ಮೆಟ್ರೋ ಗುಲಾಬಿ ಮಾರ್ಗ ವಿಚಾರವಾಗಿ ಡಿಕೆಶಿ–ತೇಜಸ್ವಿ ಸೂರ್ಯ ಟ್ವಿಟ್ ಸಮರ
ನಮ್ಮ ಮೆಟ್ರೋ ಪಿಂಕ್ಲೈನ್ ಉದ್ಘಾಟನೆ ವಿಚಾರವಾಗಿ ಡಿಕೆ ಶಿವಕುಮಾರ್ ಮತ್ತು ಸಂಸದ ತೇಜಸ್ವಿ ಸೂರ್ಯ ನಡುವೆ ವಾಕ್ಸಮರ ತೀವ್ರಗೊಂಡಿದೆ.
DK-Shivakumar-Tejasvi-Surya-Metro-Pink-Line-Funding-War


ಬೆಂಗಳೂರು, 07 ನವೆಂಬರ್ (ಹಿ.ಸ.):

ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ಲೈನ್ ಉದ್ಘಾಟನೆ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ವಾಕ್ಸಮರ ತೀವ್ರಗೊಂಡಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರದ ಕೊಡುಗೆಯನ್ನು ವಿವರಿಸುವ ಮೂಲಕ ತಿರುಗೇಟು ನೀಡಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ಒಕ್ಕೂಟ ವ್ಯವಸ್ಥೆಯಲ್ಲಿನ ಸಹಕಾರದ ಸೂಕ್ಷ್ಮ ವ್ಯತ್ಯಾಸಗಳನ್ನು ನೀವು ಒಪ್ಪಿಕೊಳ್ಳದ ಕಾರಣ ನಾನೇ ವಿವರಿಸುತ್ತೇನೆ ಎಂದು ಹೇಳಿದ್ದಾರೆ.

ಬೆಂಗಳೂರು ಮೆಟ್ರೋ ಯೋಜನೆ 20:20:60 ನಿಧಿ ಮಾದರಿಯನ್ನು ಅನುಸರಿಸುತ್ತಿದೆ. ಕೇಂದ್ರ ಸರ್ಕಾರ ಶೇ.20ರಷ್ಟು, ರಾಜ್ಯ ಸರ್ಕಾರ ಶೇ.20ರಷ್ಟು ಅನುದಾನ ನೀಡುತ್ತವೆ.

ಉಳಿದ ಶೇ.60ರಷ್ಟು ಮೊತ್ತವನ್ನು ಕೇಂದ್ರ ಸರ್ಕಾರದ ಸಾರ್ವಭೌಮ ಖಾತರಿಯ ಬೆಂಬಲದೊಂದಿಗೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಸಾಲದ ರೂಪದಲ್ಲಿ ಪಡೆಯಲಾಗುತ್ತದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಬೆಂಬಲವಿಲ್ಲದೆ ಮೆಟ್ರೋ ಯೋಜನೆಗಳು ಆರಂಭವಾಗಲು ಸಾಧ್ಯವಿಲ್ಲ. ಬೆಂಗಳೂರು ಮೆಟ್ರೋ ಹಂತ-1, ಹಂತ-2, ಹಂತ-2ಎ, ಹಂತ-2ಬಿ ಹಾಗೂ ಹಂತ-3 ಸೇರಿದಂತೆ ವಿವಿಧ ಯೋಜನೆಗಳ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ 41,557 ಕೋಟಿ ರೂ. ವಿನಿಯೋಗಿಸಿದೆ. ಕರ್ನಾಟಕ ಸರ್ಕಾರವು 36,332 ಕೋಟಿ ರೂ. ನೀಡಲು ಬದ್ಧವಾಗಿದೆ ಎಂದು ಅಂಕಿ-ಅಂಶಗಳನ್ನು ಮುಂದಿಟ್ಟಿದ್ದಾರೆ.

ನೀವು ಬಡ ಸರ್ಕಾರ ಎಂದು ಕರೆಯುತ್ತಿರುವ ಕರ್ನಾಟಕ ಸರ್ಕಾರದ ಖಾತರಿಯ ಆಧಾರದ ಮೇಲೆ ಅಂತರರಾಷ್ಟ್ರೀಯ ಸಾಲದಾತರು ಯೋಜನೆಗಳಿಗೆ ಹಣಕಾಸು ಒದಗಿಸುತ್ತಾರೆ ಎಂಬುದನ್ನು ಮರೆಯಬೇಡಿ ಎಂದು ಡಿ.ಕೆ. ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.

ನವೆಂಬರ್ 13ರಂದು ನಡೆಯಲಿರುವ ನಮ್ಮ ಮೆಟ್ರೋ ಪಿಂಕ್ಲೈನ್ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿರುವ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದರು. ಬೆಂಗಳೂರು ಮೆಟ್ರೋ ಉದ್ಘಾಟನೆಗೂ ಬಿಜೆಪಿಗೂ ಏನು ಸಂಬಂಧ? ಎಂದು ಪ್ರಶ್ನಿಸಿದ್ದರು.

ಮೆಟ್ರೋ ಯೋಜನೆಯನ್ನು ಸಾರ್ವಜನಿಕರ ಹಣ ಹಾಗೂ ಸಾಲದ ಮೂಲಕ ಅಭಿವೃದ್ಧಿಪಡಿಸಲಾಗುತ್ತಿದೆ. ಪಿಂಕ್ಲೈನ್ ಉದ್ಘಾಟನೆಗೆ ಪ್ರಧಾನಮಂತ್ರಿಯವರನ್ನು ರಾಜ್ಯ ಸರ್ಕಾರ ಆಹ್ವಾನಿಸಿದೆ. ಅವರ ಭೇಟಿಯ ಸಂದರ್ಭದಲ್ಲಿ ಬೆಂಗಳೂರಿನ ಕೆಲವು ಪ್ರಮುಖ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದರು.

ಇನ್ನು ತೇಜಸ್ವಿ ಸೂರ್ಯ ಅವರ ಟ್ವೀಟ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಕೇಂದ್ರ ಸರ್ಕಾರದ ಕೊಡುಗೆಯನ್ನು ಸಮರ್ಥಿಸಿಕೊಂಡರೆ, ಇನ್ನೂ ಕೆಲವರು ಸಾಲವನ್ನು ಕೇಂದ್ರದ ಕೊಡುಗೆ ಎಂದು ಬಿಂಬಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಾಲ ಎನ್ನುವುದು ಉಡುಗೊರೆಯಲ್ಲ. ಜೆಐಸಿಎ , ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಹಾಗೂ ಕೆಎಫ್ಡಬ್ಲ್ಯೂ ಸಂಸ್ಥೆಗಳು ಸಾಲ ನೀಡುತ್ತವೆ. ಆದರೆ ಆ ಸಾಲವನ್ನು ಕರ್ನಾಟಕ ಸರ್ಕಾರವೇ ಬಡ್ಡಿ ಸಮೇತ ಮರುಪಾವತಿಸಬೇಕಾಗುತ್ತದೆ.

ಈ ಸಾಲಗಳ ಮರುಪಾವತಿಗಾಗಿ ಬಿಎಂಆರ್ಸಿಎಲ್ಗೆ ರಾಜ್ಯ ಸರ್ಕಾರವೂ ಹಣ ನೀಡುತ್ತದೆ. ಕರ್ನಾಟಕದ ಸಾಲವನ್ನು ದೆಹಲಿಯ ಔದಾರ್ಯವೆಂಬಂತೆ ಬಿಂಬಿಸಬೇಡಿ ಎಂದು ನೆಟ್ಟಿಗರೊಬ್ಬರು ತಿರುಗೇಟು ನೀಡಿದ್ದಾರೆ.

ಕೇಂದ್ರ ಸರ್ಕಾರದ ಸಾರ್ವಭೌಮ ಖಾತರಿ ಎನ್ನುವುದು ದೇಶದ ಮೆಟ್ರೋ ಯೋಜನೆಗಳಿಗೆ ವಿದೇಶಿ ಸಾಲ ಪಡೆಯುವ ಸಾಮಾನ್ಯ ಪ್ರಕ್ರಿಯೆ. ಅದು ಕೇಂದ್ರದ ಔದಾರ್ಯವಲ್ಲ, ನಿಯಮಿತ ಆಡಳಿತಾತ್ಮಕ ವ್ಯವಸ್ಥೆ. ಸಾಲದ ಮರುಪಾವತಿಯ ಹೊಣೆಗಾರಿಕೆ ರಾಜ್ಯದ ಮೇಲಿದೆ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಇದಲ್ಲದೆ, ಕರ್ನಾಟಕದ ಹಣಕಾಸಿನ ಸ್ಥಿತಿಗತಿಯನ್ನು ಉಲ್ಲೇಖಿಸಿರುವ ನೆಟ್ಟಿಗರು, ರಾಜ್ಯದ ಹಣಕಾಸಿನ ಕೊರತೆ ಶೇ.2.9ರಷ್ಟಿದ್ದು, ಸಾಲದ ಪ್ರಮಾಣ ಶೇ.24.9ರಷ್ಟಿದೆ. ಬೆಂಗಳೂರಿನ ಮೆಟ್ರೋ ಅಭಿವೃದ್ಧಿಗೆ ಕರ್ನಾಟಕವೇ ಹಣ ನೀಡುತ್ತಿದೆ.

ಹೀಗಿರುವಾಗ ರಾಜ್ಯವನ್ನು ಬಡ ಸರ್ಕಾರ ಎಂದು ಕರೆಯುವುದು ಸರಿಯಲ್ಲ. ಬೆಂಗಳೂರಿಗೆ 300 ಕಿ.ಮೀ. ಮೆಟ್ರೋ ಬೇಕೆಂದರೆ ಅದಕ್ಕೆ ಕರ್ನಾಟಕವೂ ಹಣ ಪಾವತಿಸಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಒಟ್ಟಿನಲ್ಲಿ ಪಿಂಕ್ಲೈನ್ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮನದ ವಿಚಾರದಿಂದ ಆರಂಭವಾದ ರಾಜಕೀಯ ಚರ್ಚೆ ಇದೀಗ ಮೆಟ್ರೋ ಯೋಜನೆಯ ಅನುದಾನ, ಸಾಲದ ಹೊಣೆಗಾರಿಕೆ ಮತ್ತು ಕೇಂದ್ರ-ರಾಜ್ಯ ಸರ್ಕಾರಗಳ ಕೊಡುಗೆಗಳ ಲೆಕ್ಕಾಚಾರದವರೆಗೆ ವಿಸ್ತರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಾಕ್ಸಮರ ಮುಂದುವರಿದಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande