇರಿ ಕುಣಿಕೇರಿ, ಗವಿಸಿದ್ದಪ್ಪ ಹಲಿಗಿ ಮುಂತಾದವರು ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್