ಜೆಡಿಎಸ್ ಮುಖಂಡರ ಬೆಂಬಲದೊ0ದಿಗೆ ಜೆಡಿಯು ಪಕ್ಷ ಸಂಘಟನೆ
ಜೆಡಿಎಸ್ ಮುಖಂಡರ ಬೆಂಬಲದೊ0ದಿಗೆ ಜೆಡಿಯು ಪಕ್ಷ ಸಂಘಟನೆ
ಕೋಲಾರ ತಾಲ್ಲೂಕಿನ ಕಲ್ಲಂಡೂರು ಗ್ರಾಮದಲ್ಲಿ ನಡೆದ ಜೆಡಿಯು ಸದಸ್ಯತ್ವ ಅಭಿಯಾನದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಮಹಿಮ ಜೆ.ಪಟೇಲ್ ಮಾತನಾಡಿದರು.


ಕೋಲಾರ, ೦೩ ಫೆಬ್ರವರಿ (ಹಿ.ಸ) :

ಆ್ಯಂಕರ್ : ರಾಜ್ಯದಲ್ಲಿ ಜೆಡಿಎಸ್ ಬೆಳೆಸಿದ್ದೇ ಜೆಡಿಯು. ಹೀಗಾಗಿ, ಜೆಡಿಎಸ್ ಮುಖಂಡರ ಬೆಂಬಲದೊAದಿಗೆ ರಾಜ್ಯದಲ್ಲಿ ಮತ್ತೆ ಜೆಡಿಯು ಪಕ್ಷ ಬೆಳೆಸಲಾಗುವುದು. ಈ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸದ್ಯದಲ್ಲೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ ಎಂದು ಜೆಡಿಯು ರಾಜ್ಯ ಅಧ್ಯಕ್ಷ ಮಹಿಮ ಜೆ.ಪಟೇಲ್ ತಿಳಿಸಿದರು.

ಕೋಲಾರ ತಾಲ್ಲೂಕಿನ ಕಲ್ಲಂಡೂರಿನಲ್ಲಿ ಮಂಗಳವಾರ ಜೆಡಿಯು ಪಕ್ಷದ ಸದಸ್ಯತ್ವ ನೋಂದಣಿಗೆ ಚಾಲನೆ ನೀಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಜನತಾ ಪರಿವಾರ ರಾಜ್ಯದಲ್ಲಿ ಹಿಂದೆ ಉತ್ತಮ ಆಡಳಿತ ನಡೆಸಿದೆ. ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್ ಉತ್ತಮ ಸರ್ಕಾರ ನೀಡಿದ್ದರು. ಅವರು ಹಾಕಿಕೊಟ್ಟ ಅಡಿಪಾಯದ ಮೇಲೆ ರಾಜ್ಯದಲ್ಲಿ ಜೆಡಿಯು ಪಕ್ಷಕ್ಕೆ ಪುನಶ್ಚೇತನ ನೀಡಲಾಗುವುದು ಎಂದರು.

ಬೇರೆ ಬೇರೆ ಪಕ್ಷಗಳ ಪರಿಸ್ಥಿತಿ ನೋಡಿ ಆ ಪಕ್ಷಗಳು ಬೇಡ ಎಂಬ ತೀರ್ಮಾನಕ್ಕೆ ಹಲವು ನಾಯಕರು ಬಂದಿದ್ದಾರೆ. ರಾಜಕೀಯ ನಾಯಕರು ಅಲ್ಲದೇ; ಕಲಾವಿದರು, ಸಾಹಿತಿಗಳು, ವಿವಿಧ ಕ್ಷೇತ್ರಗಳ ಮುಖಂಡರು ನಮ್ಮ ಪಕ್ಷದ ಕಡೆ ನೋಡುತ್ತಿದ್ದಾರೆ ಎಂದು ಹೇಳಿದರು.

ಮುಂಬರುವ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಜೆಡಿಯು ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ತಿಳಿಸಿದರು.

ಈಗಿನ ರಾಜಕೀಯ ವ್ಯವಸ್ಥೆ ಬಗ್ಗೆ ಜನರು ಗೊಂದಲ, ಅಸಹಾಯಕತೆ, ನಿರಾಶೆಯ ಭಾವನೆಯಲ್ಲಿದ್ದಾರೆ. ದೇಶದ ೧೪೦ ಕೋಟಿ ಜನರಲ್ಲಿ ೩ ಲಕ್ಷ ಜನ ತೃಪ್ತಿಯಿಂದ ಇರಬಹುದು ಅಷ್ಟೆ. ಹೊಸ ವ್ಯವಸ್ಥೆ ಉದಯವಾಗಲು ಇದು ಸಕಾಲ ಎನಿಸುತ್ತಿದೆ. ವ್ಯವಸ್ಥೆಯ ಪರಿವರ್ತನೆ ಮಾಡಿ ಸುವ್ಯವಸ್ಥೆ ರೂಪಿಸಬೇಕಿದೆ. ಇದಕ್ಕೆ ತಿಳುವಳಿಕೆ ಹೊಂದಿರುವವರು, ಬುದ್ಧಿವಂತರು ಜನಪ್ರತಿನಿಧಿಗಳಾಗಬೇಕು ಎಂದರು.

ಈ ನಿಟ್ಟಿನಲ್ಲಿ ಡಾ.ಕೆ.ನಾಗರಾಜ್ ಅವರನ್ನು ಆಗ್ನೇಯ ಪದವೀಧರ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಅವರನ್ನು ಎನ್‌ಡಿಎ ಬೆಂಬಲ ಅಥವಾ ಹೊರಗಿನಿಂದ ಬೆಂಬಲ ಪಡೆದು ಜೆಡಿಯುನಿಂದ ಕಣಕ್ಕಿಳಿಸಲಾಗುತ್ತಿದೆ ಎಂದು ಹೇಳಿದರು.

ಜೆಡಿಯು ಯುವ ಘಟಕದ ರಾಜ್ಯ ಅಧ್ಯಕ್ಷ ಡಾ.ನಾಗರಾಜ್ ಮಾತನಾಡಿ, ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಈಗಾಗಲೇ ಒಂದು ಸುತ್ತು ಮುಗಿಸಿ ಎರಡನೇ ಸುತ್ತಿನ ಪ್ರಚಾರದಲ್ಲಿ ತೊಡಗಿದ್ದೇವೆ. ಅತಿ ಹೆಚ್ಚು ಮತದಾರರನ್ನು ನೋಂದಣಿ ಮಾಡಿಸಿದ್ದೇವೆ ಎಂದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಬಿಹಾರದವರು. ಬಿಹಾರದ ಸರ್ಕಾರದಲ್ಲಿ ಸಚಿವರಾದವರು. ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ, ಮುಂಬರುವ ದಿನಗಳಲ್ಲಿ ನಮಗೆ ಸಹಾಯವಾಗಲಿದೆ ಎಂದು ಹೇಳಿದರು.

ಚಿತ್ರ : ಕೋಲಾರ ತಾಲ್ಲೂಕಿನ ಕಲ್ಲಂಡೂರು ಗ್ರಾಮದಲ್ಲಿ ನಡೆದ ಜೆಡಿಯು ಸದಸ್ಯತ್ವ ಅಭಿಯಾನದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಮಹಿಮ ಜೆ.ಪಟೇಲ್ ಮಾತನಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande