ಕೋಲಾರ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ನಲ್ಲೂರು ರಘುಪತಿ ರೆಡ್ಡಿ ಅವಿರೋಧ ಆಯ್ಕೆ
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ವಿ.ರಘುಪತಿ ರೆಡ್ಡಿ ಅವಿರೋಧ ಆಯ್ಕೆ
ಕೋಲಾರ ಸಹಕಾರಿ ಯೂನಿಯನ್ಗೆ ಅಧ್ಯಕ್ಷರಾಗಿ ರಘುಪತಿರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾದರು.


ಕೋಲಾರ, 28 ನವೆಂಬರ್ (ಹಿ.ಸ.)

ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ನಲ್ಲೂರು ವಿ. ರಘುಪತಿ ರೆಡ್ಡಿ ಮತ್ತು ಉಪಾಧ್ಯಕ್ಷರಾಗಿ ಕಾರಮಂಗಲಗುಟ್ಟಹಳ್ಳಿ ಎಸ್. ಮಂಜುನಾಥ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಗರದ ಜಿಲ್ಲಾ ಸಹಕಾರಿ ಒಕ್ಕೂಟದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಲ್ವಮಂಜಲಿ ಟಿ.ಕೆ. ಬೈರೇಗೌಡ ಹಾಗೂ ನಲ್ಲೂರು ವಿ. ರಘುಪತಿ ರೆಡ್ಡಿ ನಾಮಪತ್ರ ಸಲ್ಲಿಸಿದ್ದರು. ಬೈರೇಗೌಡ ಅವರು ತಮ್ಮ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ರಘುಪತಿ ರೆಡ್ಡಿ ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ಅಣ್ಣಿಹಳ್ಳಿ ನಾಗರಾಜ್ ಮತ್ತು ಕಾರಮಂಗಲಗುಟ್ಟಹಳ್ಳಿ ಎಸ್. ಮಂಜುನಾಥ ನಾಮಪತ್ರ ಸಲ್ಲಿಸಿದ್ದರು. ನಾಗರಾಜ್ ಅವರು ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಮಂಜುನಾಥ ಅವರು ಅವಿರೋಧವಾಗಿ ಆಯ್ಕೆಯಾದರು.

ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಬ್ಯಾಲಹಳ್ಳಿ ಎಂ. ಗೋವಿಂದಗೌಡ ಅವರ ನೇತೃತ್ವದಲ್ಲಿ ನಿರ್ದೇಶಕರು ಅಭಿನಂದಿಸಿ, ಸಿಹಿ ಹಂಚಿ ಸನ್ಮಾನಿಸಿದರು.

ನೂತನ ಅಧ್ಯಕ್ಷ ನಲ್ಲೂರು ವಿ. ರಘುಪತಿ ರೆಡ್ಡಿ ಮಾತನಾಡಿ, ಸಹಕಾರಿ ಕ್ಷೇತ್ರದ ಮಾತೃ ಸಂಸ್ಥೆಯಾಗಿರುವ ಸಹಕಾರಿ ಯೂನಿಯನ್‌ನಲ್ಲಿ ರಾಜಕೀಯ ಇರಬಾರದು ಎಂಬ ಉದ್ದೇಶದಿಂದ ಕಳೆದ ಹಲವು ವರ್ಷಗಳಿಂದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಚುನಾವಣೆಗಳನ್ನು ಅವಿರೋಧವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಒಂದು ವರ್ಷದ ಹಿಂದೆ ನಡೆದ ಅಧ್ಯಕ್ಷರ ಚುನಾವಣೆ ನ್ಯಾಯಾಲಯದ ವಿಚಾರಣೆಯಲ್ಲಿತ್ತು. ಇದೀಗ ಆ ಪ್ರಕ್ರಿಯೆ ಮುಕ್ತಾಯಗೊಂಡು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಅವಿರೋಧ ಆಯ್ಕೆಯೊಂದಿಗೆ ಪೂರ್ಣಗೊಂಡಿದೆ ಎಂದರು.

ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡಿ ಆಯ್ಕೆ ಮಾಡಿರುವ ಗೌರವವನ್ನು ಉಳಿಸಿಕೊಂಡು ಸಹಕಾರಿ ಸಂಸ್ಥೆಯನ್ನು ಇನ್ನಷ್ಟು ಉತ್ತಮವಾಗಿ ಮುನ್ನಡೆಸಲು ಪ್ರಯತ್ನಿಸಲಾಗುವುದು. ಈ ಕಾರ್ಯಕ್ಕೆ ಎಲ್ಲ ನಿರ್ದೇಶಕರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.

ದೂರವಾಣಿ ಮೂಲಕ ಲೋಕಸಭಾ ಸದಸ್ಯ ಎಂ. ಮಲ್ಲೇಶ್ ಬಾಬು ಹಾಗೂ ಮುಳಬಾಗಿಲು ಶಾಸಕರು ನೂತನ ಪದಾಧಿಕಾರಿಗಳ ಆಯ್ಕೆಗೆ ಅಭಿನಂದನೆ ಸಲ್ಲಿಸಿದರು.

ಹಿಂದಿನ ಆಡಳಿತ ಮಂಡಳಿಯಲ್ಲಿ ಬ್ಯಾಲಹಳ್ಳಿ ಎಂ. ಗೋವಿಂದಗೌಡ ಅವರ ಸಹಕಾರದಿಂದ ಅಪೆಕ್ಸ್ ಬ್ಯಾಂಕ್ ಹಾಗೂ ಜಿಲ್ಲಾ ಬ್ಯಾಂಕ್‌ನಿಂದ ಆರ್ಥಿಕ ನೆರವು ಪಡೆದು ಸಂಸ್ಥೆಗೆ ಉತ್ತಮ ರೂಪ ನೀಡಲಾಗಿದೆ. ಮುಂದೆಯೂ ಎಲ್ಲರ ಸಹಕಾರದೊಂದಿಗೆ ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ರಘುಪತಿ ರೆಡ್ಡಿ ತಿಳಿಸಿದರು.

ಈ ಸಂದರ್ಭದಲ್ಲಿ ಸಹಕಾರಿ ಯೂನಿಯನ್ ನಿರ್ದೇಶಕರಾದ ಬ್ಯಾಲಹಳ್ಳಿ ಎಂ. ಗೋವಿಂದಗೌಡ, ಕಲ್ವಮಂಜಲಿ ಟಿ.ಕೆ. ಬೈರೇಗೌಡ, ಎಸ್.ವಿ. ಗೋವರ್ಧನ್ ರೆಡ್ಡಿ, ಎನ್. ನಾಗರಾಜ್, ಕೆ.ಎಂ. ಮಂಜುನಾಥ್, ಸಿ. ಮುನಿವೆಂಕಟಪ್ಪ, ಎಂ. ಲಕ್ಷ್ಮೀನಾರಾಯಣ, ಎನ್.ಎಸ್. ಶಂಕರ್, ಕೆ. ನಾರಾಯಣಗೌಡ, ಜಿ.ಸಿ. ಮಂಜುನಾಥ್ ರೆಡ್ಡಿ, ಬೆಟ್ಟಹೊಸಪುರ ವಿ. ಮುರಳಿಧರ, ವಿ. ಸುಬ್ಬಮ್ಮ, ಮುರಳಿಗೌಡ ಎಸ್.ಆರ್., ಹನುಮಂತಯ್ಯ, ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಭಾರತಿ, ಸಿಬ್ಬಂದಿಗಳಾದ ರವಿಕುಮಾರ್ ಮತ್ತು ಲಕ್ಷ್ಮಿದೇವಮ್ಮ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande