
ಕೋಲಾರ, 28 ನವೆಂಬರ್ (ಹಿ.ಸ.)
ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಜೊತೆಗೆ ಆರನೇ ಗ್ಯಾರಂಟಿಯಾಗಿ ಜಾರಿಗೆ ತಂದಿರುವ ಭೂ ಗ್ಯಾರಂಟಿ ಯೋಜನೆಯಡಿ ಗ್ರಾಮಠಾಣ ವ್ಯಾಪ್ತಿಯಲ್ಲಿ ಹಾಗೂ ಸ್ವಂತ ಕೃಷಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ಅರ್ಜಿ ಸಲ್ಲಿಸಿದ 22 ದಿನಗಳೊಳಗೆ ಇ-ಸ್ವತ್ತು ದಾಖಲೆ ನೀಡಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ ಎಂದು ಕೆಜಿಎಫ್ ವಿಧಾನಸಭಾ ಕ್ಷೇತ್ರದ ಶಾಸಕಿ ಡಾ. ರೂಪಕಲಾ ಶಶಿಧರ್ ತಿಳಿಸಿದರು.
ಕೆಜಿಎಫ್ ತಾಲ್ಲೂಕಿನ ಕಮ್ಮಸಂದ್ರ ಗ್ರಾಮದಲ್ಲಿ ನಡೆದ ಬೇತಮಂಗಲ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನೇಕ ವರ್ಷಗಳಿಂದ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದರೂ ಸೂಕ್ತ ದಾಖಲೆಗಳಿಲ್ಲದೆ ಆಸ್ತಿಗಳು ತಂದೆ ಅಥವಾ ತಾತನ ಹೆಸರಿನಲ್ಲಿಯೇ ಉಳಿದಿವೆ. ಇದರಿಂದ ಜನರಿಗೆ ತಮ್ಮ ಆಸ್ತಿಯ ಮೇಲೆ ಪೂರ್ಣ ಹಕ್ಕು ಪಡೆಯಲು ಸಾಧ್ಯವಾಗುತ್ತಿಲ್ಲ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಜನರಿಗೆ ಕಾನೂನುಬದ್ಧ ಆಸ್ತಿ ದಾಖಲೆ ಒದಗಿಸುವ ಉದ್ದೇಶದಿಂದ ಸರ್ಕಾರ ಭೂ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ ಎಂದರು.
ಕಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ನವೆಂಬರ್ 30ರಿಂದ ಡಿಸೆಂಬರ್ 15ರವರೆಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ಇ-ಸ್ವತ್ತು ಕುರಿತು ಅರಿವು ಮೂಡಿಸುವುದರ ಜತೆಗೆ ಅರ್ಜಿಗಳನ್ನು ಸ್ವೀಕರಿಸಲಾಗುವುದು. ನವೆಂಬರ್ 30ರಂದು ಗಂಗಮ್ಮ ದೇವಸ್ಥಾನದ ಬಳಿ, ಡಿಸೆಂಬರ್ 1ರಂದು ಕಗ್ಲರಿ, 2ರಂದು ಚೀಮನಬಂಡನಹಳ್ಳಿ, 3ರಂದು ರೆಡ್ಡಿಹಳ್ಳಿ, 4ರಂದು ಬೊಮ್ಮನಹಳ್ಳಿ, 7ರಂದು ಪೆಡಪಲ್ಲಿ, 8ರಂದು ಚೆನ್ನಪಲ್ಲಿ, 9ರಂದು ಎರ್ರಾಗಹಳ್ಳಿ, 10ರಂದು ನಾಗಶೆಟ್ಟಹಳ್ಳಿ, 11ರಂದು ಕದರೇಗೌಡನಕೋಟೆ, 14ರಂದು ಬಾಡ್ಲಾಯನಹಳ್ಳಿ ಹಾಗೂ 15ರಂದು ಕಮ್ಮಸಂದ್ರದ ವೇಣುಗೋಪಾಲಸ್ವಾಮಿ ದೇವಸ್ಥಾನದ ಬಳಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳದಲ್ಲಿಯೇ ಉಪಸ್ಥಿತರಿದ್ದು, ಇ-ಸ್ವತ್ತು ಪಡೆಯಲು ಅಗತ್ಯವಿರುವ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ ಕುರಿತು ಮಾಹಿತಿ ನೀಡಲಿದ್ದಾರೆ. ಗ್ರಾಮಠಾಣ ವ್ಯಾಪ್ತಿಯ ಮನೆಗಳಿಗೆ ಮಾತ್ರವಲ್ಲದೆ 11ಎ ಮತ್ತು 11ಬಿ ಖಾತೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೂ ಪರಿಹಾರ ಕಲ್ಪಿಸುವ ಉದ್ದೇಶವಿದೆ. ಸಾರ್ವಜನಿಕರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಆಸ್ತಿ ದಾಖಲೆಗಳನ್ನು ಪಡೆದುಕೊಳ್ಳಬೇಕು ಎಂದರು.
ಹಿರಿಯ ನಾಗರಿಕರು, ವಿಧವೆಯರು ಹಾಗೂ ಅಂಗವಿಕಲರ ಪಿಂಚಣಿ ಸೌಲಭ್ಯಗಳಲ್ಲಿನ ತೊಂದರೆಗಳು, ದಾಖಲೆಗಳ ಕೊರತೆ ಮತ್ತು ತಡೆಹಿಡಿಯಲಾಗಿರುವ ಪ್ರಕರಣಗಳನ್ನು ಪರಿಶೀಲಿಸಲು ಕಂದಾಯ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಸ್ಮಶಾನ ಹಾಗೂ ಕೃಷಿ ಜಮೀನುಗಳಿಗೆ ತೆರಳಲು ದಾರಿಯಿಲ್ಲದ ಸಮಸ್ಯೆಗಳಿಗೂ ಪರಿಹಾರ ಕಲ್ಪಿಸಲಾಗುವುದು. ಪಡಿತರ ಚೀಟಿ ಬಿಪಿಎಲ್ನಿಂದ ಎಪಿಎಲ್ಗೆ ಬದಲಾಗಿರುವ ಕುಟುಂಬಗಳಿಗೆ ಆರೋಗ್ಯ ಸೇವೆ ಪಡೆಯುವ ಸಂದರ್ಭದಲ್ಲಿ ಪಡಿತರ ಚೀಟಿಯ ಬಳಕೆ ಕುರಿತು ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಕಮ್ಮಸಂದ್ರ-ಬೇತಮಂಗಲ ಮಾರ್ಗದಲ್ಲಿ ಶಾಲಾ ಮಕ್ಕಳಿಗೆ, ವಿಶೇಷವಾಗಿ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯದ ಕೊರತೆಯಿರುವುದನ್ನು ಗಮನಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಜಿಲ್ಲಾ ಮಟ್ಟದ ಅಧಿಕಾರಿಗಳನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ, ಹೊಲಿಗೆ ಯಂತ್ರ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ರೈತರು ಮತ್ತು ಮಹಿಳೆಯರು ಹೇಗೆ ಪಡೆಯಬಹುದು ಎಂಬುದರ ಕುರಿತು ಮಾಹಿತಿ ನೀಡಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರಮೇಶ್ ಕುಮಾರ್ ಮಾತನಾಡಿ, ಸರ್ಕಾರದ 'ಮನೆ ಬಾಗಿಲಿಗೆ ಸರ್ಕಾರ' ಎಂಬ ಮಹತ್ವಾಕಾಂಕ್ಷೆಯ ಆಶಯಕ್ಕೆ ಪ್ರಜಾಸೇವಾ ಆಂದೋಲನ ಸಾಕ್ಷಿಯಾಗಿದೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸುಮಾರು 29 ಇಲಾಖೆಗಳು ಹಾಗೂ ಕಂದಾಯ ಇಲಾಖೆಯ ಏಳು ವಿಭಾಗಗಳು ಸೇರಿದಂತೆ ಸುಮಾರು 40 ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದಾರೆ ಎಂದರು.
ಕಳೆದ ಎರಡು ತಿಂಗಳಿನಿಂದ ಹೋಬಳಿ ಮಟ್ಟದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಸ್ವೀಕರಿಸಿದ ಅರ್ಜಿಗಳ ಪೈಕಿ ಸುಮಾರು ಶೇ.95ರಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಪಡಿತರ ಚೀಟಿ, ಪಿಂಚಣಿ ಹಾಗೂ ವಿವಿಧ ಇಲಾಖೆಗಳ ಸೌಲಭ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಇದು ಕೇವಲ ಕಾಟಾಚಾರದ ಕಾರ್ಯಕ್ರಮವಲ್ಲ. ಹಲವು ವರ್ಷಗಳಿಂದ ಬಾಕಿ ಉಳಿದಿರುವ ಕಂದಾಯ ಮತ್ತು ಗ್ರಾಮ ಪಂಚಾಯಿತಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ವಿಶೇಷ ವ್ಯವಸ್ಥೆಯಾಗಿದೆ ಎಂದು ತಿಳಿಸಿದರು.
ಹಿಂದೆ ಗ್ರಾಮಠಾಣ ವ್ಯಾಪ್ತಿಯಲ್ಲಿ ಮನೆಗಳ ಸಂಖ್ಯೆ ಸೀಮಿತವಾಗಿತ್ತು. ಜನಸಂಖ್ಯೆ ಹೆಚ್ಚಾದಂತೆ ಗ್ರಾಮಗಳು ವಿಸ್ತರಣೆಯಾಗಿದ್ದು, ಅನೇಕರು ಸರ್ವೇ ಸಂಖ್ಯೆಗಳಲ್ಲಿಯೇ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದರಿಂದ ಆಸ್ತಿ ದಾಖಲೆ ನೀಡಲು ತೊಂದರೆಯಾಗುತ್ತಿತ್ತು. ಈ ಸಮಸ್ಯೆಯನ್ನು ಮನಗಂಡ ಸರ್ಕಾರ ಇ-ಸ್ವತ್ತು ತಂತ್ರಾಂಶ ರೂಪಿಸಿ, ಅರ್ಜಿ ಸಲ್ಲಿಸಿದ 22 ದಿನಗಳೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ನಿರ್ದೇಶನ ನೀಡಿದೆ ಎಂದರು.
ಜನರು ಗ್ರಾಮ ಪಂಚಾಯಿತಿಗೆ ನೇರವಾಗಿ ಬರುವ ಅಗತ್ಯವಿಲ್ಲ. ಸೈಬರ್ ಕೇಂದ್ರ, ಗ್ರಾಮ ಒನ್ ಅಥವಾ ಅಂತರ್ಜಾಲದ ಮೂಲಕ ದೇಶದ ಯಾವುದೇ ಭಾಗದಿಂದ ಅರ್ಜಿ ಸಲ್ಲಿಸಬಹುದು. ಈ ಹಿಂದೆ ನೋಂದಾಯಿತ ಪತ್ರ ಕಡ್ಡಾಯವಾಗಿದ್ದರಿಂದ ಖಾತೆ ವಿತರಣೆಯಲ್ಲಿ ತೊಂದರೆಯಾಗುತ್ತಿತ್ತು. ಇದೀಗ ಸ್ವತ್ತಿನ ಅನುಭವ, ಕಂದಾಯ ಪಾವತಿ ಹಾಗೂ ಪಂಚಾಯಿತಿಯ ಹಳೆಯ ದಾಖಲೆಗಳನ್ನು ಪರಿಶೀಲಿಸಿ ಅರ್ಹರಿಗೆ ಖಾತೆ ನೀಡಲು ಸರ್ಕಾರ ಅವಕಾಶ ಕಲ್ಪಿಸಿದೆ ಎಂದು ವಿವರಿಸಿದರು.
ಸರ್ವೇಯರ್ಗಳ ಕೊರತೆ ನೀಗಿಸಲು ಜಿಲ್ಲಾ ಪಂಚಾಯಿತಿ ವತಿಯಿಂದ ಸುಮಾರು 65 ಎಂಜಿನಿಯರ್ಗಳು, ದತ್ತಾಂಶ ನಮೂದು ನಿರ್ವಾಹಕರು ಹಾಗೂ ಕಂದಾಯ ವಸೂಲಿಗಾರರಿಗೆ ತರಬೇತಿ ನೀಡಲಾಗಿದೆ. ಸರ್ವೇ ಇಲಾಖೆಯ ಸಹಕಾರದೊಂದಿಗೆ ಸ್ಥಳದಲ್ಲಿಯೇ ಅಳತೆ ಕಾರ್ಯ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಅರ್ಜಿ ಸ್ವೀಕರಿಸಿದ ಬಳಿಕ ಸ್ಥಳ ಪರಿಶೀಲನೆ ನಡೆಸಿ, ಸುತ್ತಮುತ್ತಲಿನ ಆಸ್ತಿ ಮಾಲೀಕರ ಸಮ್ಮುಖದಲ್ಲಿ ಮಹಜರು ಮಾಡಲಿದ್ದಾರೆ. ನಂತರ ಪರಿಶೀಲನಾ ಹಂತಗಳನ್ನು ಪೂರ್ಣಗೊಳಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ.
ಒಟ್ಟಾರೆ 22 ದಿನಗಳೊಳಗೆ ಅರ್ಜಿಗೆ ಅನುಮೋದನೆ ನೀಡಬೇಕು ಅಥವಾ ತಿರಸ್ಕರಿಸಿದರೆ ಅದಕ್ಕೆ ಸೂಕ್ತ ಕಾರಣ ದಾಖಲಿಸಬೇಕು. ದಾಖಲೆಗಳಿಲ್ಲ ಎಂಬ ಕಾರಣಕ್ಕೆ ಅರ್ಜಿ ಸ್ವೀಕರಿಸದೆ ತಡೆಯುವಂತಿಲ್ಲ ಎಂದು ಸ್ಪಷ್ಟಪಡಿಸಿದರು.
ಕೆಜಿಎಫ್ ಕ್ಷೇತ್ರದಲ್ಲಿ ಇ-ಸ್ವತ್ತು ಸರ್ವೇ ಕಾರ್ಯ ಆರಂಭವಾಗಿದ್ದು, ಹಿಂದಿನ ದಿನದವರೆಗೆ ಸುಮಾರು 4 ಸಾವಿರ ಅರ್ಜಿಗಳು ಬಂದಿವೆ. ಇನ್ನೂ 300 ಅರ್ಜಿಗಳು ಬರಬೇಕಿವೆ. ಡಿಸೆಂಬರ್ ಅಂತ್ಯದೊಳಗೆ ಗ್ರಾಮಠಾಣ, 11ಎ ಮತ್ತು 11ಬಿ ಖಾತೆಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. ಆರ್ಟಿಸಿಯಲ್ಲಿ ಬಿ ಖರಾಬ್ ಎಂದು ನಮೂದಾಗಿರುವ ಜಮೀನುಗಳಿಗೆ ನೇರವಾಗಿ ಖಾತೆ ನೀಡಲು ಸಾಧ್ಯವಿಲ್ಲ. ಕಂದಾಯ ಅಧಿಕಾರಿಗಳ ಪರಿಶೀಲನೆಯ ಬಳಿಕ ಅರ್ಹ ಜಮೀನುಗಳಿಗೆ ನಿಯಮಾನುಸಾರ ಖಾತೆ ನೀಡಲಾಗುವುದು ಎಂದರು.
ಕೆಜಿಎಫ್ ತಹಶೀಲ್ದಾರ್ ಗಾಯಿತ್ರಿ ಮಾತನಾಡಿ, ಜನನ ಮತ್ತು ಮರಣ ಪ್ರಮಾಣಪತ್ರ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಸಣ್ಣ ರೈತ ಹಾಗೂ ಭೂರಹಿತ ಪ್ರಮಾಣಪತ್ರ ಸೇರಿದಂತೆ ಕಂದಾಯ ಇಲಾಖೆಯಿಂದ ದೊರೆಯುವ ವಿವಿಧ ಸೇವೆಗಳನ್ನು ಜನರು ಸಕಾಲದಲ್ಲಿ ಪಡೆಯಬೇಕು. ಕೆಲವು ಪ್ರಮಾಣಪತ್ರಗಳ ವಿತರಣೆಯಲ್ಲಿ ವಿಳಂಬವಾಗುತ್ತಿರುವುದನ್ನು ಗಮನಿಸಿದ್ದು, ಸಮಸ್ಯೆಯ ಮೂಲವನ್ನು ಗುರುತಿಸಿ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಜಮೀನುಗಳಿಗೆ ಸಂಬಂಧಿಸಿದ ದಾರಿ, ಕೋಡಿ, ರಸ್ತೆ, ಕಾಲುವೆ ಒತ್ತುವರಿ ಹಾಗೂ ಹಕ್ಕು ಕಳೆದುಕೊಳ್ಳುವ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಅಹವಾಲುಗಳು ಬಂದಿವೆ. ಗೋಮಾಳ ಜಮೀನುಗಳ ಒತ್ತುವರಿಯನ್ನೂ ಪರಿಶೀಲಿಸಲಾಗುತ್ತಿದೆ. ಕೆರೆ, ಕುಂಟೆ, ರಾಜಕಾಲುವೆ ಹಾಗೂ ಗೋಮಾಳಗಳ ಒತ್ತುವರಿಯನ್ನು ಹಂತಹಂತವಾಗಿ ತೆರವುಗೊಳಿಸಿ, ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರದ್ದಾಗಿದ್ದ ಅಥವಾ ಅಮಾನತಿನಲ್ಲಿದ್ದ ಪಿಂಚಣಿ ಪ್ರಕರಣಗಳನ್ನು ಪರಿಶೀಲಿಸಿ ಮರುಸಕ್ರಿಯಗೊಳಿಸಲಾಗಿದೆ. ಹೊಸ ಪಿಂಚಣಿಗೆ ಸಂಬಂಧಿಸಿದ ಆದಾಯ ಮಿತಿಯ ಸಮಸ್ಯೆಗಳನ್ನೂ ಶಾಸಕರ ಗಮನಕ್ಕೆ ತರಲಾಗಿದೆ. ಫಲಾನುಭವಿಗಳ ಖಾತೆಗೆ ಪಿಂಚಣಿ ಹಣ ಶೀಘ್ರ ಜಮೆಯಾಗಲು ಕ್ರಮ ಕೈಗೊಳ್ಳಲಾಗಿದೆ. ದೇವಸ್ಥಾನಗಳ ಪೂಜಾರಿಗಳಿಗೆ ನೀಡುವ ತಸ್ತಿಕ್ ಹಣಕ್ಕೆ ಸಂಬಂಧಿಸಿದ ಬಾಕಿ ಅರ್ಜಿಗಳನ್ನು ಕೂಡ ಈ ವಾರದೊಳಗೆ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಉಚಿತ ಹೊಲಿಗೆ ಯಂತ್ರ ವಿತರಣೆ ಯೋಜನೆಯಡಿ ಮಹಿಳೆಯರಿಗೆ 20 ಹೊಲಿಗೆ ಯಂತ್ರಗಳನ್ನು ಶಾಸಕರು ಹಾಗೂ ಅಧಿಕಾರಿಗಳು ವಿತರಿಸಿದರು. ಆದಿಜಾಂಬವ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಯಡಿ ಐದು ಫಲಾನುಭವಿಗಳಿಗೆ ಪಂಪು ಮೋಟಾರ್ಗಳನ್ನು ವಿತರಿಸಲಾಯಿತು. ಭೋವಿ ಅಭಿವೃದ್ಧಿ ನಿಗಮದ ಸ್ವಾವಲಂಬಿ ಸಾರಥಿ ಯೋಜನೆಯಡಿ ಒಬ್ಬ ಫಲಾನುಭವಿಗೆ ಕಾರು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶಪ್ಪ, ಕೆಜಿಎಫ್ ಉಸ್ತುವಾರಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಯುವರಾಜ್, ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗರಾಜ್ ನಾಯಕ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಜೇಶ್, ಬೆಸ್ಕಾಂನ ಹೇಮಲತಾ, ಕಾರ್ಮಿಕ ಇಲಾಖೆಯ ಅಮರಾವತಿ, ಕೆಜಿಎಫ್ ಕೆಎಸ್ಆರ್ಟಿಸಿ ಘಟಕದ ಅಧಿಕಾರಿಗಳಾದ ನೇತ್ರಾವತಿ, ಪಶುಪಾಲನಾ ಇಲಾಖೆಯ ತ್ರಿಮೂರ್ತಿ ನಾಯಕ್, ಲೋಕೋಪಯೋಗಿ ಇಲಾಖೆಯ ರಾಜಶೇಖರ್, ಆಹಾರ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ, ಕಮ್ಮಸಂದ್ರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಸಂತ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್