ತಮ್ಮ ಆರೋಗ್ಯದ ಬಗ್ಗೆ ವದಂತಿಗಳಿಗೆ ತೆರೆ ಎಳೆದ ಶಾಸಕ ಯತ್ನಾಳ
ಆರೋಗ್ಯದಲ್ಲಿ ಏರುಪೇರಾಗಿ ಕೆಲ ದಿನ ವಿಶ್ರಾಂತಿ ಪಡೆದಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ತಮಗೆ ಹೃದಯಾಘಾತ ಅಥವಾ ಲಕ್ವಾ ಆಗಿಲ್ಲ, ಸಂಪೂರ್ಣ ಆರೋಗ್ಯವಾಗಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ವದಂತಿ ಹರಡುತ್ತಿರುವ ವಿರೋಧಿಗಳ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
yathnal-clarifies-health-rumours-says-no-heart-attack-and-fully-fit


ವಿಜಯಪುರ, 28 ನವೆಂಬರ್ (ಹಿ.ಸ.):

ಕಳೆದ ಎಂಟು-ಹತ್ತು ದಿನಗಳಿಂದ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳದೆ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದ್ದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ತಮ್ಮ ಆರೋಗ್ಯದ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ವಿಜಯಪುರದ ತೊರವಿಯಲ್ಲಿರುವ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದರು.

“ನನಗೇನು ಹಾರ್ಟ್ ಅಟ್ಯಾಕ್ ಆಗಿದೆಯಾ? ಕೈಕಾಲು ಮುರಿದಿದೆಯಾ? ಎಲ್ಲವೂ ಸರಿಯಾಗಿದೆ. ನನಗೆ ಹೃದಯಾಘಾತವಾಗಿಲ್ಲ, ಲಕ್ವಾ ಕೂಡ ಆಗಿಲ್ಲ. ನಾನು ಗಟ್ಟಿಯಾಗಿದ್ದೇನೆ” ಎಂದು ಯತ್ನಾಳ ಹೇಳಿದರು.

ಇತ್ತೀಚೆಗೆ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿತ್ತು. ಬೆಂಗಳೂರಿನಲ್ಲಿ ಆರೋಗ್ಯ ತಪಾಸಣೆ ಮಾಡಿಸಿದಾಗ ಮೂರು ಕಡೆಗಳಿಂದ ವಿಭಿನ್ನ ವರದಿಗಳು ಬಂದಿದ್ದವು. ಪ್ಯಾಂಕ್ರಿಯಾಸ್ನಲ್ಲಿ ಸ್ವಲ್ಪ ಊತ ಕಾಣಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದರು.

ಅಲ್ಲದೆ, ಆಗಾಗ ಜ್ವರ ಬರುತ್ತಿದ್ದ ಹಿನ್ನೆಲೆಯಲ್ಲಿ ವೈದ್ಯರು ನಾಲ್ಕು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು. ಹೀಗಾಗಿ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆದಿದ್ದಾಗಿ ಸ್ಪಷ್ಟಪಡಿಸಿದರು.

ತಮ್ಮ ಆರೋಗ್ಯದ ವಿಚಾರವನ್ನೇ ದೊಡ್ಡ ಸುದ್ದಿಯನ್ನಾಗಿ ಮಾಡುತ್ತಿರುವ ವಿರೋಧಿಗಳ ವಿರುದ್ಧವೂ ಯತ್ನಾಳ ವ್ಯಂಗ್ಯವಾಡಿದರು. “ಯತ್ನಾಳ ಯಾವಾಗ ಸಾಯುತ್ತಾರೆ, ನಾವು ಯಾವಾಗ ಶಾಸಕನಾಗಬಹುದು ಎಂದು ಕಾಯುತ್ತಿರುವ ವಿರೋಧಿಗಳಿದ್ದಾರೆ” ಎಂದು ಟೀಕಿಸಿದರು.

ಇದೇ ವೇಳೆ ವಿಜಯಪುರದ ಅಭಿವೃದ್ಧಿ ವಿಚಾರ ಪ್ರಸ್ತಾಪಿಸಿದ ಅವರು, ಜಿಲ್ಲೆಯ ಬೆಳವಣಿಗೆಯನ್ನು ವಿರೋಧಿಗಳಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು. ಹಿಂದೆ ವಿಜಯಪುರವನ್ನು ಗೋಳಗುಮ್ಮಟದ ಊರು ಎಂದು ಗುರುತಿಸುತ್ತಿದ್ದರು.

ಆದರೆ ಈಗ ಮೈಸೂರು, ಚಾಮರಾಜನಗರ ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ವಿಜಯಪುರದ ಹೆಸರು ಹೇಳಿದರೂ ಯತ್ನಾಳ ಅವರ ಊರು ಎಂದು ಗುರುತಿಸುವಂತಾಗಿದೆ. ಇದು ಕೆಲವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande