ಎಥೆನಾಲ್ ಮಿಶ್ರಣ ವಿವಾದ, ಸಚಿವರ ಕಂಪನಿಗಳಿಗೆ ಲಾಭ ಮಾಡಲು ದಾರಿ ತಪ್ಪಿಸುತ್ತಿದೆ ಕೇಂದ್ರ : ಪ್ರಿಯಾಂಕ್ ಖರ್ಗೆ
ಕೇಂದ್ರದ ಎಥೆನಾಲ್ ಮಿಶ್ರಣ ನೀತಿ ಸಚಿವರಿಗೆ ಲಾಭ ಮಾಡಿಕೊಡುವ ದುರುದ್ದೇಶ ಹೊಂದಿದೆ ಎಂದು ಗಂಭೀರ ಆರೋಪ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ತಮ್ಮ ಕುಟುಂಬದ ಆರ್ಥಿಕ ದಾಖಲೆಗಳನ್ನು ಪರಿಶೀಲಿಸಲು ಸವಾಲು ಹಾಕಿದ್ದಾರೆ.
Priyank-Kharge-Ethanol-Row


ಬೆಂಗಳೂರು, 07 ನವೆಂಬರ್ (ಹಿ.ಸ.):

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣ ಮಾಡುವ ನೀತಿಯು ಸಾರ್ವಜನಿಕ ಹಿತಾಸಕ್ತಿಗಿಂತ ಹೆಚ್ಚಾಗಿ ಕೇಂದ್ರ ಸಚಿವರಿಗೆ ಸೇರಿದ ಕಂಪನಿಗಳಿಗೆ ಲಾಭ ಮಾಡಿಕೊಡುವ ದುರುದ್ದೇಶ ಹೊಂದಿದೆ ಎಂದು ರಾಜ್ಯ ಐಟಿ-ಬಿಟಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಇದೇ ವೇಳೆ 'ಸಿದ್ಧಾರ್ಥ ವಿಹಾರ ಟ್ರಸ್ಟ್' ವಿರುದ್ಧ ಆರೋಪ ಮಾಡುತ್ತಿರುವ ಬಿಜೆಪಿ ಹಾಗೂ ಜೆಡಿ(ಎಸ್) ನಾಯಕರಿಗೆ ತಮ್ಮ ಸಂಪೂರ್ಣ ಕುಟುಂಬದ ಆರ್ಥಿಕ ದಾಖಲೆಗಳನ್ನು ಬಹಿರಂಗವಾಗಿ ಪರಿಶೀಲಿಸಲು ಬರುವಂತೆ ನೇರ ಸವಾಲು ಎಸೆದಿದ್ದಾರೆ.

'ಪೆಟ್ರೋಲ್ನಲ್ಲಿ 40% ಎಥೆನಾಲ್'

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಎನ್ಎಬಿಎಎಲ್ ಮಾನ್ಯತೆ ಪಡೆದ ಪ್ರಯೋಗಾಲಯಗಳ ವರದಿಗಳನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

'ಸರ್ಕಾರ ನಿಗದಿಪಡಿಸಿದ ಮಿತಿಗಿಂತ ಹೆಚ್ಚಾಗಿ, ಕೆಲವು ಪೆಟ್ರೋಲ್ ಮಾದರಿಗಳಲ್ಲಿ ಶೇಕಡಾ 35 ರಿಂದ 40 ರಷ್ಟು ಎಥೆನಾಲ್ ಪತ್ತೆಯಾಗಿದೆ. ಕೇಂದ್ರ ಸರ್ಕಾರವು ದೇಶದ 130 ಕೋಟಿ ಜನರ ಮೇಲೆ ಈ ರೀತಿ ಅಪಾಯಕಾರಿ ಪ್ರಯೋಗಗಳನ್ನು ನಡೆಸುತ್ತಾ ಹಸಿ ಸುಳ್ಳುಗಳನ್ನು ಹೇಳುತ್ತಿದೆ,' ಎಂದು ಕಿಡಿಕಾರಿದರು.

ಅಲ್ಲದೆ, ಸುಪ್ರೀಂ ಕೋರ್ಟ್ನಲ್ಲಿ ಸಾಲಿಸಿಟರ್ ಜನರಲ್ ಅವರು ಎಥೆನಾಲ್ ಮಿಶ್ರಣವನ್ನು ಕೇವಲ ಒಂದು 'ಪ್ರಯೋಗ' ಎಂದು ಹೇಳಿದ್ದನ್ನು ನೆನಪಿಸಿದ ಅವರು, ಕೇಂದ್ರ ಸಚಿವರ ಆಪ್ತರ ಕಂಪನಿಗಳ ಜೇಬು ತುಂಬಿಸಲು ಈ ನೀತಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದರು.

ದಾಖಲೆ ನೀಡಲು ಬಿಜೆಪಿ-ಜೆಡಿಎಸ್ಗೆ ಮುಕ್ತ ಸವಾಲು

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರು 'ಸಿದ್ಧಾರ್ಥ ವಿಹಾರ ಟ್ರಸ್ಟ್' ಮೂಲಕ ರಿಯಲ್ ಎಸ್ಟೇಟ್ ದಂದೆ ನಡೆಯುತ್ತಿದೆ ಎಂದು ಮಾಡುತ್ತಿರುವ ಆರೋಪಗಳನ್ನು ಖರ್ಗೆ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

'ಟ್ರಸ್ಟ್ ಯಾವುದೇ ನಿವೇಶನ ಮಾರಾಟ ಮಾಡುತ್ತಿಲ್ಲ, ಬದಲಿಗೆ ಬುದ್ಧ ದೇವಾಲಯ ನಿರ್ಮಾಣಕ್ಕಾಗಿ ಈ ಯೋಜನೆಯನ್ನು ರೂಪಿಸಲಾಗಿದೆ,' ಎಂದು ಸ್ಪಷ್ಟಪಡಿಸಿದರು.

'ವಿಪಕ್ಷಗಳ ಹಿಟ್ ಅಂಡ್ ರನ್ ರಾಜಕಾರಣ ಇನ್ಮುಂದೆ ನಡೆಯುವುದಿಲ್ಲ. ಬಿಜೆಪಿ ಮತ್ತು ಜೆಡಿಎಸ್ ನಾಯಕರು, ಅವರ ಶಾಸಕರು, ಎಂಎಲ್ಸಿಗಳು ಹಾಗೂ ಸಂಸದರು ಸೂಕ್ತ ಸ್ಥಳ ನಿಗದಿಪಡಿಸಲಿ. ಅವರನ್ನು ಎದುರಿಸಲು ನಾನೊಬ್ಬನೇ ಸಾಕು.

ನನ್ನ ಕುಟುಂಬದ ವೈಯಕ್ತಿಕ ಲೆಕ್ಕಪತ್ರಗಳು, ಬ್ಯಾಂಕ್ ವಿವರಗಳು ಹಾಗೂ ಸಿದ್ಧಾರ್ಥ ವಿಹಾರ ಟ್ರಸ್ಟ್ನ ಎಲ್ಲಾ ದಾಖಲೆಗಳನ್ನು ಸಾರ್ವಜನಿಕವಾಗಿ ಇಡಲು ನಾನು ಸಿದ್ಧ,' ಎಂದು ಬಹಿರಂಗ ಸವಾಲು ಹಾಕಿದರು.

ಟ್ರಸ್ಟ್ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸುವ ಬಿಜೆಪಿ ನಾಯಕರು ಕೇಂದ್ರ ಸಂಸ್ಥೆಗಳಿಂದ ಏತಕ್ಕೆ ತನಿಖೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದ ಖರ್ಗೆ, 'ಕಳೆದ 12 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯ ಅವರ ಕೈಯಲ್ಲೇ ಇವೆ.

ನಿಜವಾಗಿಯೂ ಅಕ್ರಮ ನಡೆದಿದ್ದರೆ ಈ ಸಂಸ್ಥೆಗಳು ಇದುವರೆಗೆ ಏಕೆ ಸುಮ್ಮನಿದ್ದವು? ತಪ್ಪು ನಡೆದಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ,' ಎಂದು ತಿರುಗೇಟು ನೀಡಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande