ಪುರಾತತ್ವ ಸ್ಮಾರಕಗಳನ್ನು ವೈಜ್ಞಾನಿಕವಾಗಿ ರಕ್ಷಣೆ ಮಾಡಲು ಯೋಜನೆ
ಪುರಾತತ್ವ ಸ್ಮಾರಕಗಳನ್ನು ವೈಜ್ಞಾನಿಕವಾಗಿ ರಕ್ಷಣೆ ಮಾಡಲು ಯೋಜನೆ
ಪುರಾತತ್ವ ಸ್ಮಾರಕಗಳನ್ನು ರಕ್ಷಿಸಲು ಯೋಜನೆ ರೂಪಿಸಲು ಕೋಲಾರ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಅಧಿಕಾರಿಗಳ ಸಭೆ ನಡೆಸಿದರು.


ಕೋಲಾರ, ಫೆಬ್ರವರಿ ೧೨ (ಹಿ.ಸ) :

ಆ್ಯಂಕರ್ : ಜಿಲ್ಲೆಯ ಐತಿಹಾಸಿಕ ಅಸ್ಮಿತೆಯಾದ ಶಾಸನಗಳು, ವೀರಗಲ್ಲುಗಳು ಹಾಗೂ ಪುರಾತತ್ವ ಸ್ಮಾರಕಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಜಿಲ್ಲೆಯ ವೈಭವಯುತ ಇತಿಹಾಸವನ್ನು ಪರಿಚಯಿಸಲು ಜಿಲ್ಲಾಡಳಿತ ಯೋಜನೆ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಜಿಲ್ಲಾ ಪಾರಂಪರಿಕ ಸಂರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಪಾರಂಪರಿಕ ತಾಣಗಳ ಅಭಿವೃದ್ಧಿ ಹಾಗೂ ಭದ್ರತೆಗೆ ಸಂಬ0ಧಿಸಿದ0ತೆ ಅಧಿಕಾರಿಗಳಿಗೆ ಪ್ರಮುಖ ಸೂಚನೆಗಳನ್ನು ನೀಡಿದರು.

ಜಿಲ್ಲೆಯಲ್ಲಿ ಪತ್ತೆಯಾಗಿರುವ ಸುಮಾರು ೨,೦೦೦ಕ್ಕೂ ಹೆಚ್ಚು ಶಾಸನಗಳು ಹಾಗೂ ಅರಕ್ಷಿತ ವೀರಗಲ್ಲುಗಳನ್ನು ಒಂದೆಡೆ ಸಂರಕ್ಷಿಸಲು ಬೃಹತ್ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲಾಗುವುದು. ಈ ಯೋಜನೆಗಾಗಿ ಜಿಲ್ಲಾಡಳಿತ ವತಿಯಿಂದ ೫ ಎಕರೆ ಜಮೀನು ನೀಡಲು ಸಿದ್ಧವಿದ್ದು, ಈಕಂಬಳ್ಳಿ ಬಳಿ ಒಳಾಂಗಣ ಮತ್ತು ಹೊರಾಂಗಣ ಸಂಗ್ರಹಾಲಯ ರೂಪಿಸುವ ಬಗ್ಗೆ ಸಾಧ್ಯತಾ ವರದಿ ನೀಡಲು ಅಪರ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಕೋಲಾರ ತಾಲ್ಲೂಕಿನ ನರಸಾಪುರ, ವೇಮಗಲ್, ಶ್ರೀನಿವಾಸಪುರದ ನಂಬಿಹಳ್ಳಿ ಹಾಗೂ ಮುಳಬಾಗಿಲಿನ ಹೆಬ್ಬಣಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿರುವ ವೀರಗಲ್ಲುಗಳನ್ನು ಸಂರಕ್ಷಿಸಿ ‘ಪಾರಂಪರಿಕ ಪಾರ್ಕ್'ಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಬಂಗಾರಪೇಟೆ ತಾಲ್ಲೂಕಿನ ಮರಗಲ್ ಗ್ರಾಮದಲ್ಲಿರುವ ಸುಮಾರು ೨೦ ವೀರಗಲ್ಲುಗಳ ಸ್ಥಳ ಪರಿಶೀಲನೆಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತೇರಹಳ್ಳಿಯ ಗಂಗರ ಕಾಲದ ದೇವಸ್ಥಾನ, ಹುನ್ಕುಂದ ಹಾಗೂ ದೊಡ್ಡಶಿವಾರ ಪ್ರದೇಶಗಳಲ್ಲಿನ ವೀರಗಲ್ಲುಗಳ ರಕ್ಷಣೆಗಾಗಿ ನಿರಂತರ ಪೊಲೀಸ್ ಗಸ್ತು ಏರ್ಪಡಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಯಿತು. ಮುಜರಾಯಿ ಇಲಾಖೆಯ ವ್ಯಾಪ್ತಿಯ ಎಲ್ಲಾ ದೇವಸ್ಥಾನಗಳಲ್ಲಿ ಲಭ್ಯವಿರುವ ಅನುದಾನ ಬಳಸಿ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳುವಂತೆ ಮುಜರಾಯಿ ತಹಶೀಲ್ದಾರರಿಗೆ ತಿಳಿಸಿದರು.

ಬೂದಿಕೋಟೆಯಲ್ಲಿನ ಹೈದರಾಲಿ ಜನ್ಮಸ್ಥಳದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಸ್ವಚ್ಛತೆಯ ಕೊರತೆ ಇರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಮತ್ತು ಸ್ಥಳೀಯ ತಹಶೀಲ್ದಾರರಿಗೆ ಸೂಚಿಸಿದರು.

ಕೋಲಾರ ನಗರದ ಸೋಮೇಶ್ವರ ದೇವಾಲಯದ ಆವರಣದ ಕಲ್ಯಾಣಿಯನ್ನು ಸ್ವಚ್ಛಗೊಳಿಸಿ, ಪಾರ್ಕ್ ಅಭಿವೃದ್ಧಿಪಡಿಸಲು ಜಂಟಿ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳಲ್ಲಿ ‘ಹೆರಿಟೇಜ್ ಕ್ಲಬ್‌ಗಳನ್ನು ಕಡ್ಡಾಯವಾಗಿ ಸಕ್ರಿಯಗೊಳಿಸುವ ಮೂಲಕ ಯುವಜನತೆಯಲ್ಲಿ ಪಾರಂಪರಿಕ ಪ್ರಜ್ಞೆ ಮೂಡಿಸಬೇಕು. ಅಲ್ಲದೆ, ಸ್ಮಾರಕಗಳ ಸಂರಕ್ಷಣೆಯ ಕುರಿತು ತಜ್ಞರಿಂದ ವಿಶೇಷ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ಪುರಾತತ್ವ ಇಲಾಖೆಗೆ ನಿರ್ದೇಶನ ನೀಡಲಾಯಿತು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಂ. ಮಂಗಳ, ಸಂಪನ್ಮೂಲ ವ್ಯಕ್ತಿ ಸ್ವಾಮಿನಾಥನ್, ಅರಿವು ಶಿವಪ್ಪ ಕೋಲಾರ ನಗರಸಭೆ ಆಯುಕ್ತ ನವೀನ್ ಚಂದ್ರ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ತುಕಾರಾಂ, ಪಾರಂಪರಿಕ ಸಮಿತಿಯ ಸದಸ್ಯರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಚಿತ್ರ : ಪುರಾತತ್ವ ಸ್ಮಾರಕಗಳನ್ನು ರಕ್ಷಿಸಲು ಯೋಜನೆ ರೂಪಿಸಲು ಕೋಲಾರ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಅಧಿಕಾರಿಗಳ ಸಭೆ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande