ಜನಸಂಖ್ಯೆಯ ಅಸಮತೋಲನದ ಬೆಳವಣಿಗೆ ತಡೆಯದಿದ್ದರೆ ಹಿಂದೂಗಳು ಅಲ್ಪಸಂಖ್ಯಾತರಾಗುವ ಆತಂಕ
ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಡೆಮೋಗ್ರಫಿ ಈಸ್ ಡೆಸ್ಟಿನಿ’ ಸಾಕ್ಷ್ಯಚಿತ್ರ ಪ್ರದರ್ಶನ
ಜನಸಂಖ್ಯೆಯ ಅಸಮತೋಲನದ ಬೆಳವಣಿಗೆ ತಡೆಯದಿದ್ದರೆ ಹಿಂದೂಗಳು ಅಲ್ಪಸಂಖ್ಯಾತರಾಗುವ ಆತಂಕ


ಪಣಜಿ, 27 ನವೆಂಬರ್ (ಹಿ.ಸ.):

ಜನಸಂಖ್ಯೆಯ ಅಸಮತೋಲನದ ಬೆಳವಣಿಗೆಗೆ ಕಡಿವಾಣ ಹಾಕದಿದ್ದರೆ ಮುಂದಿನ 30ರಿಂದ 35 ವರ್ಷಗಳಲ್ಲಿ ಭಾರತದ ಮೂಲ ನಿವಾಸಿಗಳು ಅಲ್ಪಸಂಖ್ಯಾತರಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸುವ ಮಹತ್ವದ ಸಾಕ್ಷ್ಯಚಿತ್ರವೊಂದು ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶುಕ್ರವಾರ ಪ್ರದರ್ಶನಗೊಂಡಿತು.

‘ಡೆಮೋಗ್ರಫಿ ಈಸ್ ಡೆಸ್ಟಿನಿ’ ಎಂಬ ಈ ಸಾಕ್ಷ್ಯಚಿತ್ರವನ್ನು ಖ್ಯಾತ ಉದ್ಯಮಿ ಹಾಗೂ ಹಿಂದೂಸ್ಥಾನ್ ಸಮಾಚಾರ್ ಸುದ್ದಿ ಸಂಸ್ಥೆಯ ನಿರ್ದೇಶಕ ರವೀಂದ್ರ ಸಂಘವಿ ನಿರ್ಮಿಸಿದ್ದಾರೆ. ಕಾಮಾಖ್ಯ ನಾರಾಯಣ ಸಿಂಗ್ ಮತ್ತು ಅಂಶುಮಾನ್ ಶೇಖರ್ ನಿರ್ದೇಶಿಸಿದ್ದಾರೆ.

ದೇಶದ ದೀರ್ಘಕಾಲೀನ ಜನಸಂಖ್ಯಾ ಪ್ರವೃತ್ತಿಗಳು, ರಾಷ್ಟ್ರೀಯ ಸ್ಥಿರತೆ, ಸಾಂಸ್ಕೃತಿಕ ನಿರಂತರತೆ ಹಾಗೂ ಸಮಾಜದ ಭವಿಷ್ಯದ ಮೇಲೆ ಜನಸಂಖ್ಯಾ ಬದಲಾವಣೆಗಳು ಬೀರುವ ಪರಿಣಾಮಗಳ ಕುರಿತು ಗಂಭೀರ ಚಿಂತನೆ ನಡೆಸುವಂತೆ ಸಾಕ್ಷ್ಯಚಿತ್ರ ಪ್ರೇಕ್ಷಕರನ್ನು ಪ್ರೇರೇಪಿಸುತ್ತದೆ.

ಐತಿಹಾಸಿಕ ಜನಗಣತಿ ಅಂಕಿಅಂಶಗಳ ವಿಶ್ಲೇಷಣೆ

19ನೇ ಶತಮಾನದ ಉತ್ತರಾರ್ಧದಿಂದ ಇಂದಿನವರೆಗಿನ ಭಾರತದ ಜನಸಂಖ್ಯಾ ರಚನೆಯಲ್ಲಿನ ಬದಲಾವಣೆಗಳನ್ನು ಐತಿಹಾಸಿಕ ಜನಗಣತಿ ಅಂಕಿಅಂಶಗಳ ಆಧಾರದಲ್ಲಿ ಸಾಕ್ಷ್ಯಚಿತ್ರ ವಿಶ್ಲೇಷಿಸುತ್ತದೆ. ಜನಸಂಖ್ಯೆಯಲ್ಲಿನ ಬದಲಾವಣೆಗಳು ದೇಶದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಭವಿಷ್ಯದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ವಿವರಿಸುತ್ತದೆ.

ದೇಶ ವಿಭಜನೆಯಂತಹ ಪ್ರಮುಖ ಐತಿಹಾಸಿಕ ಘಟನೆಗಳಿಗೂ ಜನಸಂಖ್ಯಾ ಬದಲಾವಣೆಗಳಿಗೂ ಇರುವ ಸಂಬಂಧದ ಕುರಿತು ಸಾಕ್ಷ್ಯಚಿತ್ರದಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

2050-60ರ ವೇಳೆಗೆ ಹಿಂದೂಗಳ ಜನಸಂಖ್ಯೆ ಶೇ.50ಕ್ಕಿಂತ ಕಡಿಮೆಯಾಗುವ ಆತಂಕ

ಜನಸಂಖ್ಯೆ ನಿಯಂತ್ರಣಕ್ಕೆ ಸಕಾಲದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ 2050ರಿಂದ 2060ರ ಅವಧಿಯಲ್ಲಿ ಹಿಂದೂ ಸಮಾಜದ ಜನಸಂಖ್ಯೆಯ ಪ್ರಮಾಣ ಶೇ.50ಕ್ಕಿಂತ ಕಡಿಮೆಯಾಗಬಹುದು ಎಂದು ಸಾಕ್ಷ್ಯಚಿತ್ರದಲ್ಲಿ ಎಚ್ಚರಿಸಲಾಗಿದೆ.

ದೇಶದ ಭವಿಷ್ಯವನ್ನು ಸುರಕ್ಷಿತವಾಗಿ ರೂಪಿಸಲು ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಸಮಯೋಚಿತ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ ಎಂಬ ಸಂದೇಶದೊಂದಿಗೆ ಸಾಕ್ಷ್ಯಚಿತ್ರ ಮುಕ್ತಾಯಗೊಳ್ಳುತ್ತದೆ.

ನಿರ್ದೇಶಕರ ಹಿಂದಿನ ಚಿತ್ರಗಳು

ಸಹನಿರ್ದೇಶಕ ಕಾಮಾಖ್ಯ ನಾರಾಯಣ ಸಿಂಗ್ ಅವರು 2020ರಲ್ಲಿ ಬಿಡುಗಡೆಯಾದ ‘ಜಸ್ಟಿಸ್ ಡಿಲೇಡ್ ಬಟ್ ಡೆಲಿವರ್ಡ್’, 2018ರ ‘ಭೋರ್: ಡಾನ್’ ಹಾಗೂ 2026ರ ‘ದಿ ಕೇರಳ ಸ್ಟೋರಿ 2 ಗೋಸ್ ಬಿಯಾಂಡ್’ ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಮತ್ತೊಬ್ಬ ಸಹನಿರ್ದೇಶಕ ಅಂಶುಮಾನ್ ಶೇಖರ್ ಅವರು 2019ರಲ್ಲಿ ಬಿಡುಗಡೆಯಾದ ‘ಎ ಟ್ರಿಬ್ಯೂಟ್ ಟು ಲೇಟ್ ಶ್ರೀ ಮನೋಹರ್ ಪರಿಕ್ಕರ್’ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande