ಗ್ಯಾರಂಟಿ ಯೋಜನೆಗಳ ಸೌಲಭ್ಯ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಿಗಲಿ
ಗದಗ, 05 ಫೆಬ್ರವರಿ (ಹಿ.ಸ.) : ಆ್ಯಂಕರ್ : ಬಡಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಹಾಗೂ ಸ್ವಾವಲಂಬಿಯಾಗಿ ಜೀವನ ನಡೆಸಲು ಪಂಚ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿದ್ದು ಯೋಜನೆಯ ಸೌಲಭ್ಯ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಲಭಿಸಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷ
ಫೋಟೋ


ಗದಗ, 05 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಬಡಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಹಾಗೂ ಸ್ವಾವಲಂಬಿಯಾಗಿ ಜೀವನ ನಡೆಸಲು ಪಂಚ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿದ್ದು ಯೋಜನೆಯ ಸೌಲಭ್ಯ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಲಭಿಸಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಪಾಟೀಲ ತಿಳಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗದಗ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಟಾನವಾದ ನಂತರ ದೇಶದಲ್ಲೇ ಕರ್ನಾಟಕ ರಾಜ್ಯವು ತೆರಿಗೆ ಪಾವತಿಸುವುದರಲ್ಲಿ ಎರಡನೇ ಸ್ಥಾನದಲ್ಲಿದೆ. ಸ್ತ್ರೀಯರನ್ನು ಆರ್ಥಿಕ ಸಬಲೀಕರಣರನ್ನಾಗಿಸುವುದು ಗೃಹ ಲಕ್ಷ್ಮೀ ಯೋಜನೆಯ ಉದ್ದೇಶವಾಗಿದ್ದು 1,23,00,000 ಮಹಿಳೆಯರು ಇದರ ಲಾಭ ಪಡೆಯುತ್ತಿದ್ದಾರೆ. ಗೃಹಲಕ್ಷೀ ಯೋಜನೆಯಡಿಯಲ್ಲಿ ಪೋತಿಯಾದವರ ಮನೆ ಯಜಮಾನಿ ಹೆಸರಿನಲ್ಲಿಯೂ ಯೋಜನೆಯ ಹಣ ಖಾತೆಗೆ ಜಮಾ ಆಗಿದ್ದು ಅಂತಹ ಮರಣ ಹೊಂದಿದವರ ಖಾತೆಗೆ ಜಮಾ ಆದ ಹಣವನ್ನು ವಸೂಲು ಮಾಡಿ ಸರ್ಕಾರಕ್ಕೆ ಮರುಪಾವತಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಯೋಜನೆಯ ಸೌಲಭ್ಯದ ದುರುಪಯೋಗವಾಗದಂತೆ ಕ್ರಮ ವಹಿಸಲಾಗುತ್ತಿದೆ ಎಂದರು.

ಪ್ರಯಾಣಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯ ಬಸ್‌ ನಿಲ್ದಾಣ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಬಸ್ ನಿಲ್ದಾಣಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ , ವಿಶ್ರಾಂತಿ ಗೃಹ ಹಾಗೂ ಶೌಚಾಲಯಗಳಿರುವಂತೆ ಕ್ರಮ ವಹಿಸಬೇಕು. ಜನರ ಸೇವೆಯೇ ಜನಾರ್ಧನ ಸೇವೆಯಾಗಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸರ್ಕಾರದ ಕೆಲಸವನ್ನು ಆಸಕ್ತಿಯಿಂದ ಹಾಗೂ ಶ್ರದ್ದೆಯಿಂದ ಅಧಿಕಾರಿಗಳು ನಿರ್ವಹಿಸಬೇಕು. ಪಡಿತರ ಅಂಗಡಿಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಬೋರ್ಡ ಪ್ರದರ್ಶಿಸಬೇಕು. ಒಟ್ಟಾರೆಯಾಗಿ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯ ಫಲಾನುಭವಿಗಳಿಗೆ ದೊರಕಿಸುವಲ್ಲಿ ನಿಷ್ಟೆಯಿಂದ ಕೆಲಸ ನಿರ್ವಹಿಸಬೇಕೆಂದು ತಿಳಿಸಿದರು.

ಜಿಲ್ಲಾ ಮಟ್ಟದ ಸಮಾವೇಶ ಫೆಬ್ರುವರಿ 18 ರಂದು ಪಂಚ ಗ್ಯಾರಂಟಿ ಯೋಜನೆಗಳ ಗದಗ ಜಿಲ್ಲಾ ಮಟ್ಟದ ಸಮಾವೇಶ/ ಉತ್ಸವ ಹಾಗೂ ಫಲಾನುಭವಿಗಳೊಂದಿಗೆ ಚರ್ಚೆ ಸಮಾರಂಭವು ಜರುಗಲಿದ್ದು ಈ ಸಮಾವೇಶವನ್ನು ಅತ್ಯಂತ ವಿಜೃಂಭಣೆಯಿಂದ ಉತ್ಸವದಂತೆ ಆಚರಿಸಲು ಉದ್ದೇಶಿಸಲಾಗಿದೆ. ಗ್ಯಾರಂಟಿ ಸಮಾವೇಶವು ಅತ್ಯಂತ ವ್ಯವಸ್ಥಿತವಾಗಿ ಹಾಗೂ ಸಂಭ್ರಮದಿಂದ ಜರುಗಲು ವಿವಿಧ ಸಮಿತಿಗಳನ್ನು ರಚಿಸಿ ಅಧಿಕಾರಿಗಳಿಗೆ ಕಾರ್ಯ ಹಂಚಿಕೆ ಮಾಡಬೇಕು. ಸಮಾವೇಶದಲ್ಲಿ ಐದೂ ಗ್ಯಾರಂಟಿ ಯೋಜನೆಗಳ ಪ್ರತ್ಯೇಕ ಮಳಿಗೆ (ಸ್ಟಾಲ್)ಗಳನ್ನು ಹಾಕಬೇಕು.

ಶಿಷ್ಟಾಚಾರದನ್ವಯ ಆಮಂತ್ರಣ ಪತ್ರಿಕೆ, ವೇದಿಕೆ ವ್ಯವಸ್ಥೆ, ಫಲಾನುಭವಿಗಳ ಚರ್ಚೆ, ಊಟೋಪಹಾರದ ವ್ಯವಸ್ಥೆ ಸೇರಿದಂತೆ ಸಮಾವೇಶವು ಯಾವುದೇ ಲೋಪದೋಷಗಳಿಲ್ಲದಂತೆ ಅಚ್ಚುಕಟ್ಟಾಗಿ ನಡೆಸಬೇಕೆಂದು ಎಸ್.ಆರ್.ಪಾಟೀಲ ತಿಳಿಸಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ ಮಾತನಾಡಿ, ಗ್ಯಾರಂಟಿ ಯೋಜನೆಗಳ ಸೌಲಭ್ಯ ಒದಗಿಸುವುದು ಬಡಜನರ ಸೇವೆಗೆ ಸರ್ಕಾರವು ಒದಗಿಸಿಕೊಟ್ಟ ಅವಕಾಶವಾಗಿದೆ. ಸೌಲಭ್ಯಗಳ ದುರುಪಯೋಗವಾಗದಂತೆ ನಿಗಾ ವಹಿಸುವದು ಹಾಗೂ ಸೌಲಭ್ಯಗಳಿಂದ ಅರ್ಹ ಫಲಾನುಭವಿಗಳು ವಂಚಿತರಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕೆಂದು ತಿಳಿಸಿದರು.

ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಯ ಸಂಬಂಧಿತ ಅಧಿಕಾರಿಗಳು ಈ ಕೆಳಗಿನಂತೆ ಸಭೆಗೆ ಮಾಹಿತಿ ನೀಡಿದರು.

ಗೃಹ ಲಕ್ಷ್ಮೀ ಯೋಜನೆಯಡಿ ಜನೆವರಿ 2026 ರ ಅಂತ್ಯದವರೆಗೆ 258215 ನೋಂದಣಿಯಾದ ಅರ್ಜಿಗಳ ಪೈಕಿ 249353 ಅರ್ಜಿಗಳಿಗೆ ಮಂಜೂರಾತಿ ದೊರೆದಿದೆ. ಗೃಹಲಕ್ಷ್ಮೀ ಯೋಜನೆಯಡಿ 23 ಮರಣ ಹೊಂದಿದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗಿರುವ ಧನ ಸಹಾಯದ ಮೊತ್ತ 1,79,600 ರೂ.ಗಳನ್ನು ಸರ್ಕಾರಕ್ಕೆ ಜಮೆ ಮಾಡಲಾಗಿದೆ.

ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 11-6-2023 ರಿಂದ 31-1-2026 ರವರೆಗೆ 25.54 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು 863.57 ಕೋಟಿ ರೂ. ಆದಾಯವಾಗಿದೆ.

ಗೃಹಜ್ಯೋತಿ ಯೋಜನೆಯಡಿ ಯೋಜನೆ ಆರಂಭದಿಂದ ಜನೆವರಿ 2026 ರವರೆಗೆ ಒಟ್ಟು 278428 ಸ್ಥಾವರಗಳಿದ್ದು ಆ ಪೈಕಿ 274305 ಸ್ಥಾವರಗಳ ನೋಂದಣಿಯಾಗಿದೆ.

ಯುವನಿಧಿ ಯೋಜನೆಯಡಿ ಜನೆವರಿ 2024 ರಿಂದ ಸೆಪ್ಟೆಂಬರ್ 2025 ರವರೆಗೆ 6356 ಅರ್ಜಿ ಸ್ವೀಕೃತವಾಗಿರುತ್ತವೆ.ಅದರಲ್ಲಿ 4048 ಅರ್ಹ ಫಲಾನುಭವಿಗಳಿಗೆ ಡಿ.ಬಿ.ಟಿ.ಮೂಲಕ ಹಣ ವರ್ಗಾವಣೆಯಾಗಿರುತ್ತದೆ. ಬಾಕಿ ಉಳಿದ 2308 ಅಭ್ಯರ್ಥಿಗಳು ಯುವನಿಧಿ ಯೋಜನೆಯ ಷರತ್ತುಗಳಿಗೆ ಹಂತ ಹಂತವಾಗಿ ಅರ್ಹರಾಗುತ್ತಾರೆ.

ಅನ್ನಭಾಗ್ಯ ಯೋಜನೆಯಡಿ ಜುಲೈ 2023 ರಿಂದ ಡಿಸೆಂಬರ್ 2024 ರವರೆಗೆ 7,91,130 ಫಲಾನುಭವಿಗಳಿಗೆ ಡಿ.ಬಿಟಿ ಮುಖಾಂತರ 216,82,39,330 ರೂ. ಪಾವತಿಯಾಗಿರುತ್ತದೆ. ಫೆಬ್ರುವರಿ 2025 ರಿಂದ ಜನೆವರಿ 2026 ರವರೆಗೆ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆ.ಜಿ. ಅಕ್ಕಿ ಆಹಾರ ಧಾನ್ಯಗಳ ಹಂಚಿಕೆಯಡಿ 4,69,347 ಕ್ವಿಂಟಲ್ ಹಂಚಿಕೆ ಮಾಡಲಾಗಿದೆ.

ಸಭೆಯಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರುಗಳಾದ ಅಶೋಕ ಮಂದಾಲಿ, ವೀರಯ್ಯ ಮಠಪತಿ, ಡಿ.ಡಿ.ಮರ‍್ನಾಳ, ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಮುಖ್ಯನಿರ್ವಹಣಾಧಿಕಾರಿ ಸಿ. ಎನ್.ಶ್ರೀಧರ್, ಜಿ.ಪಂ.ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ, ಜಿ.ಪಂ.. ಯೋಜನಾ ನಿರ್ದೇಶಕ ಎಂ.ವಿ.ಚಳಗೇರಿ, ಜಿಲ್ಲಾ ಹಾಗೂ ತಾಲೂಕು ಸಮಿತಿ ಸದಸ್ಯರು , ಗ್ಯಾರಂಟಿ ಯೋಜನೆ ಸಂಬಂಧಿತ ಅಧಿಕಾರಿಗಳು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande