ದೇಶದ ಎಲ್ಲ ಜಿಲ್ಲೆಗಳು ನಕ್ಸಲ್ವಾದದಿಂದ ಮುಕ್ತ:ಪ್ರಧಾನಿ ಮೋದಿ
ನವದೆಹಲಿ, 08 ನವೆಂಬರ್ (ಹಿ.ಸ.): ಈ ಬಾರಿಯ ದೀಪಾವಳಿ ವಿಶೇಷವಾಗಿದೆ. ದೇಶದ ಪ್ರತಿಯೊಂದು ಜಿಲ್ಲೆಯೂ ನಕ್ಸಲ್‌ವಾದದಿಂದ ಮುಕ್ತವಾಗಿದ್ದು, ಕೋಟ್ಯಂತರ ಜನರು ಎಡಪಂಥೀಯ ಉಗ್ರವಾದದ ಪ್ರಭಾವದಿಂದ ಹೊರಬಂದಿದ್ದಾರೆ. ಕಳೆದ ಒಂದು ವರ್ಷದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಸಿಆರ್‌ಪಿಎಫ್‌ನ ಒಬ್ಬ ಯೋಧನೂ ಪ್ರಾಣ ಕ
प्रधानमंत्री जवानों को सम्बोधित करते हुए


ನವದೆಹಲಿ, 08 ನವೆಂಬರ್ (ಹಿ.ಸ.):

ಈ ಬಾರಿಯ ದೀಪಾವಳಿ ವಿಶೇಷವಾಗಿದೆ. ದೇಶದ ಪ್ರತಿಯೊಂದು ಜಿಲ್ಲೆಯೂ ನಕ್ಸಲ್‌ವಾದದಿಂದ ಮುಕ್ತವಾಗಿದ್ದು, ಕೋಟ್ಯಂತರ ಜನರು ಎಡಪಂಥೀಯ ಉಗ್ರವಾದದ ಪ್ರಭಾವದಿಂದ ಹೊರಬಂದಿದ್ದಾರೆ. ಕಳೆದ ಒಂದು ವರ್ಷದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಸಿಆರ್‌ಪಿಎಫ್‌ನ ಒಬ್ಬ ಯೋಧನೂ ಪ್ರಾಣ ಕಳೆದುಕೊಂಡಿಲ್ಲ. 47 ವರ್ಷಗಳ ಬಳಿಕ ಇಂತಹ ಸಾಧನೆ ಮೊದಲ ಬಾರಿಗೆ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ದೀಪಾವಳಿ ಸಂಪ್ರದಾಯದಂತೆ ಈ ಬಾರಿಯೂ ಪ್ರಧಾನಿ ಮೋದಿ ಭದ್ರತಾ ಪಡೆಗಳ ಯೋಧರೊಂದಿಗೆ ಹಬ್ಬ ಆಚರಿಸಿದರು. ಈ ಬಾರಿ ಛತ್ತೀಸ್‌ಗಢದ ಬಸ್ತರ್ ಜಿಲ್ಲೆಗೆ ಭೇಟಿ ನೀಡಿ, ಕೇಂದ್ರ ಮೀಸಲು ಪೊಲೀಸ್ ಪಡೆಯ ಯೋಧರೊಂದಿಗೆ ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಂಡರು.

ಯೋಧರನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಆಂತರಿಕ ಭದ್ರತೆ ಬಲಿಷ್ಠವಾಗಿದ್ದಾಗ ಮಾತ್ರ ಹೊರಗಿನ ಶತ್ರುಗಳ ವಿರುದ್ಧ ಸಮರ್ಥವಾಗಿ ಹೋರಾಡಲು ಸಾಧ್ಯ. ಹಿಂದಿನ ಸರ್ಕಾರಗಳು ನಕ್ಸಲ್‌ವಾದವನ್ನು ಗುಣಪಡಿಸಲಾಗದ ಕಾಯಿಲೆ ಎಂದು ಭಾವಿಸಿ ನಿರ್ಲಕ್ಷಿಸಿದ್ದವು. ಇಂತಹ ನೀತಿಯಿಂದ ದೇಶ ಮುನ್ನಡೆಯಲು ಸಾಧ್ಯವಿರಲಿಲ್ಲ. 2014ರಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೃಢವಾದ ಕಾರ್ಯತಂತ್ರ, ರಾಜಕೀಯ ಇಚ್ಛಾಶಕ್ತಿ ಮತ್ತು ಆತ್ಮವಿಶ್ವಾಸದೊಂದಿಗೆ ನಕ್ಸಲ್‌ವಾದದ ವಿರುದ್ಧ ನಿರ್ಣಾಯಕ ಹೋರಾಟ ಆರಂಭಿಸಲಾಯಿತು. ಅದರ ಫಲವಾಗಿ ಇಂದು ದೇಶ ನಕ್ಸಲ್‌ವಾದದಿಂದ ಮುಕ್ತವಾಗಿದೆ ಎಂದು ತಿಳಿಸಿದರು.

ನಕ್ಸಲ್‌ವಾದದಿಂದ ಬಾಧಿತವಾಗಿದ್ದ ಪ್ರದೇಶಗಳ ಜನರ ಬದುಕಿನಲ್ಲಿ ಬದಲಾವಣೆ ತರಲು ಸರ್ಕಾರ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದೆ. ಹೀಗಾಗಿ ನಕ್ಸಲ್‌ವಾದದಿಂದ ಸಂತ್ರಸ್ತರಾದ ಜನರು ಸರ್ಕಾರ ಮತ್ತು ಭದ್ರತಾ ಪಡೆಗಳ ಬೆಂಬಲಕ್ಕೆ ದೃಢವಾಗಿ ನಿಂತಿದ್ದಾರೆ ಎಂದರು.

ಭದ್ರತಾ ಪಡೆಗಳ ಯೋಧರ ತ್ಯಾಗ, ಪರಿಶ್ರಮ ಮತ್ತು ಸಮರ್ಪಣಾ ಮನೋಭಾವವನ್ನು ಶ್ಲಾಘಿಸಿದ ಪ್ರಧಾನಿ, ನಕ್ಸಲರ ಭಯೋತ್ಪಾದನೆ ಅಂತ್ಯಗೊಳ್ಳಲು ಮತ್ತು ಅಭಿವೃದ್ಧಿಯ ಹೊಸ ಹಾದಿ ತೆರೆದುಕೊಳ್ಳಲು ಯೋಧರ ಪ್ರಯತ್ನಗಳೇ ಕಾರಣವಾಗಿವೆ. ದೇಶದ ಜನರ ಪರವಾಗಿ ಕೃತಜ್ಞತೆ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.

ದೇಶದ ಆಂತರಿಕ ಭದ್ರತೆಯಲ್ಲಿ ತೊಡಗಿರುವ ಕೇಂದ್ರ ಮೀಸಲು ಪೊಲೀಸ್ ಪಡೆ, ಕೋಬ್ರಾ ಪಡೆ, ಗಡಿ ಭದ್ರತಾ ಪಡೆ, ಇಂಡೋ-ಟಿಬೆಟನ್ ಗಡಿ ಪೊಲೀಸ್ ಪಡೆ, ಸಶಸ್ತ್ರ ಸೀಮಾ ಬಲ, ಭಾರತೀಯ ಮೀಸಲು ಪಡೆಗಳು ಹಾಗೂ ವಿವಿಧ ರಾಜ್ಯಗಳ ಪೊಲೀಸ್ ಸಿಬ್ಬಂದಿ, ಬಸ್ತರ್ ಫೈಟರ್ಸ್ ವಿಶೇಷ ಪಡೆಯ ಕಮಾಂಡೊಗಳು ಮತ್ತು ಮಹಿಳಾ ಯೋಧರ ಸೇವೆಯನ್ನು ದೇಶ ಎಂದಿಗೂ ಮರೆಯುವುದಿಲ್ಲ. ಅವರ ಸೇವೆಗೆ ಇಡೀ ದೇಶ ಋಣಿಯಾಗಿದೆ ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಪಡಿಸುವ ಹಾಗೂ ದೇಶವನ್ನು ನಕ್ಸಲ್‌ವಾದದಿಂದ ಮುಕ್ತಗೊಳಿಸುವ ಸಂಕಲ್ಪವನ್ನು ಸರ್ಕಾರ ಈಡೇರಿಸಿದೆ. ಇದೇ ರೀತಿ ದೇಶವನ್ನು ಬಡತನದಿಂದ ಮುಕ್ತಗೊಳಿಸುವುದು, ಮಾದಕ ವಸ್ತುಗಳ ವ್ಯಸನಮುಕ್ತ ರಾಷ್ಟ್ರವನ್ನಾಗಿಸುವುದು, ಅಭಿವೃದ್ಧಿ ಹೊಂದಿದ ಭಾರತ ಮತ್ತು ಸ್ವಾವಲಂಬಿ ಭಾರತದ ಗುರಿ ಸಾಧಿಸುವಲ್ಲಿಯೂ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಕ್ಸಲ್‌ವಾದದ ವಿರುದ್ಧದ ಹೋರಾಟದಲ್ಲಿ ಮಹತ್ವದ ಸಾಧನೆ ಮಾಡಿದ್ದರೂ ಅಪಾಯ ಸಂಪೂರ್ಣವಾಗಿ ದೂರವಾಗಿಲ್ಲ ಎಂದು ಎಚ್ಚರಿಸಿದ ಪ್ರಧಾನಿ, ಕಾಡುಗಳಿಂದ ನಕ್ಸಲರನ್ನು ನಿರ್ಮೂಲನೆ ಮಾಡಿರಬಹುದು. ಆದರೆ, ವಿಚಾರಧಾರೆಯ ಮೂಲಕ ನಕ್ಸಲ್‌ವಾದವನ್ನು ಹರಡುವವರು ಹಲವು ಸಂಘಟನೆಗಳನ್ನು ಆಕ್ರಮಿಸಿಕೊಂಡಿದ್ದಾರೆ. ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳಲ್ಲಿಯೂ ನುಸುಳಿದ್ದಾರೆ. ಇಂತಹವರನ್ನು ಗುರುತಿಸುವುದು ಅಗತ್ಯ. ಅವರು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿರುದ್ಧ ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇತ್ತೀಚಿನ ವಿಶ್ವಬ್ಯಾಂಕ್ ವರದಿಯನ್ನು ಉಲ್ಲೇಖಿಸಿದ ಪ್ರಧಾನಿ, ಕಳೆದ 12 ವರ್ಷಗಳಲ್ಲಿ ದೇಶದಲ್ಲಿ 50 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ತಿಳಿಸಿದರು. ಬಡತನ ನಿರ್ಮೂಲನೆಯ ಘೋಷಣೆಗಳಿಂದ ಸಾಧ್ಯವಾಗದ ಕೆಲಸವನ್ನು ಕಳೆದ 12 ವರ್ಷಗಳಲ್ಲಿ ದೇಶ ಸಾಧಿಸಿ ತೋರಿಸಿದೆ ಎಂದರು.

ಬಡವರ ಕಲ್ಯಾಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳನ್ನು ಪ್ರಸ್ತಾಪಿಸಿದ ಅವರು, ಜನಧನ, ಪ್ರಧಾನಮಂತ್ರಿ ಆವಾಸ್, ಮುದ್ರಾ, ಸ್ವನಿಧಿ, ಆಯುಷ್ಮಾನ್ ಭಾರತ್, ಉಚಿತ ಪಡಿತರ, ಕಡಿಮೆ ದರದ ಔಷಧಗಳು ಮತ್ತು ಭದ್ರತೆಗೆ ಸಂಬಂಧಿಸಿದ ಯೋಜನೆಗಳು ಪರಸ್ಪರ ಬೆಸೆದುಕೊಂಡು ಸುಂದರ ರಂಗೋಲಿಯಂತೆ ಫಲ ನೀಡುತ್ತಿವೆ ಎಂದು ಹೇಳಿದರು. ಹಿಂದೆ ಬಡತನವನ್ನೇ ಪಿತ್ರಾರ್ಜಿತವಾಗಿ ಪಡೆಯುತ್ತಿದ್ದ ಕುಟುಂಬಗಳು ಇಂದು ಉತ್ತಮ ಭವಿಷ್ಯದ ನಿರೀಕ್ಷೆ ಹೊಂದುವಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande