
ಬೆಂಗಳೂರು, 03 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಆಜೀವಿಕಾ ಮಿಷನ್ ಕಾಯ್ದೆಯನ್ನು ತೀವ್ರವಾಗಿ ಖಂಡಿಸಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಯನ್ನು ಮರುಸ್ಥಾಪಿಸಬೇಕೆಂದು ಒತ್ತಾಯಿಸುವ ನಿರ್ಣಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ವಿಧಾನ ಸಭೆಯಲ್ಲಿ ಮಂಡಿಸಿದರು.
ನಿರ್ಣಯ ಮಂಡಿಸಿ ಮಾತನಾಡಿದ ಮುಖ್ಯಮಂತ್ರಿ, ಗ್ರಾಮೀಣ ಬಡವರ ಜೀವನೋಪಾಯಕ್ಕೆ ಆಧಾರವಾಗಿದ್ದ ಮನರೇಗಾ ಕಾಯ್ದೆಯನ್ನು ರದ್ದುಪಡಿಸಿರುವುದು ಸಂವಿಧಾನದ ಆತ್ಮಕ್ಕೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟರು.
ಪಂಚಾಯತ್ ರಾಜ್ ವ್ಯವಸ್ಥೆ, ಅಧಿಕಾರ ವಿಕೇಂದ್ರೀಕರಣ ಮತ್ತು ರಾಜ್ಯಗಳ ಹಕ್ಕುಗಳನ್ನು ದುರ್ಬಲಗೊಳಿಸುವ ಕೇಂದ್ರ ಸರ್ಕಾರದ ನಿಲುವು ಗಂಭೀರ ಆತಂಕಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.
2005ರಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದ ಮನರೇಗಾ ಕಾಯ್ದೆ ದೇಶದ ಗ್ರಾಮೀಣ ಬಡ ಕುಟುಂಬಗಳಿಗೆ ವರ್ಷಕ್ಕೆ ಕನಿಷ್ಠ 100 ದಿನಗಳ ಉದ್ಯೋಗ ಭದ್ರತೆ ಒದಗಿಸುವ ಮೂಲಕ ಸಾಮಾಜಿಕ-ಆರ್ಥಿಕ ಸ್ಥಿರತೆಯನ್ನು ತಂದಿತ್ತು. ಆದರೆ, ಅದನ್ನು ರದ್ದುಪಡಿಸಿ ವಿಬಿ–ಜಿ ಗ್ರಾಮ್ ಜಿ ಕಾಯ್ದೆಯನ್ನು ಜಾರಿಗೆ ತಂದಿರುವುದು ಗ್ರಾಮೀಣ ಭಾರತಕ್ಕೆ ನೇರ ಹೊಡೆತವಾಗಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ವಿಬಿ–ಜಿ ಗ್ರಾಮ್ ಜಿ ಕಾಯ್ದೆಯಲ್ಲಿ ಉದ್ಯೋಗ ಹಕ್ಕಿಗೆ ಯಾವುದೇ ಕಾನೂನುಬದ್ಧ ಭರವಸೆ ಇಲ್ಲದೆ, ಅನುದಾನ ಮತ್ತು ಜಾರಿಗೆ ಸಂಬಂಧಿಸಿದ ಸಂಪೂರ್ಣ ಅಧಿಕಾರವನ್ನು ಕೇಂದ್ರ ಸರ್ಕಾರವೇ ತನ್ನಲ್ಲಿಟ್ಟುಕೊಂಡಿರುವುದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಸದನ ಅಭಿಪ್ರಾಯಪಟ್ಟಿದೆ. ಇದರಿಂದ ದಲಿತರು, ಆದಿವಾಸಿಗಳು, ಮಹಿಳೆಯರು ಮತ್ತು ಅಸಂಘಟಿತ ಕಾರ್ಮಿಕ ವರ್ಗ ಹೆಚ್ಚು ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.
ಆದ್ದರಿಂದ, ಕೇಂದ್ರ ಸರ್ಕಾರ ತಕ್ಷಣವೇ ವಿಬಿ–ಗ್ರಾಮ್ ಜಿ ಕಾಯ್ದೆಯನ್ನು ವಾಪಸ್ ಪಡೆದು, ಮನರೇಗಾ ಕಾಯ್ದೆಯನ್ನು ಮರುಜಾರಿಗೆ ತರಬೇಕು ಹಾಗೂ ಬಾಕಿ ಅನುದಾನವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಬೇಕು ಎಂದು ಪ್ರತಿಪಕ್ಷಗಳ ವಿರೋಧದ ನಡುವೆ ಕರ್ನಾಟಕ ವಿಧಾನ ಸಭೆ ನಿರ್ಣಯ ಅಂಗೀಕರಿಸಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa