
ಬೆಂಗಳೂರು, 27 ನವೆಂಬರ್ (ಹಿ.ಸ.):
ಸರ್ಕಾರಿ ಜಮೀನು ಒತ್ತುವರಿ ತೆರವು ವಿಚಾರವಾಗಿ ನಡೆದ ಗಲಾಟೆ ಗುಂಡಿನ ದಾಳಿಯಲ್ಲಿ ಅಂತ್ಯಗೊಂಡಿದ್ದು, 25 ವರ್ಷದ ಯುವಕನೊಬ್ಬ ಹತ್ಯೆಯಾಗಿರುವ ಘಟನೆ ಬೆಂಗಳೂರು ಹೊರವಲಯದ ಹೊಸಕೋಟೆ ಸಮೀಪದ ಸೋಲೂರಿನಲ್ಲಿ ನಡೆದಿದೆ.
ಲಿಖಿತ್ ಗೌಡ (25) ಕೊಲೆಯಾದ ಯುವಕ. ರಮೇಶ್ ಎಂಬಾತ ಗುಂಡು ಹಾರಿಸಿ ಕೊಲೆ ಮಾಡಿದ ಆರೋಪಿಯಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಸೋಲೂರಿನಲ್ಲಿ ಆಶ್ರಯ ಯೋಜನೆಯಡಿ ಜಮೀನು ಗುರುತಿಸುವ ಕಾರ್ಯ ನಡೆಯುತ್ತಿತ್ತು. ಈ ವೇಳೆ ಸರ್ಕಾರಿ ಜಮೀನಿನ ಸುಮಾರು 10 ಗುಂಟೆ ಪ್ರದೇಶವನ್ನು ರಮೇಶ್ ಒತ್ತುವರಿ ಮಾಡಿಕೊಂಡಿದ್ದ ಎನ್ನಲಾಗಿದೆ. ಹೀಗಾಗಿ ಒತ್ತುವರಿ ತೆರವುಗೊಳಿಸುವ ಉದ್ದೇಶದಿಂದ ಅಧಿಕಾರಿಗಳು ತೆರಳಿದ್ದ ಸಂದರ್ಭದಲ್ಲಿ ರಮೇಶ್ ಹಾಗೂ ಲಿಖಿತ್ ಗೌಡ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ಕೋಪಗೊಂಡ ರಮೇಶ್ ತನ್ನ ಲೈಸೆನ್ಸ್ ಹೊಂದಿರುವ ಬಂದೂಕಿನಿಂದ ಲಿಖಿತ್ ಗೌಡನ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡ ಲಿಖಿತ್ ಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆ ತಿಳಿಯುತ್ತಿದ್ದಂತೆ ಹೊಸಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಕೊಲೆ ಆರೋಪಿಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R