ಮಂಡ್ಯದಲ್ಲಿ ಎಆರ್ಎಐ ಘಟಕ ಸ್ಥಾಪನೆ ವಿಚಾರ; ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಅಸಮಾಧಾನ
ಮಂಡ್ಯದಲ್ಲಿ ಎಆರ್ಎಐ ಘಟಕ ಸ್ಥಾಪನೆಗೆ ಭೂಮಿ ಹಂಚಿಕೆ ವಿಳಂಬವಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೈತರ ಮನವೊಲಿಸಿ ಭೂಮಿ ಪಡೆಯಬೇಕು, ಘಟಕಕ್ಕೆ ಅಗತ್ಯವಿರುವ ನಿರ್ದಿಷ್ಟ ಆಕಾರದ ಭೂಮಿ ಒದಗಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಲ
hd-kumaraswamy-criticizes-karnataka-government-over-arai-land-allotment-in-mandya


ಮಂಡ್ಯ, 28 ನವೆಂಬರ್ (ಹಿ.ಸ.):

ಭೂಮಿ ನೀಡುವ ಪ್ರಕ್ರಿಯೆ ಪೂರ್ಣಗೊಳಿಸದೆ, ಭೂಮಿ ಕೊಟ್ಟಾಗಿದೆ ಎಂದು ಹೇಳುವುದು ಸರಿಯಲ್ಲ. ಎಆರ್ಎಐ ಘಟಕ ಸ್ಥಾಪನೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಆರ್ಎಐ ಘಟಕ ಸ್ಥಾಪನೆ ವಿಚಾರ ಜನವರಿಯಿಂದಲೇ ಚರ್ಚೆಯಲ್ಲಿದೆ. ಸಂಸ್ಥೆಯವರು ಆರಂಭದಿಂದಲೂ ನಿರ್ದಿಷ್ಟ ಆಕಾರದ (ರೆಕ್ಟಾಂಗ್ಯುಲರ್ ಶೇಪ್) ಭೂಮಿ ಕೇಳುತ್ತಿದ್ದಾರೆ.

ಈ ವಿಚಾರವಾಗಿ ನಾನು ಹಲವು ಬಾರಿ ಸಭೆ ನಡೆಸಿದ್ದು, ಹಿಂದಿನ ಮುಖ್ಯಮಂತ್ರಿಗೂ ಪತ್ರ ಬರೆದಿದ್ದೇನೆ. ಸಿದ್ದರಾಮಯ್ಯ ಅವರು ಬಜೆಟ್ನಲ್ಲಿಯೂ 100 ಎಕರೆ ಭೂಮಿ ನೀಡುವ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ ಈಗ ಸರ್ಕಾರ ಈ ವಿಚಾರವನ್ನು ಮುಂದೂಡುತ್ತಿದೆ ಎಂದು ಆರೋಪಿಸಿದರು.

ಎಆರ್ಎಐ ಘಟಕ ಮಂಡ್ಯದಲ್ಲಿ ಸ್ಥಾಪನೆಯಾಗುವುದರಿಂದ ಕೈಗಾರಿಕೆಗಳ ಬೆಳವಣಿಗೆಗೆ ಅವಕಾಶ ಸಿಗಲಿದೆ. ಹೊಸ ವಾಹನಗಳ ಪರೀಕ್ಷೆ ಸೇರಿದಂತೆ ಹಲವು ಚಟುವಟಿಕೆಗಳು ನಡೆಯಲಿವೆ. ಪುಣೆಯಲ್ಲಿರುವ ಎಆರ್ಎಐ ಘಟಕವನ್ನು ಹೋಗಿ ನೋಡಿದರೆ ಅದರ ಮಹತ್ವ ತಿಳಿಯುತ್ತದೆ.

ಮಂಡ್ಯದಲ್ಲಿ ಈ ಘಟಕ ಬೇಡ ಎನ್ನುವವರು ಸ್ಪಷ್ಟವಾಗಿ ಹೇಳಲಿ, ಘಟಕ ಸ್ಥಾಪನೆಗೆ ಆಸಕ್ತಿ ಇರುವವರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಿದರು.

ಎಆರ್ಎಐ ಜೊತೆಗೆ ಇತರ ಕೈಗಾರಿಕೆಗಳ ಸ್ಥಾಪನೆಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ 500 ಎಕರೆ ಭೂಮಿ ಕೇಳಿದ್ದೆ. ಆದರೆ ಮಂಡ್ಯ ಶಾಸಕರು ಮೊದಲು 100 ಎಕರೆ ವಿಚಾರ ಪ್ರಸ್ತಾಪಿಸಿ, ಈಗ 500 ಎಕರೆ ವಿಚಾರದಲ್ಲಿ ವಿವಾದ ಸೃಷ್ಟಿಸುತ್ತಿದ್ದಾರೆ. ಮೊದಲು 100 ಎಕರೆ ಭೂಮಿ ನೀಡಲಿ, ಬಳಿಕ ಅಭಿವೃದ್ಧಿ ಕಾರ್ಯಗಳ ಸಾಕ್ಷ್ಯವನ್ನು ತೋರಿಸುತ್ತೇನೆ ಎಂದು ಸವಾಲು ಹಾಕಿದರು.

ಮಂಡ್ಯದಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಿ ಎಂದು ಸಾಕ್ಷಿ ಕೇಳುತ್ತಿದ್ದಾರೆ. ಮೊದಲು ಜಾಗ ಕೊಡಿ, ಅಭಿವೃದ್ಧಿಯ ಸಾಕ್ಷ್ಯವನ್ನು ನೀಡುತ್ತೇನೆ. ಮುಂದಿನ ಚುನಾವಣೆಯಲ್ಲಿ ಜನರು ಆಶೀರ್ವಾದ ಮಾಡಿದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ, ಆಗ ನಾವೇ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಐಟಿ ಹಬ್ ಸ್ಥಾಪನೆಗೆ ಎಸ್.ಎಂ. ಕೃಷ್ಣ ಅವರ ಕೊಡುಗೆಯನ್ನು ಹೇಳುವವರು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ನೀಡಿದ ತೆರಿಗೆ ವಿನಾಯಿತಿ ಹಾಗೂ ಕೈಗಾರಿಕೆಗಳಿಗೆ ಉತ್ತೇಜನ ನೀಡಿದ ಕ್ರಮಗಳನ್ನು ನೆನಪಿಸಿಕೊಳ್ಳುವುದಿಲ್ಲ. ಟೊಯೋಟಾ ಸೇರಿದಂತೆ ಹಲವು ಕೈಗಾರಿಕೆಗಳನ್ನು ರಾಜ್ಯಕ್ಕೆ ತರುವಲ್ಲಿ ದೇವೇಗೌಡರ ಪಾತ್ರವಿದೆ ಎಂದು ಕುಮಾರಸ್ವಾಮಿ ಹೇಳಿದರು.

ಜಿಲ್ಲಾಧಿಕಾರಿಗಳ ಸಭೆ ಬಳಿಕ ಸ್ಪಷ್ಟನೆ

ಜಿಲ್ಲಾಧಿಕಾರಿಗಳ ಹೇಳಿಕೆ ಬಳಿಕ ಮಾತನಾಡಿದ ಕುಮಾರಸ್ವಾಮಿ, ಎಆರ್ಎಐ ಘಟಕ ಸ್ಥಾಪನೆಗೆ 100 ಎಕರೆ ಭೂಮಿ ನೀಡಲು ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕೆಂದು ಹೇಳಲಾಗುತ್ತಿದೆ.

ಘಟಕ ಸ್ಥಾಪನೆಗೆ ನಿರ್ದಿಷ್ಟ ಆಕಾರದ ಭೂಮಿ ಅಗತ್ಯವಿದೆ. ಈ ಬಗ್ಗೆ ಮಾಧ್ಯಮಗಳಿಗೆ ತಪ್ಪು ಮಾಹಿತಿ ಹೋಗಬಾರದು. ಅಗತ್ಯವಿರುವ ಆಕಾರದ ಭೂಮಿ ನೀಡುವಂತೆ ಅಧಿಕೃತವಾಗಿ ಪತ್ರ ಬರೆಯಲಿ ಎಂದು ಹೇಳಿದರು.

ಬಾಯಿ ಚಪಲಕ್ಕಾಗಿ ಮಾತನಾಡುವ ರಾಜಕೀಯ ನಾಯಕರು ಸಣ್ಣತನ ಬಿಟ್ಟು ವಾಸ್ತವಾಂಶದ ಬಗ್ಗೆ ಚರ್ಚಿಸಬೇಕು. ಸತ್ಯಾಂಶ ಹೊರಬರಲಿ ಎಂಬ ಉದ್ದೇಶದಿಂದಲೇ ಇಂದು ಸಭೆ ಕರೆದಿದ್ದೇನೆ.

ಮಂಡ್ಯ ಜಿಲ್ಲೆಗೆ ನನ್ನ ಬದ್ಧತೆ ಇದೆ, ಆದರೆ ಅಭಿವೃದ್ಧಿ ಕೆಲಸ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರನ್ನು ಎದುರಿಸಿ, ಬೆದರಿಸಿ ಭೂಮಿ ಪಡೆಯಬಾರದು. ರೈತರ ಮನವೊಲಿಸಿ ಭೂಮಿ ಪಡೆಯುವ ಕೆಲಸ ಮಾಡಬೇಕು. ಈ ವಿಚಾರದಲ್ಲಿ ಸರ್ಕಾರಕ್ಕೆ ವಾಸ್ತವಾಂಶದ ಬಗ್ಗೆ ಮನವರಿಕೆ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಕುಮಾರಸ್ವಾಮಿ ಸಲಹೆ ನೀಡಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande