
ನವದೆಹಲಿ, 05 ಫೆಬ್ರವರಿ (ಹಿ.ಸ.) :
ಆ್ಯಂಕರ್ : ದೇಶದ ಮೊದಲ ಸಹಕಾರಿ ಆಧಾರಿತ ಟ್ಯಾಕ್ಸಿ ಸೇವೆ ‘ಭಾರತ್ ಟ್ಯಾಕ್ಸಿ’ಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಗುರುವಾರ ದೆಹಲಿಯ ವಿಜ್ಞಾನ ಭವನದಲ್ಲಿ ಅಧಿಕೃತ ಚಾಲನೆ ನೀಡಿದರು. ಮುಂದಿನ ಮೂರು ವರ್ಷಗಳಲ್ಲಿ ಈ ಸೇವೆಯನ್ನು ದೇಶಾದ್ಯಂತ ವಿಸ್ತರಿಸುವ ಗುರಿಯಿದ್ದು, ಇದು ಟ್ಯಾಕ್ಸಿ ಚಾಲಕರ ಆರ್ಥಿಕ ಸಬಲೀಕರಣಕ್ಕೆ ಪ್ರಮುಖ ವೇದಿಕೆಯಾಗಲಿದೆ ಎಂದು ಅವರು ಹೇಳಿದರು.
ಪ್ರಸ್ತುತ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ ಸೇರಿದಂತೆ ಗುಜರಾತ್‌ನ ಕೆಲವು ನಗರಗಳಲ್ಲಿ ‘ಭಾರತ್ ಟ್ಯಾಕ್ಸಿ’ ಸೇವೆ ಆರಂಭವಾಗಿದ್ದು, ಮೂರು ವರ್ಷಗಳೊಳಗೆ ದೇಶದ ಪ್ರತಿಯೊಂದು ರಾಜ್ಯ ಹಾಗೂ ಪ್ರಮುಖ ನಗರಗಳಲ್ಲಿ ಲಭ್ಯವಾಗಲಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮತ್ತು ದ್ವಾರಕದಿಂದ ಕಾಮಾಕ್ಯದವರೆಗೆ ಟ್ಯಾಕ್ಸಿ ಚಾಲಕರ ಕಲ್ಯಾಣಕ್ಕಾಗಿ ಇದು ಮಾದರಿ ಯೋಜನೆಯಾಗಲಿದೆ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದರು.
ಟ್ಯಾಕ್ಸಿ ಚಾಲಕರನ್ನು ‘ಸಾರಥಿ’ ಎಂದು ಉಲ್ಲೇಖಿಸಿದ ಸಚಿವರು, ಇದುವರೆಗೆ ಅವರ ವಾಹನಗಳ ಚಕ್ರಗಳು ಇತರರಿಗೆ ಆದಾಯ ತಂದುಕೊಡುತ್ತಿದ್ದವು. ಆದರೆ ‘ಭಾರತ್ ಟ್ಯಾಕ್ಸಿ’ ಮೂಲಕ ಆ ಆದಾಯವು ನೇರವಾಗಿ ಸಾರಥಿಗಳ ಸಮೃದ್ಧಿಗೆ ಬಳಸಲಾಗುತ್ತದೆ ಎಂದರು. ಮೂರು ವರ್ಷಗಳ ನಂತರ ಸಹಕಾರಿ ಟ್ಯಾಕ್ಸಿ ಗಳಿಸುವ ಲಾಭದಲ್ಲಿ ಕೇವಲ 20 ಶೇಕಡಾ ಮಾತ್ರ ಸಂಸ್ಥೆಯಲ್ಲಿ ಉಳಿದು, ಉಳಿದ 80 ಶೇಕಡಾ ಮೊತ್ತವನ್ನು ಪ್ರತಿ ಕಿಲೋಮೀಟರ್ ಸರಾಸರಿ ಆಧಾರದ ಮೇಲೆ ನೇರವಾಗಿ ಚಾಲಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಸಹಕಾರಿ ಟ್ಯಾಕ್ಸಿಗಳ ಮಾಲೀಕರೂ ಸಹ ಸಾರಥಿಗಳೇ ಆಗಿರುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು.
ಮಹಿಳೆಯರ ಸುರಕ್ಷತೆಗೆ ವಿಶೇಷ ಒತ್ತು ನೀಡಲಾಗಿದ್ದು, ‘ಸಾರಥಿ ದೀದಿ’ ಪರಿಕಲ್ಪನೆಯಡಿ ಆ್ಯಪ್‌ನಲ್ಲಿ ಪ್ರತ್ಯೇಕ ಆಯ್ಕೆಯ ಮೂಲಕ ಮಹಿಳಾ ಪ್ರಯಾಣಿಕರಿಗೆ ಮಹಿಳಾ ಚಾಲಕರನ್ನು ಆಯ್ಕೆಮಾಡಿಕೊಳ್ಳುವ ಅವಕಾಶ ಒದಗಿಸಲಾಗುತ್ತದೆ. ಇದರಿಂದ ಮಹಿಳೆಯರ ಪ್ರಯಾಣ ಇನ್ನಷ್ಟು ಸುರಕ್ಷಿತವಾಗಲಿದೆ ಎಂದು ಶಾ ಹೇಳಿದರು.
ಸರ್ಕಾರ ಟ್ಯಾಕ್ಸಿ ವಲಯಕ್ಕೆ ಪ್ರವೇಶಿಸುತ್ತಿಲ್ಲ ಸಹಕಾರಿ ಸಂಸ್ಥೆಗಳೇ ಈ ವಲಯಕ್ಕೆ ಕಾಲಿಡುತ್ತಿವೆ ಎಂದು ಅವರು ಸ್ಪಷ್ಟಪಡಿಸಿದರು. ಸಣ್ಣ ಸಂಪನ್ಮೂಲಗಳನ್ನು ಹೊಂದಿರುವವರು ಒಟ್ಟಾಗಿ ದೊಡ್ಡ ಸಾಧನೆ ಮಾಡುವುದೇ ಸಹಕಾರದ ಮೂಲ ತತ್ವವಾಗಿದ್ದು, ‘ಭಾರತ್ ಟ್ಯಾಕ್ಸಿ’ ಅದಕ್ಕೆ ಅತ್ಯುತ್ತಮ ಉದಾಹರಣೆ. ಇಲ್ಲಿ ಖಾಸಗಿ ಕಾರ್ಪೊರೇಟ್ ಸಂಸ್ಥೆಯಲ್ಲ, ಟ್ಯಾಕ್ಸಿ ಚಾಲಕರೇ ಕಂಪನಿಯ ನಿಜವಾದ ಮಾಲೀಕರು. ಚಾಲಕರೇ ನೇರವಾಗಿ ಒಡೆತನ ಹೊಂದಿರುವ ವಿಶ್ವದ ಮೊದಲ ಸಹಕಾರಿ ಟ್ಯಾಕ್ಸಿ ಸೇವೆಯಾಗಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
‘ಭಾರತ್ ಟ್ಯಾಕ್ಸಿ’ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯನ್ನು ಹೊಂದಿದ್ದು, ಪ್ರತಿ ಐದು ವರ್ಷಗಳಿಗೊಮ್ಮೆ ಚಾಲಕರಿಂದ ಆಯ್ಕೆಯಾದ ಪ್ರತಿನಿಧಿಗಳು ನಿರ್ದೇಶಕರ ಮಂಡಳಿಯಲ್ಲಿ ಸ್ಥಾನ ಪಡೆಯಲಿದ್ದಾರೆ. ಇದರಿಂದ ಚಾಲಕರ ಹಿತಾಸಕ್ತಿಗಳ ರಕ್ಷಣೆಗೆ ಆದ್ಯತೆ ನೀಡಲಾಗುತ್ತದೆ.
ಈ ಸಂದರ್ಭ ಸಹಕಾರ್ ಟ್ಯಾಕ್ಸಿ ಲಿಮಿಟೆಡ್ ಸಂಸ್ಥೆ ‘ಭಾರತ್ ಟ್ಯಾಕ್ಸಿ’ ವಿಸ್ತರಣೆಗೆ ಸಂಬಂಧಿಸಿದಂತೆ ಒಟ್ಟು ಒಂಬತ್ತು ಸಂಸ್ಥೆಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿತು. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ರಾಷ್ಟ್ರೀಯ ಇ-ಆಡಳಿತ ವಿಭಾಗ, ದೆಹಲಿ ಸಂಚಾರ ಪೊಲೀಸ್, ದೆಹಲಿ ಮೆಟ್ರೋ ರೈಲು ನಿಗಮ, ದೆಹಲಿ ಪ್ರವಾಸೋದ್ಯಮ ಮತ್ತು ಸಾರಿಗೆ ಅಭಿವೃದ್ಧಿ ನಿಗಮ, ಜಿಎಂಆರ್, ಇಫ್ಕೊ ಟೋಕಿಯೊ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಪೇಟಿಎಂ ಸೇರಿದಂತೆ ಪ್ರಮುಖ ಸಂಸ್ಥೆಗಳು ಇದರಲ್ಲಿ ಸೇರಿವೆ. ಇದೇ ಸಂದರ್ಭದಲ್ಲಿ ಅಮಿತ್ ಶಾ ಅವರು ಐದು ಸಾರಥಿ ಸಹೋದರ-ಸಹೋದರಿಯರಿಗೆ ‘ಭಾರತ್ ಟ್ಯಾಕ್ಸಿ’ ಷೇರು ಪ್ರಮಾಣಪತ್ರಗಳನ್ನು ಸಾಂಕೇತಿಕವಾಗಿ ಪ್ರದಾನ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa