ರಾಷ್ಟ್ರೀಯ ಜಂತುಹುಳು ನಿರ್ಮೂಲನಾ ದಿನಾಚರಣೆಗೆ ಚಾಲನೆ
ರಾಷ್ಟಿçÃಯ ಜಂತುಹುಳು ನಿರ್ಮೂಲನಾ ದಿನಾಚರಣೆಗೆ ಚಾಲನೆ
ಕೋಲಾರ ನಗರದ ನೂತನ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಜಂತುಹುಳು ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ತಾಲ್ಲೂಕು ಆರೋಗ್ಯಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ಅಲ್ಬಂಡೋಜಲ್ ಮಾತ್ರೆ ನೀಡಿದರು.


ಕೋಲಾರ, ೧೦ ಫೆಬ್ರವರಿ (ಹಿ.ಸ) :

ಆ್ಯಂಕರ್ : ರಕ್ತಹೀನತೆ ಮತ್ತಿತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾದ ಜಂತುಹುಳು ನಿರ್ಮೂಲನೆಗೆ ಆರೋಗ್ಯ ಇಲಾಖೆ ಕ್ರಮವಹಿಸಿದ್ದು, ತಾಲ್ಲೂಕಿನಾದ್ಯಂತ ೧-೫ ವರ್ಷದೊಳಗಿನ ೩೨೫೮೫ ಮಕ್ಕಳಿಗೆ ಹಾಗೂ ೬-೧೯ ವರ್ಷದೊಳಗಿನ ೬೯೭೨೫ ಮಂದಿಗೆ ಉಚಿತ ಅಲ್ಬೆಂಡೋಜಲ್ ಮಾತ್ರೆ ನೀಡಲಾಗುತ್ತಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ತಿಳಿಸಿದರು.

ನಗರದ ನೂತನ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆದ ತಾಲ್ಲೂಕು ಮಟ್ಟದ ರಾಷ್ಟ್ರೀಯ ಜಂತುಹುಳು ನಿರ್ಮೂಲನಾ ದಿನಾಚರಣೆ ಅಂಗವಾಗಿ ಶಾಲೆ-ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೆ ಜಂತುಹುಳು ನಿರ್ಮೂಲನಾ ಮಾತ್ರೆ ವಿತರಿಸಿ ಮಾತನಾಡಿದರು.

ಜಂತುಹುಳು ಮಾತ್ರೆಯನ್ನು ವರ್ಷಕ್ಕೆರಡು ಬಾರಿ ನೀಡುವುದರಿಂದ ಜಂತುಹುಳು ನಾಶವಾಗುತ್ತದೆ, ಮಕ್ಕಳನ್ನು ಕಾಡುವ ಅನಿಮಿಯಾದಿಂದಲೂ ಮುಕ್ತಿ ಪಡೆಯಬಹುದು ಎಂದು ತಿಳಿಸಿದ ಅವರು, ಇದರಿಂದ ಮಕ್ಕಳಲ್ಲಿ ದೈನಂದಿನ ಚಟುವಟಿಕೆಯಲ್ಲಿ ಚುರುಕುತನ ಮೂಡುತ್ತದೆ, ರೋಗನಿರೋಧಕ ಶಕ್ತಿ ಹೆಚ್ಚಾಗಿ ಕಲಿಕಾಸಕ್ತಿ ಮೂಡುತ್ತದೆ. ಮಕ್ಕಳಲ್ಲಿನ ಅನಿಮಿಯಗೂ ಈ ಜಂತುಹುಳು ಕಾರಣವಾಗಿದ್ದು, ಪ್ರತಿಯೊಬ್ಬರು ಬಳಸಬೇಕು ಎಂದು ತಿಳಿಸಿ, ಜಂತುಹುಳು ನಿವಾರಣೆ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಫೆಬ್ರವರಿ ಮತ್ತು ಆಗಸ್ಟ್ ತಿಂಗಳಲ್ಲಿ ಒಂದರಿ0ದ ೧೯ ವರ್ಷದ ಎಲ್ಲಾ ಮಕ್ಕಳಿಗೂ ಆಲ್‌ಬೆಂಡೊಸಲ್ ಮಾತ್ರೆಗಳನ್ನ ಆರು ತಿಂಗಳಿಗೊಮ್ಮೆ ಬಿಸಿ ಊಟದ ಜೊತೆಗೆ ಸರ್ಕಾರ ನೀಡುತ್ತಿದ್ದು ಇದನ್ನು ಚಾಚು ತಪ್ಪದೇ ಎಲ್ಲರೂ ಉಪಯೋಗಿಸಿಕೊಳ್ಳಲು ತಿಳಿಸಿದರು.

ಶಾಲೆಗೆ ಹಾಜರಾದ ಮಕ್ಕಳಿಗೆ ಸಹ ಮಾತ್ರೆ ನೀಡಲಾಗುವುದೆಂದ ಅವರು, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಸಾಮಾನ್ಯವಾಗಿ ರಕ್ತಹೀನತೆ ಹೊಟ್ಟೆ ನೋವು ನಿಶ್ಯಕ್ತಿ ಉಂಟಾಗಿ ಪಾಠ ಪ್ರವಚನಗಳಲ್ಲಿ ತೊಡಗಿಕೊಳ್ಳಲು ನಿರಾಸಕ್ತಿ ನಿರುತ್ಸಾಹ ಇರುತ್ತದೆ ಅನಾರೋಗ್ಯದಿಂದ ಮಕ್ಕಳು ಶಾಲೆಗೆ ಗೈರು ಹಾಜರಾಗುತ್ತಾರೆ ಇದನ್ನ ತಪ್ಪಿಸುವ ಉದ್ದೇಶದಿಂದಲೇ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಮಕ್ಕಳು ಆರೋಗ್ಯವಂತರಾಗಿ ಶಾಲೆಗಳಲ್ಲಿ ಪಾಠ ಪ್ರವಚನಗಳಲ್ಲಿ ಆಟ ಪಾಠಗಳಲ್ಲಿ ತೊಡಗಿಸಿಕೊಳ್ಳಲು ಪೌಷ್ಟಿಕ ಆಹಾರವನ್ನು ಸೇವಿಸುವುದರಿಂದ ಉತ್ತಮ ಬೆಳವಣಿಗೆ ಕಾಣಬಹುದಾಗಿದೆ. ಪ್ರತಿನಿತ್ಯ ವೈಯಕ್ತಿಕ ಸ್ವಚ್ಛತೆ ಶೌಚಾಲಯವನ್ನು ಬಳಸಲು ಉತ್ತಮ ನಿರ್ವಹಣೆ ಮಾಡುವುದು ಊಟಕ್ಕೆ ಮೊದಲು ಕೈಕಾಲುಗಳನ್ನು ತೊಳೆಯುವುದರ ಮುಖಾಂತರ ಜಂತುಹುಳು ನಮ್ಮ ಹೊಟ್ಟೆ ಸೇರಲು ತಡೆಯಬಹುದಾಗಿದೆ ಆದ್ದರಿಂದ ಯಾವುದೇ ಪದಾರ್ಥಗಳನ್ನು ಬಳಸುವ ಸಂದರ್ಭದಲ್ಲಿ ಚೆನ್ನಾಗಿ ನೀರಿನಲ್ಲಿ ತೊಳೆದು ತಿನ್ನಬೇಕು ಎಂದರು.

ಹಿರಿಯ ಆರೋಗ್ಯ ನಿರೀಕ್ಷಕ ಸತ್ಯನಾರಾಯಣಗೌಡ ಮಾತನಾಡಿ, ಮಕ್ಕಳಿಗೆ ಕೈತೊಳೆಯುವ ಅಭ್ಯಾಸದ ಅರಿವು ನೀಡಿದ ಅವರು, ಶೌಚಕ್ಕೆ ಹೋಗಿ ಬಂದ ನಂತರ ಮತ್ತು ಊಟಕ್ಕೆ ಮೊದಲು ಕೈ ತೊಳೆಯುವುದರಿಂದ ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದು ಎಂದ ಅವರು, ಅಲ್ಬೆಂಡೋಜಲ್ ಮಾತ್ರೆ, ಜಂತುಹುಳು ನಿವಾರಣೆಯಲ್ಲಿ ಮುಖ್ಯಪಾತ್ರ ವಹಿಸುತ್ತದೆ ಎಂದರು.

ಶಿಕ್ಷಣ ಸಂಯೋಜಕ ಕೆ.ಶ್ರೀನಿವಾಸ್ ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿನ ವೈಫಲ್ಯದಿಂದ ಇಂದು ಸೊಳ್ಳೆಗಳ ಹಾವಳಿ, ಸಾಂಕ್ರಾಮಿಕ ರೋಗಗಳ ಭೀತಿಯ ಆತಂಕ ಎದುರಿಸುತ್ತಿದ್ದೇವೆ ಎಂದ ಅವರು, ನಮ್ಮ ಮನೆ ಮತ್ತು ನಮ್ಮ ಶಾಲೆ ಸುತ್ತ ನೈರ್ಮಲ್ಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂಬುದನ್ನು ಮನಗಾಣಬೇಕು. ಡೆಂಗ್ಯು, ಚಿಕನ್‌ಗುನ್ಯಾ ಕಾಯಿಲೆಗಳು ಜಿಲ್ಲೆಯಲ್ಲಿ ಕಾಡುತ್ತಿವೆ, ಇದಕ್ಕೆ ಸೊಳ್ಳೆಗಳೇ ಕಾರಣ ಎಂಬ ಸತ್ಯದ ಅರಿವು ಇದೆ, ಆದರೆ ಸೊಳ್ಳೆಗಳ ನಿಯಂತ್ರಣಕ್ಕೆ ನಾವೆಷ್ಟು ಕೆಲಸ ಮಾಡಿದ್ದೇವೆ ಎಂಬುದರ ಆತ್ಮ ವಿಮರ್ಶೆ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸತೀಶ್‌ಕುಮಾರ್, ನಾರಾಯಣರೆಡ್ಡಿ, ಜಿ.ಎಸ್.ಕೋಮುಲ, ಉಮೇರಾಪಾತಿಮಾ, ವೆಂಕಟರಮಣಪ್ಪ, ಕಾಳಿಸಾದ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ : ಕೋಲಾರ ನಗರದ ನೂತನ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಜಂತುಹುಳು ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ತಾಲ್ಲೂಕು ಆರೋಗ್ಯಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ಅಲ್ಬಂಡೋಜಲ್ ಮಾತ್ರೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande