
ಬೆಂಗಳೂರು, 27 ನವೆಂಬರ್ (ಹಿ.ಸ.):
ಪ್ರೀತಿಯ ಸಂಬಂಧವೇ ಯುವತಿಯೊಬ್ಬಳ ಬರ್ಬರ ಹತ್ಯೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೇರಳ ಮೂಲದ 22 ವರ್ಷದ ನರ್ಸಿಂಗ್ ಪದವೀಧರೆ ಗಂಗಾ ಕೊಲೆಯಾದ ಯುವತಿ. ಆಕೆಯ ಪ್ರಿಯತಮನೇ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ.
ನಗರದ OTC ರಸ್ತೆಯಲ್ಲಿರುವ ರಿಲಯನ್ಸ್ ಲಾಡ್ಜ್ನಲ್ಲಿ ಈ ಭೀಕರ ಕೃತ್ಯ ನಡೆದಿದೆ. ತವಕ್ಕಲ್ ಮಸ್ತಾನ್ ದರ್ಗಾ ಸಮೀಪದಲ್ಲಿರುವ ಲಾಡ್ಜ್ಗೆ ನಿನ್ನೆ ಗಂಗಾ ಮತ್ತು ಆಕೆಯ ಪ್ರಿಯತಮ ಗೋಕುಲ್ ಕೃಷ್ಣ ಇಬ್ಬರೂ ಆಗಮಿಸಿದ್ದರು. ಇಬ್ಬರೂ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ನರ್ಸಿಂಗ್ ಪದವಿ ಮುಗಿಸಿದ್ದ ಗಂಗಾ ಉದ್ಯೋಗದ ಹುಡುಕಾಟದಲ್ಲಿದ್ದರು. ಇತ್ತ ಗೋಕುಲ್ ಕೃಷ್ಣ ಕೂಡ ನರ್ಸಿಂಗ್ ಪದವೀಧರನಾಗಿದ್ದು, ನರ್ಸಿಂಗ್ ಮುಗಿಸಿದವರಿಗೆ ಉದ್ಯೋಗ ಕೊಡಿಸುವುದರ ಜೊತೆಗೆ ಕಾಲೇಜುಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೂ ನೆರವಾಗುತ್ತಿದ್ದ ಎನ್ನಲಾಗಿದೆ.
ಇಂದು ಬೆಳಗ್ಗೆ ಲಾಡ್ಜ್ನಲ್ಲಿ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ಜಗಳ ನಡೆದಿದೆ ಎನ್ನಲಾಗಿದೆ. ಈ ವೇಳೆ ಗೋಕುಲ್ ಕೃಷ್ಣ ಮೊದಲೇ ತಂದಿದ್ದ ಚಾಕುವಿನಿಂದ ಗಂಗಾಗೆ ಇರಿದು ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ಗಂಗಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಕಾಟನ್ಪೇಟೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಗೋಕುಲ್ ಕೃಷ್ಣನನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ವಿಚಾರಣೆ ನಡೆಸುತ್ತಿರುವ ಪೊಲೀಸರು, ಕೊಲೆಗೆ ನಿಖರ ಕಾರಣವೇನು? ನಾಲ್ಕು ವರ್ಷಗಳ ಪ್ರೀತಿಯ ಸಂಬಂಧದಲ್ಲಿ ಬಿರುಕು ಮೂಡಲು ಕಾರಣವೇನು? ಎಂಬ ಆಯಾಮಗಳಲ್ಲಿ ತನಿಖೆ ಮುಂದುವರಿಸಿರುವುದಾಗಿ ಗಾಂಧಿನಗರ ವಿಭಾಗದ ಡಿಸಿಪಿ ಲಕ್ಷ್ಮಿ ಗಣೇಶ್ ಮಾಹಿತಿ ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R