
ನವದೆಹಲಿ, 26 ನವೆಂಬರ್ (ಹಿ.ಸ.):
ಕಾವೇರಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವಿನ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ನೀರಿನ ಕೊರತೆಯ ವರ್ಷದಲ್ಲೂ ಕರ್ನಾಟಕಕ್ಕೆ ತನ್ನ ಪಾಲಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ಬಳಸಲು ಅವಕಾಶ ನೀಡಲಾಗಿದೆ ಎಂದು ತಮಿಳುನಾಡು ಸರ್ಕಾರ ಆರೋಪಿಸಿದೆ. ಇದರಿಂದ ಕಾವೇರಿ ಜಲಾನಯನ ಪ್ರದೇಶದ ಡೆಲ್ಟಾ ಭಾಗದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ 62ನೇ ಸಭೆಯಲ್ಲಿ ತಮಿಳುನಾಡು ಸರ್ಕಾರ ಈ ಕುರಿತು ಭಿನ್ನಾಭಿಪ್ರಾಯದ ಟಿಪ್ಪಣಿ ಸಲ್ಲಿಸಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕೈಗೊಂಡಿರುವ ನಿರ್ಧಾರಗಳು ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು, ಉಚ್ಚತಮ ನ್ಯಾಯಾಲಯದ ಆದೇಶ ಹಾಗೂ ಪ್ರಾಧಿಕಾರಗಳೇ ಸಂಗ್ರಹಿಸಿರುವ ದತ್ತಾಂಶಗಳಿಗೆ ವಿರುದ್ಧವಾಗಿವೆ ಎಂದು ಟಿಪ್ಪಣಿಯಲ್ಲಿ ಆಕ್ಷೇಪಿಸಲಾಗಿದೆ.
ನೀರಿನ ಕೊರತೆಯ ವರ್ಷಗಳಲ್ಲಿ ನ್ಯಾಯಾಲಯದ ತೀರ್ಪಿನಂತೆ ರಾಜ್ಯಗಳಿಗೆ ನಿಗದಿಪಡಿಸಿರುವ ನೀರಿನ ಪಾಲನ್ನು ಅನುಪಾತದ ಆಧಾರದ ಮೇಲೆ ಕಡಿತಗೊಳಿಸಬೇಕು ಎಂಬುದು ತಮಿಳುನಾಡಿನ ವಾದವಾಗಿದೆ.
ಆದರೆ, ನೀರಿನ ಕೊರತೆಯ ಪ್ರಮಾಣವನ್ನು ನಿರ್ಧರಿಸುವಾಗ ಸೂಕ್ತ ವೈಜ್ಞಾನಿಕ ವಿಧಾನ ಅನುಸರಿಸಿಲ್ಲ. ಈ ಕುರಿತು ಸ್ಪಷ್ಟನೆ ಕೇಳಿದರೂ ಸಂಬಂಧಪಟ್ಟ ಪ್ರಾಧಿಕಾರಗಳು ಉತ್ತರ ನೀಡದೆ, ಅಸ್ಪಷ್ಟ ಪರಿಸ್ಥಿತಿಗಳ ಆಧಾರದ ಮೇಲೆ ತಾತ್ಕಾಲಿಕ ನಿರ್ಧಾರ ಕೈಗೊಂಡಿವೆ ಎಂದು ತಮಿಳುನಾಡು ಆರೋಪಿಸಿದೆ.
ಭಾರತ ಸರ್ಕಾರ 2018ರ ಜೂನ್ 1ರಂದು ಹೊರಡಿಸಿರುವ ಅಧಿಕೃತ ರಾಜ್ಯಪತ್ರದ ಅಧಿಸೂಚನೆಯ ಪ್ರಕಾರ, ನೀರಿನ ಕೊರತೆಯ ಪ್ರಮಾಣವನ್ನು ಲಭ್ಯವಿರುವ ನೀರಿನ ಪ್ರಮಾಣದ ಮೌಲ್ಯಮಾಪನದ ಆಧಾರದ ಮೇಲೆ ನಿರ್ಧರಿಸಬೇಕು ಎಂದು ತಮಿಳುನಾಡು ಪ್ರತಿಪಾದಿಸಿದೆ. ಆದರೆ, ಈ ವಿಧಾನ ಅನುಸರಿಸದ ಪರಿಣಾಮ ಮೇಲ್ಭಾಗದ ರಾಜ್ಯವಾಗಿರುವ ಕರ್ನಾಟಕಕ್ಕೆ ತನ್ನ ಪಾಲಿಗಿಂತ ಹೆಚ್ಚಿನ ನೀರು ಬಳಸಲು ಅವಕಾಶ ದೊರೆತಿದೆ. ಇದರಿಂದ ತಮಿಳುನಾಡಿನ ಕಾವೇರಿ ಡೆಲ್ಟಾ ಭಾಗದ ರೈತರಿಗೆ ಅನ್ಯಾಯವಾಗಿದೆ ಎಂದು ದೂರಿದೆ.
ಕಾವೇರಿ ಪ್ರಾಧಿಕಾರದ 62ನೇ ಸಭೆ
ಬುಧವಾರ ನವದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ 62ನೇ ಸಭೆ ಮಿಶ್ರ ಮಾದರಿಯಲ್ಲಿ ನಡೆಯಿತು. ಪ್ರಾಧಿಕಾರದ ಅಧ್ಯಕ್ಷರ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡಿರುವ ಐಎಎಸ್ ಅಧಿಕಾರಿ ಪಿಯೂಷ್ ಸಿಂಗ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತಮಿಳುನಾಡು ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಪ್ರಶಾಂತ್ ವದನಾರೆ ಹಾಗೂ ಕಾವೇರಿ ತಾಂತ್ರಿಕ ಕೋಶದ ಅಧ್ಯಕ್ಷ ಸುಬ್ರಮಣಿಯನ್ ರಾಜ್ಯದ ಪರವಾಗಿ ಸಭೆಯಲ್ಲಿ ಭಾಗವಹಿಸಿದ್ದರು.
ಇದೇ ವೇಳೆ, ಕಾವೇರಿ ನೀರಿನ ಕೊರತೆಯಿಂದ ರೈತರು ಮತ್ತು ಬೆಳೆಗಳಿಗೆ ಉಂಟಾಗಿರುವ ಹಾನಿಯನ್ನು ಉಲ್ಲೇಖಿಸಿ, ಹೆಚ್ಚುವರಿ ನೀರು ಬಿಡುಗಡೆಗೆ ಆದೇಶಿಸುವಂತೆ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಉಚ್ಚತಮ ನ್ಯಾಯಾಲಯ ನವೆಂಬರ್ 20ರಂದು ತಿರಸ್ಕರಿಸಿತ್ತು. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಪರೇಶ್ ಕುಮಾರ್ ಸಿಂಗ್ ಅವರನ್ನೊಳಗೊಂಡ ಪೀಠ ಅರ್ಜಿಯನ್ನು ವಜಾಗೊಳಿಸಿತ್ತು.
ತಮಗೆ ಸಲ್ಲಬೇಕಾದ ಕಾವೇರಿ ನೀರಿನ ಪಾಲನ್ನು ತಕ್ಷಣ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಸರ್ಕಾರ ಎರಡು ಅರ್ಜಿಗಳನ್ನು ಸಲ್ಲಿಸಿತ್ತು. ಆದರೆ, ಉಚ್ಚತಮ ನ್ಯಾಯಾಲಯದಿಂದಲೂ ನಿರೀಕ್ಷಿತ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ ಇದೀಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಭಿನ್ನಾಭಿಪ್ರಾಯದ ಟಿಪ್ಪಣಿ ಸಲ್ಲಿಸುವ ಮೂಲಕ ಕರ್ನಾಟಕದ ನೀರು ಬಳಕೆ ಕುರಿತು ಮತ್ತೊಮ್ಮೆ ಆಕ್ಷೇಪ ವ್ಯಕ್ತಪಡಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R