
ನವದೆಹಲಿ, 03 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಮಂಗಳವಾರ ಲೋಕ ಸಭೆಯಲ್ಲಿ ಉಂಟಾದ ಗದ್ದಲದಿಂದ ಸದನದ ಸಾಮಾನ್ಯ ಕಾರ್ಯಚಟುವಟಿಕೆ ಅಸ್ತವ್ಯಸ್ತಗೊಂಡಿತು. ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೇಳಿಕೆ ವಿಚಾರವಾಗಿ ಉಂಟಾದ ಗದ್ದಲದ ಹಿನ್ನೆಲೆ ಸದನವನ್ನು ಮೂರು ಬಾರಿ ಮುಂದೂಡಬೇಕಾಯಿತು. ನಂತರ ದಿನದ ಮಟ್ಟಿಗೆ ಕಲಾಪವನ್ನು ಮುಂದೂಡಲಾಯಿತು.
ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ವಿಚಾರವಾಗಿ ಬೆಳಿಗ್ಗೆ ಪ್ರತಿ ಪಕ್ಷದ ಸದಸ್ಯರು ಗದ್ದಲ ಎಬ್ಬಿಸಿದರು. ಕಾಂಗ್ರೆಸ್ ಸೇರಿದಂತೆ ಹಲವು ಪ್ರತಿ ಪಕ್ಷದ ಸದಸ್ಯರು ಫಲಕಗಳನ್ನು ಹಿಡಿದು ಸ್ಪೀಕರ್ ವೇದಿಕೆಯ ಬಳಿ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಹಾಕಿದರು. ಈ ಹಿನ್ನೆಲೆಯಲ್ಲಿ ಸದನವನ್ನು ಮೊದಲು ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ನಂತರ ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು.
ಮಧ್ಯಾಹ್ನ ಪುನರಾರಂಭವಾದ ಕಲಾಪದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆ ವೇಳೆ ರಾಹುಲ್ ಗಾಂಧಿಯವರ ಹೇಳಿಕೆಗಳು ಮತ್ತೆ ಗದ್ದಲಕ್ಕೆ ಕಾರಣವಾಯಿತು. ಪೂರ್ವ ಲಡಾಖ್ ವಿಚಾರವನ್ನು ಪ್ರಸ್ತಾಪಿಸಿರುವುದಕ್ಕೆ ಆಡಳಿತ ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಸ್ಪೀಕರ್ ಈಗಾಗಲೇ ಈ ವಿಷಯದ ಬಗ್ಗೆ ತೀರ್ಪು ನೀಡಿದ್ದಾರೆ ಎಂದು ಹೇಳಿ, ಅದನ್ನೇ ಪುನರಾವರ್ತಿಸುವುದು ನಿಯಮಬಾಹಿರ ಎಂದು ಆಡಳಿತ ಪಕ್ಷ ವಾದಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಪಕ್ಷದ ಸದಸ್ಯರು ರಾಹುಲ್ ಗಾಂಧಿಯವರನ್ನು ಮಾತನಾಡದಂತೆ ತಡೆಯಲಾಗುತ್ತಿದೆ ಎಂದು ಆರೋಪಿಸಿದರು.
ಗದ್ದಲದ ವೇಳೆ ಕೆಲ ಪ್ರತಿ ಪಕ್ಷದ ಸಂಸದರು ಕಾಗದಗಳನ್ನು ಹರಿದು ಸ್ಪೀಕರ್ ಕುರ್ಚಿಯತ್ತ ಎಸೆದರು. ಈ ಹಿನ್ನೆಲೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಪ್ರಸ್ತಾವನೆ ಮಂಡಿಸಿದ ಹಿನ್ನೆಲೆಯಲ್ಲಿ, ಸದನ ಹಾಗೂ ಸ್ಪೀಕರ್ ಅವರ ಘನತೆಗೆ ಗಂಭೀರವಾಗಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಏಳು ಕಾಂಗ್ರೆಸ್ ಮತ್ತು ಒಬ್ಬ ಸಿಪಿಐ(ಎಂ) ಸದಸ್ಯರನ್ನು ಅಧಿವೇಶನದ ಉಳಿದ ಅವಧಿಗೆ ಸ್ಪೀಕರ ಅಮಾನತುಗೊಳಿಸಿದರು.
ಅಮಾನತುಗೊಂಡ ಸಂಸದರು ಮಾಣಿಕಂ ಟ್ಯಾಗೋರ್, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಗುರ್ಜಿತ್ ಸಿಂಗ್ ಔಲ್ಜಾ, ಹಿಬಿ ಈಡನ್, ಡಾ. ಪ್ರಶಾಂತ್ ಯಾದವ್ ರಾವ್ ಪಡೋಲೆ, ದೀನ್ ಕುರಿಯಾಕೋಸ್, ಕಿರಣ್ ಕುಮಾರ್ ರೆಡ್ಡಿ (ಎಲ್ಲರೂ ಕಾಂಗ್ರೆಸ್) ಹಾಗೂ ಸಿಪಿಐ(ಎಂ)ನ ಎಸ್. ವೆಂಕಟೇಶನ್ ಆಗಿದ್ದಾರೆ.
ಪ್ರಸ್ತಾವನೆ ಅಂಗೀಕರಿಸುವ ಸಂದರ್ಭದಲ್ಲಿಯೂ ಕೆಲ ಸದಸ್ಯರು ಕಾಗದಗಳನ್ನು ಹರಿದು ಎಸೆಯುತ್ತಿದ್ದುದರಿಂದ ಸದನದಲ್ಲಿ ಮತ್ತಷ್ಟು ಉದ್ವಿಗ್ನತೆ ಉಂಟಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸ್ಪೀಕರ್ ಲೋಕ ಸಭೆಯನ್ನು ದಿನದ ಮಟ್ಟಿಗೆ ಮುಂದೂಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa