
ಬೆಂಗಳೂರು, 12 ಫೆಬ್ರವರಿ (ಹಿ.ಸ.) :
ಆ್ಯಂಕರ್ : ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ಕೊರತೆ ಉಂಟಾಗಿದೆ ಎಂದು ಆರೋಪಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
“ರಾಜ್ಯದಲ್ಲಿ ಆರೋಗ್ಯ ತುರ್ತುಪರಿಸ್ಥಿತಿ ಹೇರಿರುವ ರೋಗಪೀಡಿತ ಕಾಂಗ್ರೆಸ್ ಸರ್ಕಾರ” ಎಂದು ಅವರು ಟೀಕಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಸರ್ಕಾರದ ದುರಾಡಳಿತದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವ ರಕ್ಷಕ ಔಷಧಿಗಳ ತೀವ್ರ ಅಭಾವ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದಾರೆ.
“ಪ್ಯಾರಸಿಟಮಾಲ್, ಐಬುಪ್ರೊಫೇನ್, ಐವಿ ದ್ರವಗಳಂತಹ ಮೂಲಭೂತ ಔಷಧಿಗಳನ್ನು ಕೂಡ ರೋಗಿಗಳಿಗೆ ನೀಡಲಾಗದ ಪರಿಸ್ಥಿತಿ ಬಂದಿದೆ. ಸುಮಾರು 496 ಅಗತ್ಯ ಔಷಧಿಗಳ ಕೊರತೆ ಉಂಟಾಗಿದೆ ಎಂಬ ಮಾಹಿತಿ ಗಂಭೀರವಾಗಿದೆ,” ಎಂದು ವಿಜಯೇಂದ್ರ ತಿಳಿಸಿದ್ದಾರೆ.
“ಬಡ, ರೋಗಪೀಡಿತರ ಆರೈಕೆ ಮಾಡಲು ವಿಫಲವಾಗಿರುವ ಸರ್ಕಾರ, ಕುರ್ಚಿ ಕಾಳಗ, ವಿದೇಶ ಪ್ರವಾಸ ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷರಿಗೆ ಸಚಿವ ಸ್ಥಾನಮಾನ ನೀಡುವಂತಹ ಸ್ವಾರ್ಥ ರಾಜಕಾರಣದಲ್ಲಿ ತೊಡಗಿದೆ. ಬಡವರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ,” ಎಂದು ಆರೋಪಿಸಿದ್ದಾರೆ.
ಹೈಕೋರ್ಟ್ ಛೀಮಾರಿ ಹಾಕಿದ ನಂತರವೂ ಸರ್ಕಾರ ತಿದ್ದಿಕೊಳ್ಳಲಿಲ್ಲ ಎಂದು ಅವರು ಟೀಕಿಸಿದರು. “ಔಷಧಿ ಪೂರೈಕೆ ಮಾಡಲು ವಿಫಲವಾಗಿರುವ ಸರ್ಕಾರ, ದ್ವೇಷ ರಾಜಕಾರಣಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ‘ಜನೌಷಧಿ ಕೇಂದ್ರ’ಗಳನ್ನು ಮುಚ್ಚಲು ಸಂಚು ರೂಪಿಸಿತ್ತು. ಆದರೆ ಈಗ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವೇ ಪೂರೈಕೆ ಅಂತರ ಕಡಿಮೆ ಮಾಡಲು ಜನೌಷಧಿ ಯೋಜನೆ ಅಡಿ ಔಷಧಿ ಖರೀದಿಸಲು ಪ್ರಸ್ತಾವ ಸಲ್ಲಿಸಿದೆ,” ಎಂದು ಹೇಳಿದ್ದಾರೆ.
ತಕ್ಷಣವೇ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಔಷಧಿಗಳನ್ನು ಪೂರೈಸಬೇಕು ಹಾಗೂ ಜನೌಷಧಿ ಕೇಂದ್ರಗಳ ಸುಗಮ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಬಾರದು ಎಂದು ರಾಜ್ಯ ಸರ್ಕಾರವನ್ನು ವಿಜಯೇಂದ್ರ ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa