ಬಿಜೆಪಿ ರಾಜಕೀಯ ಭವಿಷ್ಯ ಭದ್ರಪಡಿಸಿಕೊಳ್ಳಲು ಚುನಾವಣಾ ವ್ಯವಸ್ಥೆ ದುರ್ಬಳಕೆ ಮಾಡಿಕೊಳ್ಳಬಾರದು: ಡಾ.ಜಿ.ಪರಮೇಶ್ವರ
ಬೆಂಗಳೂರು, 28 ನವೆಂಬರ್ (ಹಿ.ಸ.): ಬಿಜೆಪಿ ತನ್ನ ರಾಜಕೀಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವ ಉದ್ದೇಶದಿಂದ ಭಾರತದ ಚುನಾವಣಾ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಏಕರೂಪವಾಗಿ ಶೇ.50ರಷ್ಟು ಹೆಚ್ಚಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಯು ಪ್ರಜಾಪ್ರಭುತ್ವ, ಒಕ
ಡಿಸಿಎಂ ಫೈಲ್ ಪೋಟೋ


ಬೆಂಗಳೂರು, 28 ನವೆಂಬರ್ (ಹಿ.ಸ.):

ಬಿಜೆಪಿ ತನ್ನ ರಾಜಕೀಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವ ಉದ್ದೇಶದಿಂದ ಭಾರತದ ಚುನಾವಣಾ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಏಕರೂಪವಾಗಿ ಶೇ.50ರಷ್ಟು ಹೆಚ್ಚಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಯು ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆ ಹಾಗೂ ರಾಜ್ಯಗಳ ಸಮಾನ ರಾಜಕೀಯ ಪ್ರಾತಿನಿಧ್ಯದ ದೃಷ್ಟಿಯಿಂದ ಗಂಭೀರ ಆತಂಕಗಳನ್ನು ಹುಟ್ಟುಹಾಕಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.

ಈ ಕುರಿತು ಶನಿವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸಲು ಯಾವ ವೈಜ್ಞಾನಿಕ, ಜನಸಂಖ್ಯಾ ಅಥವಾ ಸಾಂವಿಧಾನಿಕ ಆಧಾರವಿದೆ ಎಂದು ಪ್ರಶ್ನಿಸಿದ್ದಾರೆ.

ಇಂತಹ ಮಹತ್ವದ ಸಾಂವಿಧಾನಿಕ ಬದಲಾವಣೆಗೆ ಮುಂದಾಗುವ ಮೊದಲು ಸರ್ವಪಕ್ಷ ಸಭೆ ಕರೆಯದೆ, ಅಂತಾರಾಜ್ಯ ಮಂಡಳಿಯ ಮೂಲಕ ರಾಜ್ಯಗಳ ಅಭಿಪ್ರಾಯ ಪಡೆಯದೆ ಕೇಂದ್ರ ಸರ್ಕಾರ ಆತುರದಿಂದ ಮುಂದುವರಿಯುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ಆಡಳಿತ ಮತ್ತು ಸಾಧನೆಗಳ ಮೂಲಕ ಜನರಿಂದ ಹೊಸ ಜನಾದೇಶ ಪಡೆಯುವ ಬದಲು, ಚುನಾವಣಾ ವ್ಯವಸ್ಥೆಯನ್ನೇ ಬದಲಾಯಿಸುವ ಮೂಲಕ ಬಿಜೆಪಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆಯೇ ಎಂಬ ಅನುಮಾನ ಮೂಡಿದೆ. ಈ ಪ್ರಕ್ರಿಯೆಯ ಸಮಯ ಮತ್ತು ಅನುಸರಿಸುತ್ತಿರುವ ವಿಧಾನವು ಇಂತಹ ಪ್ರಶ್ನೆಗಳಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಪ್ರಾತಿನಿಧ್ಯದ ಅಂತರ ಮತ್ತಷ್ಟು ಹೆಚ್ಚಳ

ಪ್ರಸ್ತಾವಿತ ಸೂತ್ರದ ಪ್ರಕಾರ ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಈಗಿನ 28ರಿಂದ 42ಕ್ಕೆ ಏರಿಕೆಯಾಗಲಿದೆ. ಉತ್ತರ ಪ್ರದೇಶದ ಕ್ಷೇತ್ರಗಳ ಸಂಖ್ಯೆ 80ರಿಂದ 120ಕ್ಕೆ ಹಾಗೂ ಬಿಹಾರದ ಕ್ಷೇತ್ರಗಳ ಸಂಖ್ಯೆ 40ರಿಂದ 60ಕ್ಕೆ ಹೆಚ್ಚಾಗಲಿದೆ. ಇದರಿಂದ ಕರ್ನಾಟಕ ಮತ್ತು ಉತ್ತರ ಪ್ರದೇಶಗಳ ನಡುವಿನ ಸಂಸದೀಯ ಪ್ರಾತಿನಿಧ್ಯದ ಅಂತರ ಈಗಿರುವ 52 ಸ್ಥಾನಗಳಿಂದ 78 ಸ್ಥಾನಗಳಿಗೆ ವಿಸ್ತರಣೆಯಾಗಲಿದೆ ಎಂದು ವಿವರಿಸಿದ್ದಾರೆ.

ಉತ್ತರ ಪ್ರದೇಶಕ್ಕೆ ಹೆಚ್ಚುವರಿಯಾಗಿ ದೊರೆಯುವ ಸ್ಥಾನಗಳ ಸಂಖ್ಯೆಯೇ ವಿಸ್ತರಿತ ಲೋಕಸಭೆಯಲ್ಲಿ ಕರ್ನಾಟಕದ ಒಟ್ಟು ಪ್ರಾತಿನಿಧ್ಯಕ್ಕೆ ಸಮನಾಗಿರಲಿದೆ ಎಂಬುದು ಗಮನಾರ್ಹ. ಕರ್ನಾಟಕಕ್ಕೆ ಹೆಚ್ಚಿನ ಸಂಸದರು ದೊರೆಯಬಹುದಾದರೂ ರಾಷ್ಟ್ರೀಯ ನೀತಿಗಳ ರೂಪಿಸುವಿಕೆ, ಶಾಸಕಾಂಗದ ಆದ್ಯತೆಗಳ ನಿರ್ಧಾರ ಹಾಗೂ ರಾಜ್ಯದ ಜನರ ಮೇಲೆ ಪರಿಣಾಮ ಬೀರುವ ತೀರ್ಮಾನಗಳಲ್ಲಿ ಕರ್ನಾಟಕದ ಧ್ವನಿ ಸೀಮಿತವಾಗಿಯೇ ಉಳಿಯಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಏಕರೂಪದ ಶೇ.50ರಷ್ಟು ಹೆಚ್ಚಳವು ಈಗಿರುವ ಅನುಪಾತದ ಪ್ರಾತಿನಿಧ್ಯವನ್ನು ಉಳಿಸಬಹುದೇ ಹೊರತು, ಸಂಸದೀಯ ಪ್ರಾತಿನಿಧ್ಯದಲ್ಲಿನ ಅಸಮಾನತೆಯನ್ನು ಕಡಿಮೆ ಮಾಡುವುದಿಲ್ಲ. ಕರ್ನಾಟಕಕ್ಕೆ ಎಷ್ಟು ಸ್ಥಾನಗಳು ಹೆಚ್ಚಾಗುತ್ತವೆ ಎಂಬುದಕ್ಕಿಂತ ರಾಷ್ಟ್ರೀಯ ನಿರ್ಧಾರಗಳಲ್ಲಿ ರಾಜ್ಯದ ಧ್ವನಿಗೆ ಎಷ್ಟು ಮಹತ್ವ ಸಿಗುತ್ತದೆ ಎಂಬುದು ಮುಖ್ಯ ಎಂದು ಹೇಳಿದ್ದಾರೆ.

2051ರವರೆಗೆ ರಾಜ್ಯಗಳ ಈಗಿನ ಅನುಪಾತದ ಪ್ರಾತಿನಿಧ್ಯವನ್ನು ರಕ್ಷಿಸುವ ನಿರ್ಧಾರ ವರದಿಯಾಗಿರುವುದು ದಕ್ಷಿಣ ಭಾರತದ ರಾಜ್ಯಗಳ ಆತಂಕವನ್ನು ಕೇಂದ್ರ ಸರ್ಕಾರವೂ ಗುರುತಿಸಿರುವುದನ್ನು ಸೂಚಿಸುತ್ತದೆ. ಆದರೆ, ಸಾಂವಿಧಾನಿಕ ಸವಾಲನ್ನು ಮುಂದೂಡುವುದಕ್ಕೂ ಶಾಶ್ವತ ಪರಿಹಾರ ಕಂಡುಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಒಕ್ಕೂಟ ವ್ಯವಸ್ಥೆಯ ಸಮಾನತೆ ಕಾಪಾಡುವ ಹಾಗೂ ರಾಷ್ಟ್ರೀಯ ಅಭಿವೃದ್ಧಿಗೆ ಕೊಡುಗೆ ನೀಡಿರುವ ರಾಜ್ಯಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಶಾಶ್ವತ ಚೌಕಟ್ಟು ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಹುಲ್ ಗಾಂಧಿ ಕಳವಳಕ್ಕೆ ಬೆಂಬಲ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯು ಭಾರತದ ರಾಜಕೀಯ ಮತ್ತು ಚುನಾವಣಾ ನಕ್ಷೆಯನ್ನು ಬದಲಾಯಿಸುವ ಪ್ರಯತ್ನವಾಗಿದೆ. ಇದು ಕರ್ನಾಟಕದಂತಹ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯ ಮತ್ತು ಅಸ್ಮಿತೆಯ ಮೇಲೆ ದೂರಗಾಮಿ ಪರಿಣಾಮ ಬೀರಲಿದೆ ಎಂಬ ರಾಹುಲ್ ಗಾಂಧಿ ಅವರ ಕಳವಳವನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.

ಕ್ಷೇತ್ರ ಮರುವಿಂಗಡಣೆಯ ಪರಿಣಾಮಗಳು ರಾಜ್ಯಗಳ ನಡುವಿನ ಸ್ಥಾನಗಳ ಹಂಚಿಕೆಗೆ ಮಾತ್ರ ಸೀಮಿತವಾಗಿಲ್ಲ. ನಗರ ಮತ್ತು ಗ್ರಾಮೀಣ ಪ್ರದೇಶಗಳು, ಬುಡಕಟ್ಟು ಹಾಗೂ ಬುಡಕಟ್ಟೇತರ ಪ್ರದೇಶಗಳು ಮತ್ತು ಅಭಿವೃದ್ಧಿ ಹೊಂದಿದ ಹಾಗೂ ಹಿಂದುಳಿದ ಪ್ರದೇಶಗಳ ನಡುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಈ ಪರಿಣಾಮಗಳ ಬಗ್ಗೆ ಕೇಂದ್ರ ಸರ್ಕಾರ ಅಧ್ಯಯನ ನಡೆಸಿದೆಯೇ ಅಥವಾ ಚುನಾವಣಾ ಲೆಕ್ಕಾಚಾರ ಹಾಗೂ ತನ್ನ ಸಾಂಪ್ರದಾಯಿಕ ಮತಬ್ಯಾಂಕ್ ಬಲಪಡಿಸುವ ಉದ್ದೇಶದಿಂದ ಪ್ರಕ್ರಿಯೆ ಕೈಗೆತ್ತಿಕೊಂಡಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಐತಿಹಾಸಿಕವಾಗಿ ಸೂಕ್ತ ಪ್ರಾತಿನಿಧ್ಯದಿಂದ ವಂಚಿತರಾಗಿರುವ ಸಮುದಾಯಗಳು ಮತ್ತಷ್ಟು ಕಡೆಗಣಿಸಲ್ಪಡದಂತೆ ಮತ್ತು ಅವರ ರಾಜಕೀಯ ಧ್ವನಿ ದುರ್ಬಲಗೊಳ್ಳದಂತೆ ಕೇಂದ್ರ ಸರ್ಕಾರ ಖಚಿತಪಡಿಸಬೇಕು. ಕ್ಷೇತ್ರ ಮರುವಿಂಗಡಣೆಯು ಪ್ರಾದೇಶಿಕ ಹಾಗೂ ಸಾಮಾಜಿಕ ಅಸಮಾನತೆಗಳನ್ನು ಕಡಿಮೆ ಮಾಡಬೇಕೇ ಹೊರತು ಹೆಚ್ಚಿಸಬಾರದು ಎಂದು ಹೇಳಿದ್ದಾರೆ.

ರಾಜ್ಯಸಭೆಯ ಪ್ರಭಾವ ಕುಗ್ಗುವ ಆತಂಕ

ಸಂಸತ್ತಿನಲ್ಲಿ ರಾಜ್ಯಗಳ ಹಿತಾಸಕ್ತಿಯನ್ನು ಪ್ರತಿನಿಧಿಸುವ ರಾಜ್ಯಸಭೆಯು ದುರ್ಬಲಗೊಳ್ಳುವ ಸಾಧ್ಯತೆಯೂ ಗಂಭೀರ ಸಾಂವಿಧಾನಿಕ ಕಳವಳವಾಗಿದೆ. ರಾಜ್ಯಸಭೆಯ ಸ್ಥಾನಗಳನ್ನು ಅದಕ್ಕೆ ಅನುಗುಣವಾಗಿ ಹೆಚ್ಚಿಸದೆ ಲೋಕಸಭೆಯ ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಿಸಿದರೆ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಗಳಲ್ಲಿ ರಾಜ್ಯಸಭೆಯ ಮತಗಳ ಪ್ರಾಬಲ್ಯ ಹೋಲಿಕೆಯಲ್ಲಿ ಕಡಿಮೆಯಾಗಲಿದೆ. ಸಂಸತ್ತಿನ ಜಂಟಿ ಅಧಿವೇಶನಗಳಲ್ಲಿಯೂ ರಾಜ್ಯಸಭೆಯ ಪ್ರಭಾವ ಕುಗ್ಗಲಿದೆ ಎಂದು ಎಚ್ಚರಿಸಿದ್ದಾರೆ.

ಸಂಸತ್ತಿನ ಉಭಯ ಸದನಗಳ ನಡುವಿನ ಅಧಿಕಾರದ ಸಮತೋಲನದ ಮೇಲೆ ಆಗುವ ಪರಿಣಾಮಗಳನ್ನು ಕೇಂದ್ರ ಸರ್ಕಾರ ಪರಿಶೀಲಿಸಿದೆಯೇ ಎಂದು ಪ್ರಶ್ನಿಸಿರುವ ಅವರು, ಲೋಕಸಭೆ ಮತ್ತು ರಾಜ್ಯಸಭೆಯ ನಡುವಿನ ಸಾಂಸ್ಥಿಕ ಸಮತೋಲನವನ್ನು ಕಾಪಾಡುವುದು ಅಗತ್ಯ ಎಂದಿದ್ದಾರೆ.

ಜನಸಂಖ್ಯೆ ನಿಯಂತ್ರಣದ ಸಾಧನೆಗೆ ಶಿಕ್ಷೆ ಬೇಡ

1976ರಲ್ಲಿ ಇಂದಿರಾ ಗಾಂಧಿ ಅವರ ನಾಯಕತ್ವದಲ್ಲಿ ಜನಸಂಖ್ಯೆ ನಿಯಂತ್ರಣದ ರಾಷ್ಟ್ರೀಯ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ ರಾಜ್ಯಗಳಿಗೆ ರಾಜಕೀಯವಾಗಿ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಸಂಸತ್ತಿನಲ್ಲಿ ರಾಜ್ಯಗಳ ನಡುವಿನ ಸಂಸದೀಯ ಸ್ಥಾನಗಳ ಹಂಚಿಕೆಯನ್ನು ಸ್ಥಗಿತಗೊಳಿಸಲಾಗಿತ್ತು. 2001ರಲ್ಲಿ 84ನೇ ಸಂವಿಧಾನ ತಿದ್ದುಪಡಿಯ ಮೂಲಕ ಈ ತತ್ವವನ್ನು ಮತ್ತೊಮ್ಮೆ ದೃಢಪಡಿಸಲಾಯಿತು. ಅಂದು ಈ ನಿರ್ಧಾರಗಳಿಗೆ ಕಾರಣವಾದ ಆಶಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ 2023ರ ಅಧಿಕೃತ ಅಂಕಿಅಂಶಗಳ ಪ್ರಕಾರ, ದೇಶದ ಒಟ್ಟು ಜನನ ದರ 1.9ರಷ್ಟಿದ್ದು, ಜನಸಂಖ್ಯೆಯ ಬದಲಾವಣೆಗೆ ಅಗತ್ಯವಾದ 2.1ರ ಬದಲಿ ದರಕ್ಕಿಂತ ಕಡಿಮೆಯಿದೆ. ಕರ್ನಾಟಕದ ಜನನ ದರ 1.5ರಷ್ಟಿದೆ. ದಕ್ಷಿಣ ಭಾರತದ ಐದೂ ರಾಜ್ಯಗಳಲ್ಲಿ ಈ ಪ್ರಮಾಣ 1.5 ಅಥವಾ ಅದಕ್ಕಿಂತ ಕಡಿಮೆಯಿದೆ. ಆದರೆ ಉತ್ತರ ಪ್ರದೇಶದಲ್ಲಿ 2.6 ಹಾಗೂ ಬಿಹಾರದಲ್ಲಿ 2.8ರಷ್ಟಿದೆ ಎಂದು ಅಂಕಿಅಂಶಗಳನ್ನು ಉಲ್ಲೇಖಿಸಿದ್ದಾರೆ.

ದಕ್ಷಿಣ ಭಾರತದ ರಾಜ್ಯಗಳ ಈ ಸಾಧನೆ ಮಹಿಳಾ ಶಿಕ್ಷಣ, ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹಾಗೂ ಕುಟುಂಬ ಕಲ್ಯಾಣ ಕಾರ್ಯಕ್ರಮಗಳಲ್ಲಿ ದಶಕಗಳ ಕಾಲ ಮಾಡಿದ ಹೂಡಿಕೆ ಮತ್ತು ಪರಿಶ್ರಮದ ಫಲವಾಗಿದೆ. ಜನಸಂಖ್ಯೆ ನಿಯಂತ್ರಣದ ರಾಷ್ಟ್ರೀಯ ಗುರಿಗಳನ್ನು ಯಶಸ್ವಿಯಾಗಿ ಈಡೇರಿಸಿರುವ ರಾಜ್ಯಗಳಿಗೆ ಅದಕ್ಕಾಗಿ ರಾಜಕೀಯವಾಗಿ ಯಾವುದೇ ಅನ್ಯಾಯವಾಗಬಾರದು ಎಂದು ಪ್ರತಿಪಾದಿಸಿದ್ದಾರೆ.

ತೆರಿಗೆ ಮತ್ತು ಸಂಪನ್ಮೂಲ ಹಂಚಿಕೆಯಲ್ಲಿ ಈಗಾಗಲೇ ಕರ್ನಾಟಕ ಅಸಮಾನತೆಯ ವಿರುದ್ಧ ಧ್ವನಿ ಎತ್ತಿದೆ. ರಾಜಕೀಯ ಪ್ರಾತಿನಿಧ್ಯದಲ್ಲಿನ ಅಸಮಾನತೆಯಿಂದ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗಬಾರದು. ಹೊಸ ಜನಗಣತಿ ಪ್ರಕ್ರಿಯೆ ನಡೆಯುತ್ತಿರುವಾಗ 15 ವರ್ಷಗಳಷ್ಟು ಹಳೆಯದಾದ ಜನಸಂಖ್ಯಾ ದತ್ತಾಂಶವನ್ನು ಆಧರಿಸಿ ಕ್ಷೇತ್ರಗಳ ಮರುವಿಂಗಡಣೆ ಮಾಡುವ ಅಗತ್ಯವೇನು ಎಂದು ಪ್ರಶ್ನಿಸಿದ್ದಾರೆ.

2029ರಿಂದಲೇ ಮಹಿಳಾ ಮೀಸಲಾತಿ ಜಾರಿಗೆ ತರಲಿ

ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ಸಂಪೂರ್ಣ ಬದ್ಧವಾಗಿದೆ. 2008ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿ, 2010ರಲ್ಲಿ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ 2023ರಲ್ಲಿ ಮಹಿಳಾ ಮೀಸಲಾತಿ ಅನುಷ್ಠಾನವನ್ನು ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಗೆ ಜೋಡಿಸಿದ್ದು ಬಿಜೆಪಿ ಸರ್ಕಾರ ಎಂದು ಟೀಕಿಸಿದ್ದಾರೆ.

ಮಹಿಳಾ ಸಬಲೀಕರಣವನ್ನು ಚುನಾವಣಾ ಸರಕಾಗಿಸಬಾರದು. ಅಗತ್ಯ ಸಾಂವಿಧಾನಿಕ ತಿದ್ದುಪಡಿ ತಂದು, ಈಗಿರುವ ಸಂಸತ್ತಿನ ಸ್ಥಾನಗಳ ಸಂಖ್ಯೆಯಲ್ಲಿಯೇ ಶೇ.33ರಷ್ಟು ಮಹಿಳಾ ಮೀಸಲಾತಿ ಕಲ್ಪಿಸಿ 2029ರ ಚುನಾವಣೆಯಿಂದಲೇ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.

ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ ವೈಜ್ಞಾನಿಕ ಆಧಾರಗಳನ್ನು ಕೇಂದ್ರ ಸರ್ಕಾರ ಸಾರ್ವಜನಿಕವಾಗಿ ಪ್ರಕಟಿಸಬೇಕು. ಎಲ್ಲ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ ನ್ಯಾಯಸಮ್ಮತ ಹಾಗೂ ದೀರ್ಘಕಾಲಿಕ ಚೌಕಟ್ಟನ್ನು ರೂಪಿಸಬೇಕು. ಭಾರತಕ್ಕೆ ಬಲಿಷ್ಠ ಸಂಸತ್ತು, ಬಲಿಷ್ಠ ಒಕ್ಕೂಟ ವ್ಯವಸ್ಥೆ ಮತ್ತು ಪ್ರತಿಯೊಂದು ರಾಜ್ಯಕ್ಕೂ ಅರ್ಥಪೂರ್ಣ ರಾಜಕೀಯ ಪ್ರಾತಿನಿಧ್ಯ ದೊರೆಯುವ ಪ್ರಜಾಪ್ರಭುತ್ವದ ಅಗತ್ಯವಿದೆ ಎಂದು ಹೇಳಿದ್ದಾರೆ.

“ಭಾರತದ ರಾಜಕೀಯ ಭವಿಷ್ಯವನ್ನು ನಿರ್ಧರಿಸಬೇಕಾದದ್ದು ಭಾರತದ ಸಂವಿಧಾನವೇ ಹೊರತು, ಯಾವುದೇ ರಾಜಕೀಯ ಪಕ್ಷದ ಭವಿಷ್ಯಕ್ಕಾಗಿ ಭಾರತದ ಸಂವಿಧಾನವನ್ನು ಬದಲಾಯಿಸಬಾರದು” ಎಂದು ಡಾ.ಜಿ.ಪರಮೇಶ್ವರ ಪ್ರಕಟಣೆಯಲ್ಲಿ ಪ್ರತಿಪಾದಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande