ತವಾಂಗ್ನಲ್ಲಿ ಬುದ್ಧನ ಪವಿತ್ರ ಅವಶೇಷಗಳ ದರ್ಶನ: 31 ಸಾವಿರ ಭಕ್ತರು ಭಾಗಿ
ನವದೆಹಲಿ, 08 ನವೆಂಬರ್ (ಹಿ.ಸ.): ಅರುಣಾಚಲ ಪ್ರದೇಶದ ತವಾಂಗ್‌ನ ಗದೆನ್ ನಮ್ಗ್ಯಾಲ್ ಲ್ಹಾತ್ಸೆ (ತವಾಂಗ್ ಮಠ)ದಲ್ಲಿ ಭಗವಾನ್ ಶಾಕ್ಯಮುನಿ ಬುದ್ಧನ ಪವಿತ್ರ ಅವಶೇಷಗಳ ಏಳು ದಿನಗಳ ಪ್ರದರ್ಶನ ನ.7ರಂದು ಮುಕ್ತಾಯಗೊಂಡಿದೆ. ಈ ಅವಧಿಯಲ್ಲಿ ಒಟ್ಟು 31 ಸಾವಿರ ಭಕ್ತರು ಹಾಗೂ ಪ್ರವಾಸಿಗರು ಪವಿತ್ರ ಅವಶೇಷಗಳ ದರ್
तवांग स्थित गदेन नामग्याल ल्हात्से (तवांग मठ) में भगवान शाक्यमुनि बुद्ध के पवित्र अवशेषों के दर्शन करते श्रद्धालु। 7 दिवसीय प्रदर्शनी के दौरान 31 हजार से अधिक श्रद्धालुओं ने अवशेषों के दर्शन


ನವದೆಹಲಿ, 08 ನವೆಂಬರ್ (ಹಿ.ಸ.):

ಅರುಣಾಚಲ ಪ್ರದೇಶದ ತವಾಂಗ್‌ನ ಗದೆನ್ ನಮ್ಗ್ಯಾಲ್ ಲ್ಹಾತ್ಸೆ (ತವಾಂಗ್ ಮಠ)ದಲ್ಲಿ ಭಗವಾನ್ ಶಾಕ್ಯಮುನಿ ಬುದ್ಧನ ಪವಿತ್ರ ಅವಶೇಷಗಳ ಏಳು ದಿನಗಳ ಪ್ರದರ್ಶನ ನ.7ರಂದು ಮುಕ್ತಾಯಗೊಂಡಿದೆ. ಈ ಅವಧಿಯಲ್ಲಿ ಒಟ್ಟು 31 ಸಾವಿರ ಭಕ್ತರು ಹಾಗೂ ಪ್ರವಾಸಿಗರು ಪವಿತ್ರ ಅವಶೇಷಗಳ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ಇದೀಗ ಈ ಅವಶೇಷಗಳನ್ನು ನ.8ರಿಂದ 13ರವರೆಗೆ ಬೊಮ್ಡಿಲಾದ ಟಿಜಿಎಲ್ ಮಠದ (ಲೋವರ್ ಗೊಂಪಾ)ದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುತ್ತದೆ.

ಕೇಂದ್ರ ಸಂಸ್ಕೃತಿ ಸಚಿವಾಲಯವು ಅರುಣಾಚಲ ಪ್ರದೇಶ ಸರ್ಕಾರ ಹಾಗೂ ನವದೆಹಲಿಯ ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟದ ಸಹಯೋಗದಲ್ಲಿ ಈ ಪ್ರದರ್ಶನವನ್ನು ಆಯೋಜಿಸಿತ್ತು. ಅ.31ರಂದು ನವದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯದಿಂದ ನಿಗದಿತ ಶಿಷ್ಟಾಚಾರ ಮತ್ತು ಸಮಾರಂಭದೊಂದಿಗೆ ಪವಿತ್ರ ಅವಶೇಷಗಳನ್ನು ತವಾಂಗ್‌ಗೆ ತರಲಾಗಿತ್ತು. ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಉಪಸ್ಥಿತಿಯಲ್ಲಿ ಅವಶೇಷಗಳನ್ನು ಅಧಿಕೃತವಾಗಿ ಸ್ವಾಗತಿಸಿದ್ದರು.

ಏಳು ದಿನಗಳ ಕಾಲ ನಡೆದ ಪ್ರದರ್ಶನದಲ್ಲಿ ಬೌದ್ಧ ಸನ್ಯಾಸಿಗಳು, ಹಿರಿಯ ನಾಗರಿಕರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ತವಾಂಗ್ ಜಿಲ್ಲೆಯ ವಿವಿಧ ಪ್ರದೇಶಗಳು ಹಾಗೂ ಸುತ್ತಮುತ್ತಲಿನ ಭಾಗಗಳಿಂದ ಭಕ್ತರು ಆಗಮಿಸಿ ಬುದ್ಧನ ಪವಿತ್ರ ಅವಶೇಷಗಳ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಪೆಮಾ ಖಂಡು ಅವರು ಮಠದಲ್ಲಿ ಎರಡು ವಿಶೇಷ ಪ್ರದರ್ಶನಗಳನ್ನು ಉದ್ಘಾಟಿಸಿದರು. ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟ ಆಯೋಜಿಸಿದ್ದ ‘ಅನ್‌ಅರ್ಥಿಂಗ್ ದಿ ಸೆಕ್ರೆಡ್ ಪಿಪ್ರಹ್ವಾ’ ಪ್ರದರ್ಶನದಲ್ಲಿ 1898ರಲ್ಲಿ ಪಿಪ್ರಹ್ವಾದಲ್ಲಿ ಬುದ್ಧನ ಪವಿತ್ರ ಅವಶೇಷಗಳು ಪತ್ತೆಯಾದ ಐತಿಹಾಸಿಕ ಸಂಗತಿಗಳನ್ನು ಪರಿಚಯಿಸಲಾಯಿತು. ರಾಷ್ಟ್ರೀಯ ವಸ್ತುಸಂಗ್ರಹಾಲಯ ಸಿದ್ಧಪಡಿಸಿದ್ದ ‘ಕ್ರಾಸ್‌ರೋಡ್ಸ್ ಆಫ್ ಧಮ್ಮ’ ಪ್ರದರ್ಶನದಲ್ಲಿ ಬೌದ್ಧ ಧರ್ಮದ ಐತಿಹಾಸಿಕ, ಕಲಾತ್ಮಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲಾಯಿತು.

ಇದಲ್ಲದೆ, ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟವು ನ.2ರಂದು ತವಾಂಗ್‌ನ ಕಲಾವಾಂಗ್ಪೊ ಸಮಾವೇಶ ಕೇಂದ್ರದಲ್ಲಿ ‘ಹಿಮಾಲಯ ಪ್ರದೇಶ ಮತ್ತು ಅದರಾಚೆಗೆ ಬೌದ್ಧ ಧರ್ಮದ ಪ್ರಸಾರ’ ವಿಷಯದ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಿತ್ತು. ಭಾರತ ಸೇರಿದಂತೆ ವಿವಿಧ ದೇಶಗಳ ಬೌದ್ಧ ವಿದ್ವಾಂಸರು, ಧಾರ್ಮಿಕ ಮುಖಂಡರು ಹಾಗೂ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಹಿಮಾಲಯ ಪ್ರದೇಶ ಮತ್ತು ಅದರಾಚೆಗೆ ಬೌದ್ಧ ಬೋಧನೆಗಳ ಪ್ರಸಾರ ಹಾಗೂ ಧಾರ್ಮಿಕ ಪರಂಪರೆಯ ಸಂರಕ್ಷಣೆ ಕುರಿತು ಚರ್ಚಿಸಲಾಯಿತು.

ತವಾಂಗ್‌ನಲ್ಲಿ ಪ್ರದರ್ಶನ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ನ.8ರಂದು ಭಾರತೀಯ ವಾಯುಪಡೆಯ ವಿಮಾನದ ಮೂಲಕ ಪವಿತ್ರ ಅವಶೇಷಗಳನ್ನು ಬೊಮ್ಡಿಲಾಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿನ ಅಪರ್ ಗೊಂಪಾದಲ್ಲಿ ಸ್ವಲ್ಪ ಸಮಯ ಇರಿಸಿದ ಬಳಿಕ ಟಿಜಿಎಲ್ ಮಠದ (ಲೋವರ್ ಗೊಂಪಾ)ದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ನ.8ರಿಂದ 13ರವರೆಗೆ ಭಕ್ತರು ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ನಂತರ ಪವಿತ್ರ ಅವಶೇಷಗಳನ್ನು ನಾಮ್ಸಾಯಿಯ ಗೋಲ್ಡನ್ ಪಗೋಡಾಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ನ.14ರಿಂದ 20ರವರೆಗೆ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುತ್ತದೆ. ಬಳಿಕ ನ.21ರಂದು ಅವಶೇಷಗಳನ್ನು ನವದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೆ ಮರಳಿ ಕೊಂಡೊಯ್ಯಲಾಗುತ್ತದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande