
ಕೋಲಾರ, ೦೫ ಫೆಬ್ರವರಿ (ಹಿ.ಸ) :
ಆ್ಯಂಕರ್ : ಜಿಲ್ಲೆಯ ಖಾಸಗಿ ಹಾಲಿನ ಕೇಂದ್ರಗಳಲ್ಲಿ ನಡೆಯುತ್ತಿದೆ ಎನ್ನಲಾದ ಕಲಬೆರೆಕೆ ಹಾಲಿನ ಜಾಲದ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿ ೧೧೨೦ ಲೀಟರ್ ಕಲಬೆರಕೆ ಹಾಲು ವಶಪಡಿಸಿಕೊಂಡರು.
ಕಳೆದ ಕೆಲವು ದಿನಗಳಿಂದ ಖಾಸಗಿ ಹಾಲಿನ ಸಂಗ್ರಹಣಾ ಕೇಂದ್ರಗಳಲ್ಲಿ ಕಲಬೆರೆಕೆ ನಡೆಯುತ್ತಿದೆ ಎಂಬ ದೂರುಗಳು ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ತಲುಪಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ರಹಸ್ಯ ಕಾರ್ಯಾಚರಣೆಗೆ ನೀಲನಕ್ಷೆ ಸಿದ್ಧಪಡಿಸಿದ್ದರು. ಆಹಾರ ಸುರಕ್ಷತಾ ಇಲಾಖೆಯ ೩೦ ವಿಶೇಷ ತಂಡಗಳು ಜಿಲ್ಲೆಯಾದ್ಯಂತ ಕಾರ್ಯಾಚರಣೆ ನಡೆಸಿದರು.
ಜಿಲ್ಲಾ ಅಂಕಿತ ಅಧಿಕಾರಿ ಡಾ. ರಾಕೇಶ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಆಹಾರ ಸುರಕ್ಷತಾ ಅಧಿಕಾರಿಗಳು ಪಾಲ್ಗೊಂಡಿದ್ದರು. ಮಾರಾಟ ಕೇಂದ್ರಗಳು ಹಾಗೂ ಹಾಲಿನ ಉತ್ಪಾದನಾ ಘಟಕಗಳಿಗೆ ಅನಿರೀಕ್ಷಿತ ಭೇಟಿ ನೀಡಿದ ಅಧಿಕಾರಿಗಳು, ಯಾವುದೇ ದಾಖಲೆಗಳಿಲ್ಲದ ಹಾಗೂ ಸಂಶಯಾಸ್ಪದವಾಗಿ ಕಂಡುಬ0ದ ಒಟ್ಟು ೪೦ ಹಾಲಿನ ಮಾದರಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಮಾದರಿಗಳನ್ನು ಕೂಡಲೇ ಬೆಂಗಳೂರಿನ ರಾಜ್ಯ ಆಹಾರ ಪ್ರಯೋಗಾಲಯಕ್ಕೆ ವೈಜ್ಞಾನಿಕ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ.
ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ತಂಡಗಳು ಅಕ್ರಮವಾಗಿ ಹಾಲನ್ನು ಸಾಗಾಟ ಮಾಡುತ್ತಿದ್ದ ಬೊಲೆರೋ ವಾಹನವನ್ನು ತಡೆದು ತಪಾಸಣೆ ನಡೆಸಿದೆ. ಈ ವೇಳೆ ವಾಹನದಲ್ಲಿದ್ದ ೨೮ ಕ್ಯಾನ್‌ಗಳಲ್ಲಿ ತುಂಬಿದ್ದ ಸುಮಾರು ೧೧೨೦ ಲೀಟರ್ ಕಲಬೆರೆಕೆ ಹಾಲನ್ನು ಪತ್ತೆಹಚ್ಚಿ ಜಪ್ತಿ ಮಾಡಲಾಗಿದೆ. ಈ ಸಂಬAಧ ವಾಹನದ ಚಾಲಕ ಹಾಗೂ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಮಾತನಾಡಿ ಜಿಲ್ಲೆಯ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕಲಬೆರೆಕೆ ಹಾಲಿನ ದಂಧೆಯನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಹಾಲಿನಲ್ಲಿ ವಿಷಕಾರಕ ಅಂಶಗಳನ್ನು ಬೆರೆಸುವುದು ಅತ್ಯಂತ ಗಂಭೀರ ಅಪರಾಧ. ಇಂತಹ ಕೃತ್ಯದಲ್ಲಿ ತೊಡಗಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳ ಪರವಾನಗಿ ರದ್ದುಪಡಿಸುವುದಲ್ಲದೆ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು, ಎಂದು ಎಚ್ಚರಿಸಿದರು.
ಚಿತ್ರ : ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳ ತಂಡ ಕಲಬೆರಕೆ ಹಾಲು ಸರಬರಾಜು ಜಾಲದ ಮೇಲೆ ದಾಳಿ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್