
ಬೆಂಗಳೂರು, 07 ನವೆಂಬರ್ (ಹಿ.ಸ.):
ಕಲಬುರಗಿ ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಸುಧಾರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರಿನಲ್ಲಿ ತಜ್ಞರೊಂದಿಗೆ ಸಭೆ ನಡೆಸಿ ಅಧಿಕಾರಿಗಳಿಗೆ ಹಲವು ನಿರ್ದೇಶನಗಳನ್ನು ನೀಡಿದ್ದಾರೆ.
ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಶಿಕ್ಷಕರ ಬೋಧನಾ ವಿಧಾನ ಹಾಗೂ ಪರೀಕ್ಷಾ ಸಿದ್ಧತೆಯಲ್ಲಿನ ಕೊರತೆಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದ್ದಾರೆ.
ಶೈಕ್ಷಣಿಕ ವರ್ಷದ ಆರಂಭದಿಂದಲೇ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ನಿರಂತರವಾಗಿ ಮೌಲ್ಯಮಾಪನ ಮಾಡಬೇಕು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಹಾಗೂ ವೈಯಕ್ತಿಕ ಮಾರ್ಗದರ್ಶನ ನೀಡಬೇಕು. ಕಳೆದ ವರ್ಷ ವಿತರಿಸಿದ್ದ ನಿರೀಕ್ಷಿತ ಪ್ರಶ್ನೆಗಳ ಸಂಗ್ರಹದಿಂದ ವಿದ್ಯಾರ್ಥಿಗಳಿಗೆ ಆಗಿರುವ ಪ್ರಯೋಜನದ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಬೇಕು ಎಂದು ತಿಳಿಸಿದ್ದಾರೆ.
ಶಿಕ್ಷಕರಿಗೆ ತರಬೇತಿ, ನಿಯಮಿತ ಶೈಕ್ಷಣಿಕ ಮೇಲ್ವಿಚಾರಣೆ, ಮಾದರಿ ಪರೀಕ್ಷೆಗಳು ಹಾಗೂ ಪೋಷಕರ ಸಹಭಾಗಿತ್ವಕ್ಕೆ ಆದ್ಯತೆ ನೀಡಿ ತಜ್ಞರ ಸಲಹೆಯಂತೆ ಕಾರ್ಯಯೋಜನೆ ರೂಪಿಸಬೇಕು. ಜಿಲ್ಲೆಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಶೈಕ್ಷಣಿಕ ಅವಕಾಶ ಕಲ್ಪಿಸಿ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಗಮನಾರ್ಹ ಸುಧಾರಣೆ ತರುವುದು ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.