ಬೆಂಗಳೂರು ಏರ್ಪೋರ್ಟ್ ರಸ್ತೆಯಲ್ಲಿ 18 ತಿಂಗಳು ವಾಹನ ಸಂಚಾರ ನಿರ್ಬಂಧ
ಬೆಂಗಳೂರು, 07 ನವೆಂಬರ್ (ಹಿ.ಸ.): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಳ ಸಮೀಪದ ಬಳ್ಳಾರಿ ರಸ್ತೆಯಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ 18 ತಿಂಗಳ ಕಾಲ ಕೆಲವು ವರ್ಗದ ವಾಹನಗಳ ಸಂಚಾರಕ್ಕೆ
Bengaluru-Airport-Road-Traffic-Restrictions-For-18-Months-Alternative-Routes


ಬೆಂಗಳೂರು, 07 ನವೆಂಬರ್ (ಹಿ.ಸ.):

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಳ ಸಮೀಪದ ಬಳ್ಳಾರಿ ರಸ್ತೆಯಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ 18 ತಿಂಗಳ ಕಾಲ ಕೆಲವು ವರ್ಗದ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಹೆಬ್ಬಾಳ ಸಮೀಪದ ಯುಎಎಸ್ ಬಸ್ ನಿಲ್ದಾಣದಿಂದ ಮೇಖ್ರಿ ವೃತ್ತದವರೆಗೆ ನಾಲ್ಕು ಪಥಗಳ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ.

ಕಾಮಗಾರಿಯಿಂದಾಗಿ ಬಳ್ಳಾರಿ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಕೆಎಸ್ಆರ್ಟಿಸಿ, ಖಾಸಗಿ ಬಸ್ಗಳು ಹಾಗೂ ಎಲ್ಲ ಮಾದರಿಯ ಸರಕು ಸಾಗಣೆ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಸಂಚಾರ ಪೊಲೀಸರು ಆದೇಶ ಹೊರಡಿಸಿದ್ದಾರೆ.

ದೇವನಹಳ್ಳಿ ಕಡೆಯಿಂದ ಹೆಬ್ಬಾಳ ಮಾರ್ಗವಾಗಿ ಬೆಂಗಳೂರು ನಗರಕ್ಕೆ ಬರುವ ವಾಹನ ಸವಾರರು ಹಾಗೂ ವಿಮಾನ ನಿಲ್ದಾಣದತ್ತ ತೆರಳುವ ಪ್ರಯಾಣಿಕರು ಸಂಚಾರ ದಟ್ಟಣೆಯನ್ನು ತಪ್ಪಿಸಲು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಪರ್ಯಾಯ ಮಾರ್ಗಗಳ ವಿವರ ಹೀಗಿದೆ:

ಹೆಬ್ಬಾಳದಿಂದ ವಿಮಾನ ನಿಲ್ದಾಣಕ್ಕೆ:ಓಲ್ಡ್ ಹೈಗ್ರೌಂಡ್ಸ್ ಜಂಕ್ಷನ್, ಕಲ್ಪನಾ ಜಂಕ್ಷನ್, ಓಲ್ಡ್ ಉದಯ ಟಿವಿ ಜಂಕ್ಷನ್, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ, ಟ್ಯಾನರಿ ರಸ್ತೆ ಹಾಗೂ ನಾಗವಾರ ರಸ್ತೆ ಮೂಲಕ ವಿಮಾನ ನಿಲ್ದಾಣಕ್ಕೆ ತೆರಳಬಹುದು.

ಯಶವಂತಪುರ ಕಡೆಯಿಂದ ವಿಮಾನ ನಿಲ್ದಾಣಕ್ಕೆ:ಮತ್ತಿಕೆರೆ ರಸ್ತೆಯ ಮೂಲಕ ಬಿಇಎಲ್ ವೃತ್ತದಲ್ಲಿ ಬಲತಿರುವು ಪಡೆದು ರಿಂಗ್ ರಸ್ತೆಯ ಮೂಲಕ ವಿಮಾನ ನಿಲ್ದಾಣ ತಲುಪಬಹುದು.

ವಿಮಾನ ನಿಲ್ದಾಣದಿಂದ ನಗರಕ್ಕೆ:ಹೆಬ್ಬಾಳದಲ್ಲಿ ಎಡತಿರುವು ಪಡೆದು ನಾಗವಾರ ಜಂಕ್ಷನ್ ಮೂಲಕ ಬಲತಿರುವು ಪಡೆದು ಬಂಬೂ ಬಜಾರ್ ಕ್ಲೀನ್ ರಸ್ತೆ ಮೂಲಕ ನಗರದ ಕಡೆಗೆ ಸಂಚರಿಸಬಹುದು.

ಇನ್ನೊಂದು ಪರ್ಯಾಯವಾಗಿ ಹೆಬ್ಬಾಳದಲ್ಲಿ ಬಲತಿರುವು ಪಡೆದು ಹೆಬ್ಬಾಳ ರಿಂಗ್ ರಸ್ತೆ, ಕುವೆಂಪು ವೃತ್ತದ ಮೂಲಕ ಗೊರಗುಂಟೆಪಾಳ್ಯ ಜಂಕ್ಷನ್ನಲ್ಲಿ ಎಡತಿರುವು ಪಡೆದು ಡಾ. ರಾಜ್ಕುಮಾರ್ ರಸ್ತೆಯ ಮೂಲಕ ನಗರ ಪ್ರವೇಶಿಸಬಹುದು.

ಯಶವಂತಪುರದಿಂದ ನಗರದ ಕೇಂದ್ರ ಭಾಗಕ್ಕೆ:ಬಿಇಎಲ್ ಜಂಕ್ಷನ್ನಿಂದ ಮಾರಮ್ಮ ಸರ್ಕಲ್ ಬಳಿ ಬಲತಿರುವು ಪಡೆದು ಮಾರ್ಗೋಸಾ ರಸ್ತೆಯ ಮೂಲಕ ನಗರದ ಕೇಂದ್ರ ಭಾಗಕ್ಕೆ ತಲುಪಬಹುದು.

ಹೆಬ್ಬಾಳದಿಂದ ನಗರದ ಕಡೆಗೆ:ಹೆಬ್ಬಾಳ ಮೇಲ್ಸೇತುವೆಯಿಂದ ಕೆಳಗಿಳಿದ ಬಳಿಕ ಬ್ಯಾಪ್ಟಿಸ್ಟ್ ಆಸ್ಪತ್ರೆ ಮುಂಭಾಗದ ಸರ್ವಿಸ್ ರಸ್ತೆಗೆ ಸೇರಿ ಸಿಬಿಐ ಜಂಕ್ಷನ್ವರೆಗೆ ಸಂಚರಿಸಿ, ಅಲ್ಲಿಂದ ಬಳ್ಳಾರಿ ಮುಖ್ಯ ರಸ್ತೆಯ ಮೂಲಕ ನಗರದ ಕಡೆಗೆ ತೆರಳಬಹುದು.

ಆನಂದನಗರ ಮತ್ತು ಆರ್ಟಿ ನಗರಕ್ಕೆ:ಹೆಬ್ಬಾಳದಿಂದ ಈ ಪ್ರದೇಶಗಳಿಗೆ ತೆರಳುವ ವಾಹನ ಸವಾರರು ಬ್ಯಾಪ್ಟಿಸ್ಟ್ ಆಸ್ಪತ್ರೆ ಮುಂಭಾಗದ ಸರ್ವಿಸ್ ರಸ್ತೆಯನ್ನು ಬಳಸಬೇಕು. ಆನಂದನಗರ ಕ್ರಾಸ್ ಹಾಗೂ ಸಿಬಿಐ ಜಂಕ್ಷನ್ ಬಳಿ ಎಡತಿರುವು ಪಡೆದು ಜಯಮಹಲ್ ರಸ್ತೆಯ ಮೂಲಕ ಸಂಚರಿಸಬಹುದು.

ಎಲಿವೇಟೆಡ್ ಕಾರಿಡಾರ್ ಕಾಮಗಾರಿಯಿಂದಾಗಿ ಮುಂದಿನ 18 ತಿಂಗಳ ಕಾಲ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಇರುವುದರಿಂದ ವಾಹನ ಸವಾರರು ಮುಂಚಿತವಾಗಿ ಪ್ರಯಾಣ ಯೋಜನೆ ರೂಪಿಸಿಕೊಳ್ಳಬೇಕು.

ಸಂಚಾರ ಪೊಲೀಸರ ಸೂಚನೆಗಳನ್ನು ಪಾಲಿಸುವ ಮೂಲಕ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಬೆಂಗಳೂರು ಸಂಚಾರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande