
ಕೋಲಾರ, ೨೩ ಫೆಬ್ರವರಿ (ಹಿ.ಸ) :
ಆ್ಯಂಕರ್: ಬಾಗಲಕೋಟೆಯಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ ಮೆರವಣಿಗೆ ಮೇಲೆ ಕಲ್ಲು,ಚಪ್ಪಲಿ ತೂರಾಟ ನಡೆಸಿದ ಮತಾಂಧ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಮತ್ತು ಬಾಗಲಕೋಟೆ ಪ್ರವೇಶಕ್ಕೆ ಪ್ರಮೋದ್ ಮುತಾಲಿಕ್, ಪುನೀತ್ ಕೆರೆಹಳ್ಳಿ ಅವರಿಗೆ ವಿಧಿಸಿರುವ ನಿಷೇಧ ರದ್ದುಗೊಳಿಸಬೇಕು ಎಂದು ಶ್ರೀರಾಮಸೇನೆ ಆಗ್ರಹಿಸಿದ ಕಾರ್ಯಕರ್ತರು ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಸೋಮವಾರ ನಗರದ ಬಸ್ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಶ್ರೀರಾಮಸೇನೆ ಕಾರ್ಯಕರ್ತರು ಮಾತನಾಡಿ, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿಯಿಂದಾಗಿ ರಾಜ್ಯದಲ್ಲಿ ಕೋಮು ಗಲಭೆಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಬಹುಸಂಖ್ಯಾತ ಹಿಂದುಗಳ ವಿರುದ್ದ ದಮನಕಾರಿ ನೀತಿ ಅನುಸರಿಸುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಕೊನೆಗಾಲ ಬಂದಿದೆ, ಮುಂದಿನ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲು ಸಿದ್ದರಾಗಿದ್ದಾರೆ ಎಂದು ತಿಳಿಸಿದರು.
ಬಾಗಲಕೋಟೆಯಲ್ಲಿ ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮೆರವಣಿಗೆ ಶಾಂತಿಯುತವಾಗಿ ನಡೆಯುತ್ತಿದ್ದಾಗ ದಂಧೆಕೋರರು ವಿನಾಕಾರಣ ಕಲ್ಲು ತೂರಿ ಪೊಲೀಸ್ ಅಧಿಕಾರಿಗಳನ್ನೇ ಗಾಯಗೊಳಿಸಿದ್ದಾರೆ ಎಂದರು.
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಹಿಂದೂಗಳ ವಿರುದ್ದದ ನೀತಿಯಿಂದಾಗಿ ಇಂದು ರಾಜ್ಯದ ಜನತೆ ರೋಸಿ ಹೋಗಿದ್ದಾರೆ, ಇವರಿಗೆ ತಕ್ಕ ಪಾಠ ಕಲಿಸುವ ಕಾಲ ಹತ್ತಿರವಾಗುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಶ್ರೀರಾಮಸೇನೆಯ ಚಿನ್ನಪ್ಪ, ಶಬರೀಷ್,ಪ್ರವೀಣ್, ಎಸ್.ಎಂ.ನಾಗರಾಜ್, ಅರುಣ್, ಸುಪ್ರೀತ್, ಪ್ರಶಾಂತ್ ಯಾದವ್, ಕಿಲಾರಿಪೇಟೆ ನಾಗ, ಆದಿ, ಮೋಹನ್, ನಾಗೇಂದ್ರ, ಅಪ್ಪು ಮತ್ತಿತರರು ಭಾಗವಹಿಸಿದ್ದರು.
ಚಿತ್ರ : ಬಾಗಲಕೋಟೆಯಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ ಮೆರವಣಿಗೆ ಮೇಲೆ ಕಲ್ಲು,ಚಪ್ಪಲಿ ತೂರಾಟ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಶ್ರೀರಾಮಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್