
ನವದೆಹಲಿ, 05 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಶ್ರೀಲಂಕಾದ ಕೊಲಂಬೊದಲ್ಲಿರುವ ಪವಿತ್ರ ಗಂಗಾರಾಮಯ ಬೌದ್ಧ ದೇವಸ್ಥಾನದಲ್ಲಿ ಭಗವಾನ್ ಬುದ್ಧನ ಪವಿತ್ರ ದೇವನಿಮೋರಿ ಅವಶೇಷಗಳ ಪ್ರದರ್ಶನವನ್ನು ಆಯೋಜಿಸಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕಾದ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಕುರಿತು ಗುರುವಾರ ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ನಲ್ಲಿ ಪ್ರತ್ಯೇಕ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, 2025ರ ಏಪ್ರಿಲ್‌ನಲ್ಲಿ ತಮ್ಮ ಶ್ರೀಲಂಕಾ ಭೇಟಿಯ ಸಂದರ್ಭದಲ್ಲಿ ಈ ಪವಿತ್ರ ಅವಶೇಷಗಳನ್ನು ಪ್ರದರ್ಶನಕ್ಕಾಗಿ ಶ್ರೀಲಂಕಾಕ್ಕೆ ತರಲು ತೀರ್ಮಾನಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಇದರಿಂದ ಶ್ರೀಲಂಕಾದ ಜನರು ಈ ಪೂಜ್ಯ ಅವಶೇಷಗಳನ್ನು ಹತ್ತಿರದಿಂದ ದರ್ಶನ ಮಾಡಿ ಗೌರವ ಸಲ್ಲಿಸಲು ಅವಕಾಶ ಲಭಿಸಿದೆ ಎಂದು ಅವರು ಹೇಳಿದ್ದಾರೆ.
ಭಗವಾನ್ ಬುದ್ಧನ ಪವಿತ್ರ ದೇವನಿಮೋರಿ ಅವಶೇಷಗಳ ಶ್ರೀಲಂಕಾಕ್ಕೆ ಆಗಮನವು ಭಾರತ ಮತ್ತು ಶ್ರೀಲಂಕಾ ನಡುವಿನ ಶತಮಾನಗಳಿಂದ ಬೆಳೆದು ಬಂದ ಆಳವಾದ ನಾಗರಿಕ ಹಾಗೂ ಆಧ್ಯಾತ್ಮಿಕ ಸಂಬಂಧಗಳಿಗೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಹಂಚಿಕೆಯ ಪರಂಪರೆ ಮತ್ತು ಸಾಂಸ್ಕೃತಿಕ ವಿನಿಮಯಗಳ ಮೂಲಕ ಈ ಸಂಬಂಧಗಳು ಇನ್ನಷ್ಟು ಬಲವಾಗಿವೆ ಎಂದು ಅವರು ಉಲ್ಲೇಖಿಸಿದ್ದಾರೆ.
ಭಗವಾನ್ ಬುದ್ಧನ ಕರುಣೆ, ಶಾಂತಿ ಮತ್ತು ಸಾಮರಸ್ಯದ ಶಾಶ್ವತ ಸಂದೇಶವು ಮಾನವತೆಗೆ ದಾರಿ ತೋರಿಸುತ್ತಿದ್ದು, ರಾಷ್ಟ್ರಗಳ ಗಡಿಗಳನ್ನು ಮೀರಿ ಏಕತೆ ಮತ್ತು ಪರಸ್ಪರ ತಿಳುವಳಿಕೆಯನ್ನು ಉತ್ತೇಜಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಎರಡೂ ರಾಷ್ಟ್ರಗಳು ಆಳವಾದ ನಾಗರಿಕ ಮತ್ತು ಆಧ್ಯಾತ್ಮಿಕ ಬಂಧಗಳಿಂದ ಜೋಡಿಸಲ್ಪಟ್ಟಿವೆ ಎಂಬುದನ್ನೂ ಅವರು ತಮ್ಮ ಸಂದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ನಡುವೆ, ಬುಧವಾರ ಶ್ರೀಲಂಕಾದ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡು, ಭಗವಾನ್ ಬುದ್ಧನಿಗೆ ಸಂಬಂಧಿಸಿದ ಪವಿತ್ರ ಅವಶೇಷಗಳನ್ನು ಪ್ರದರ್ಶನಕ್ಕಾಗಿ ಕೊಲಂಬೊಗೆ ತರಲು ಸಹಕರಿಸಿದ್ದಕ್ಕಾಗಿ ಪ್ರಧಾನಿ ಮೋದಿ ಹಾಗೂ ಭಾರತ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa