
ಚಿತ್ರದುರ್ಗ, 03 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಸರ್ಕಾರದ ವತಿಯಿಂದ ಇದೇ ಫೆಬ್ರವರಿ 19ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಹಾಗೂ ಫೆಬ್ರವರಿ 20ರಂದು ಸಂತ ಕವಿ ಸರ್ವಜ್ಞ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಿ.ಎಂ. ಗುರುನಾಥ ತಿಳಿಸಿದ್ದಾರೆ.
ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಫೆ.19ರಂದು ಬೆಳಿಗ್ಗೆ 11ಕ್ಕೆ ಹಾಗೂ ಸಂತ ಕವಿ ಸರ್ವಜ್ಞ ಜಯಂತಿಯನ್ನು ಫೆ.20ರಂದು ಬೆಳಿಗ್ಗೆ 11ಕ್ಕೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಚರಿಸುವ ಕುರಿತು ಸಭೆಯಲ್ಲಿ ಸಮಾಜದ ಮುಖಂಡರು ಸಲಹೆ ನೀಡಿದರು.
ಸಲಹೆಗಳಿಗೆ ಸಮ್ಮತಿ ವ್ಯಕ್ತಪಡಿಸಿದ ಡಾ. ಗುರುನಾಥ, ಸರ್ಕಾರದ ಶಿಷ್ಟಾಚಾರವನ್ನು ಪಾಲಿಸಿಕೊಂಡು ಮಹನೀಯರ ಜೀವನ, ಸಾಧನೆ ಮತ್ತು ವಿಚಾರಧಾರೆಯ ಕುರಿತು ಗೀತಗಾಯನ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಮರಾಠ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸುರೇಶ್ ಜಾದವ್, ಕಾರ್ಯದರ್ಶಿ ಗೋಪಾಲರಾವ್, ಕುಂಬಾರ ಮುತ್ತಯ್ಯ ಮಹಾಸಂಸ್ಥಾನದ ಪ್ರತಿನಿಧಿಗಳು, ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಪಿ. ತಿಪ್ಪೇಸ್ವಾಮಿ, ಕರ್ನಾಟಕ ಕುಂಬಾರ ಮಹಿಳಾ ಮಹಾಸಭಾ ಹಾಗೂ ಜಿಲ್ಲಾ ಕುಂಬಾರ ಸಂಘದ ಮಹಿಳಾ ಅಧ್ಯಕ್ಷೆ ಎಸ್. ಬೈಲಮ್ಮ, ಕಾರ್ಯದರ್ಶಿ ಮೃತ್ಯುಂಜಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa