
ವಿಜಯಪುರ, 12 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಲಸಂಗಿ ಗೆಳೆಯರ ಪ್ರತಿಷ್ಠಾನದ ವತಿಯಿಂದ ಡಾ. ಸಿಂಪಿ ಲಿಂಗಣ್ಣವರ 121ನೇ ಜನ್ಮ ದಿನಾಚರಣೆಯನ್ನು ಬುಧವಾರ ನಗರದ ಬಿ.ಎಲ್.ಡಿ.ಇ ರಸ್ತೆಯದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ (ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆ) ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಪ್ರಾಚಾರ್ಯರಾದ ಡಾ.ಎಸ್.ಟಿ.ಬೋಳರಡ್ಡಿ ಅವರು, ವಿದ್ಯಾರ್ಥಿಗಳಿಗೆ ಜಾನಪದ ಹಾಗೂ ಸಾಹಿತ್ಯದ ವಿಷಯಗಳನ್ನು ಅರಿಯಲು ಅವಕಾಶ ಒದಗಿದೆ ಎಂದರು.
ಡಾ ಮಲ್ಲಿಕಾರ್ಜುನ ಮೇತ್ರಿ ಮಾತನಾಡಿ, ಜಾನಪದ ದಿಗ್ಗಜ ರಾಷ್ಟ್ರ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತ,ಸಾಹಿತಿಗಳಾದ ಸಿಂಪಿ ಲಿಂಗಣ್ಣ ಅವರು ಅಪರೂಪದ ಸಾಧನೆ ಮಾಡಿದ್ದಾರೆ. ಹಳ್ಳಿಗರ ಮಧ್ಯವಿದ್ದು ಅವರ ಹಾಡುಗಳನ್ನು ಸಂಗ್ರಹಿಸಿ, ಕನ್ನಡ ನಾಡಿಗೆ ಕೊಡುಗೆಯಾಗಿ ಕೀರ್ತಿ ತಂದುಕೊಟ್ಟವರು, ಸಿಂಪಿಲಿಂಗಣ್ಣನವರು, ಸಾಹಿತ್ಯದ ಋಷಿಯಾಗಿ ಅರವಿಂದರ ಹಾಗೂ ರಾಮತೀರ್ಥರ ತಾತ್ವಿಕ ಚಿಂತನೆಯನ್ನು ಅನುವಾದದ ಮೂಲಕ ಕನ್ನಡಕ್ಕೆ ತಂದ ಶ್ರೇಯ ಅವರದ್ದಾಗಿದೆ. ಸಾಹಿತ್ಯದ ಆರಾಧಕರಾಗಿ ಕೆಲಸ ಮಾಡಿ ಅನೇಕ ಗೌರವ ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
ಶಿವಶರಣಪ್ಪ ಶಿರೂರ (ಯಾಳಗಿ)ಮಾತನಾಡಿ ಈಗಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಜನಪದ ಸಾಹಿತ್ಯ ಹಲವಾರು ತಿರುವುಗಳನ್ನು ಪಡೆದುಕೊಂಡು ಬೆಳೆಯುತ್ತಿದೆ. ಮೂಲ ಜಾನಪದ ಕಲೆಯನ್ನು ಇಂದಿನ ಪೀಳಿಗೆಯ ವಿದ್ಯಾರ್ಥಿಗಳು ಮರೆಯದೇಉಳಿಸಿ ಬೆಳೆಸಬೇಕು.ನಮ್ಮ ಹಿರಿಯರು ಮನೆ ಕೆಲಸ ಮಾಡುವಾಗ, ಕುಟ್ಟುವಾಗ, ಬೀಸುವಾಗ, ಹಂತಿಪದಗಳು ಇಂದಿಗೂ ಜನಮಾನಸದಲ್ಲಿ ನೆಲೆನಿಂತಿವೆ ಎಂದರು.
ಬಿ.ಆರ್ ಬನಸೋಡೆ ಅವರು ಮಾತನಾಡಿ ಸಿಂಪಿಲಿಂಗಣ್ಣ ಅವರೊಂದಿಗೆ ಕಳೆದ ಕ್ಷಣಗಳ ಬಗ್ಗೆ ಮೆಲುಕು ಹಾಕಿ,ಇವರು ಚಡಚಣದಲ್ಲಿ ನಾಡಹಬ್ಬವನ್ನು ಅದ್ದೂರಿಯಾಗಿ ಎಲ್ಲರನ್ನು ಒಗ್ಗೂಡಿಸಿ ಆಗಿನ ಕಾಲದಲ್ಲಿಯೇ ಆಚರಿಸುತ್ತಿದ್ದರು. ಪ್ರಸ್ತುತ ಅಂತಹ ಆಚರಣೆಗಳು ಕಣ್ಮರೆಯಾಗುತ್ತಿವೆ ಎಂದರು.
ಹಲಸಂಗಿ ಪ್ರತಿಷ್ಠಾನದ ಸದಸ್ಯರಾದ ಡಾ.ವಿ.ಡಿ.ಐಹೊಳ್ಳಿ,ಡಾ.ಸಿಂಪಿ ಲಿಂಗಣ್ಣನವರ ಪುತ್ರರಾದ ಆರ್ ಎನ್ ಸಿಂಪಿ ಹಾಗೂ ಅರುಣ ಸಿಂಪಿ ಮತ್ತು ಅವರ ಕುಟುಂಬಸ್ಥರು ಶಂಕ್ರಪ್ಪ ಗಿರಿಮಲ್ಲಪ್ಪ ಗಲಗಲಿ ಹಾಗೂ ಸುಭಾಷ ಯಾದವಾಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸದಸ್ಯರಾದ ಪುಲಕೇಶಿ ಪುರುಷೋತ್ತಮ ಗಲಗಲಿ, ದಾಕ್ಷಾಯಣಿ ರಮೇಶ ಬಿರಾದಾರ ಹಾಗೂ ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಶಿಕ್ಷಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಿಬ್ಬಂದಿಗಳು ಇದ್ದರೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande