ಪ್ರಜಾಪ್ರಭುತ್ವದ ಮೌಲ್ಯ, ರಾಷ್ಟ್ರೀಯ ಏಕತೆ ಮತ್ತು ಸಾಮೂಹಿಕ ಆಶಯಗಳಿಗೆ ಸಂವಿಧಾನವೇ ಆಧಾರ: ಓಂ ಬಿರ್ಲಾ
ನವದೆಹಲಿ, 26 ನವೆಂಬರ್ (ಹಿ.ಸ.): ಭಾರತದ ಸಂವಿಧಾನ ಕೇವಲ ದೇಶದ ಸರ್ವೋಚ್ಚ ಕಾನೂನು ಮಾತ್ರವಲ್ಲ, ಪ್ರಜಾಪ್ರಭುತ್ವದ ಮೌಲ್ಯಗಳು, ರಾಷ್ಟ್ರೀಯ ಏಕತೆ ಮತ್ತು ಸಾಮೂಹಿಕ ಆಶಯಗಳಿಗೆ ಭದ್ರ ಬುನಾದಿಯಾಗಿದೆ. ಅಸಾಧಾರಣ ವೈವಿಧ್ಯತೆಯ ನಡುವೆಯೂ ದೇಶದ ಏಕತೆಯನ್ನು ಕಾಪಾಡಿಕೊಂಡು, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ
लोक सभा अध्यक्ष ओम बिरला गुरुवार को संविधान दिवस के अवसर पर नई दिल्ली स्थित संविधान सदन के ऐतिहासिक केंद्रीय कक्ष में युवा प्रतिभागियों को संबोधित करते हुए।


ನವದೆಹಲಿ, 26 ನವೆಂಬರ್ (ಹಿ.ಸ.):

ಭಾರತದ ಸಂವಿಧಾನ ಕೇವಲ ದೇಶದ ಸರ್ವೋಚ್ಚ ಕಾನೂನು ಮಾತ್ರವಲ್ಲ, ಪ್ರಜಾಪ್ರಭುತ್ವದ ಮೌಲ್ಯಗಳು, ರಾಷ್ಟ್ರೀಯ ಏಕತೆ ಮತ್ತು ಸಾಮೂಹಿಕ ಆಶಯಗಳಿಗೆ ಭದ್ರ ಬುನಾದಿಯಾಗಿದೆ. ಅಸಾಧಾರಣ ವೈವಿಧ್ಯತೆಯ ನಡುವೆಯೂ ದೇಶದ ಏಕತೆಯನ್ನು ಕಾಪಾಡಿಕೊಂಡು, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವನ್ನು ನಿರಂತರವಾಗಿ ಮುನ್ನಡೆಸಲು ಸಂವಿಧಾನ ಮಾರ್ಗದರ್ಶನ ನೀಡಿದೆ ಎಂದು ಲೋಕಸಭೆಯ ಸಭಾಧ್ಯಕ್ಷ ಓಂ ಬಿರ್ಲಾ ಹೇಳಿದರು.

ಸಂವಿಧಾನ ದಿನದ ಅಂಗವಾಗಿ ಗುರುವಾರ ಸಂವಿಧಾನ ಸದನದ ಐತಿಹಾಸಿಕ ಕೇಂದ್ರ ಸಭಾಂಗಣದಲ್ಲಿ ಯುವ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಯುವಜನರು ಸಂವಿಧಾನದ ಆದರ್ಶಗಳು ಮತ್ತು ಮೌಲ್ಯಗಳನ್ನು ಕೇವಲ ಓದುವುದಕ್ಕೆ ಸೀಮಿತಗೊಳಿಸದೆ, ತಮ್ಮ ಆಲೋಚನೆ, ನಡವಳಿಕೆ ಹಾಗೂ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪ್ರಜಾಪ್ರಭುತ್ವದ ಬಲ ಕೇವಲ ನಾಗರಿಕರಿಗೆ ದೊರೆತಿರುವ ಹಕ್ಕುಗಳ ಮೇಲೆ ಅವಲಂಬಿತವಾಗಿಲ್ಲ. ಸಮಾಜ ಮತ್ತು ರಾಷ್ಟ್ರದ ಬಗೆಗಿನ ಕರ್ತವ್ಯ ಹಾಗೂ ಹೊಣೆಗಾರಿಕೆಗಳನ್ನು ನಿರ್ವಹಿಸುವ ಇಚ್ಛಾಶಕ್ತಿಯೂ ಅಷ್ಟೇ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಸಂವಿಧಾನ ರಚನಾಕಾರರು ಸುಭದ್ರ ಸಂಸದೀಯ ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದ್ದಾರೆ. ಶಾಂತಿ, ಸಮೃದ್ಧಿ ಮತ್ತು ಪ್ರಗತಿಯತ್ತ ಭಾರತದ ಪಯಣಕ್ಕೆ ಈ ವ್ಯವಸ್ಥೆ ಮಾರ್ಗದರ್ಶನ ನೀಡುತ್ತಿದೆ. ಭಾಷೆಗಳು, ಉಪಭಾಷೆಗಳು, ಧರ್ಮಗಳು, ಸಂಪ್ರದಾಯಗಳು ಮತ್ತು ಸಂಸ್ಕೃತಿಗಳ ಅಪಾರ ವೈವಿಧ್ಯತೆಯನ್ನು ಗೌರವಿಸುವ ಮೂಲಕ ದೇಶದ ಏಕತೆ ಹಾಗೂ ಸಮಗ್ರತೆಯನ್ನು ರಕ್ಷಿಸಲು ಸಂವಿಧಾನ ಶಾಶ್ವತ ಚೌಕಟ್ಟನ್ನು ಒದಗಿಸಿದೆ ಎಂದರು.

ಸ್ವಾತಂತ್ರ್ಯ ಹೋರಾಟದ ಮಹತ್ವದ ಕ್ಷಣಗಳಿಗೆ ಸಾಕ್ಷಿಯಾದ ಸಂವಿಧಾನ ಸದನ

ಸಂವಿಧಾನ ಸದನದ ಐತಿಹಾಸಿಕ ಪರಂಪರೆಯನ್ನು ಸ್ಮರಿಸಿದ ಓಂ ಬಿರ್ಲಾ, ಈ ಕಟ್ಟಡವು ಭಾರತದ ಸ್ವಾತಂತ್ರ್ಯ ಹೋರಾಟದ ನಿರ್ಣಾಯಕ ಕ್ಷಣಗಳಿಗೆ ಹಾಗೂ ಸ್ವಾತಂತ್ರ್ಯಾನಂತರದ ಮಹತ್ವದ ಚರ್ಚೆಗಳಿಗೆ ಸಾಕ್ಷಿಯಾಗಿದೆ. ಸ್ವತಂತ್ರ ಭಾರತದ ದಿಕ್ಕು ಮತ್ತು ಭವಿಷ್ಯವನ್ನು ನಿರ್ಧರಿಸಿದ ಅನೇಕ ಮಹತ್ವದ ವಿಚಾರ ವಿನಿಮಯಗಳು ಇಲ್ಲಿ ನಡೆದಿವೆ. ಭಾರತೀಯ ಗಣರಾಜ್ಯದ ನಿರ್ಮಾಣಕ್ಕೆ ಕಾರಣವಾದ ತ್ಯಾಗ, ದೃಢನಂಬಿಕೆ ಮತ್ತು ದೂರದೃಷ್ಟಿಯ ಆಶಯಗಳಿಗೆ ಈ ಆವರಣ ಸಾಕ್ಷಿಯಾಗಿದೆ ಎಂದು ಹೇಳಿದರು.

ಸಂವಿಧಾನದ ಸಾರ್ವತ್ರಿಕ ಆದರ್ಶಗಳು ಮತ್ತು ಪ್ರಜಾಪ್ರಭುತ್ವದ ತತ್ವಗಳು ಭಾರತಕ್ಕೆ ಮಾತ್ರವಲ್ಲದೆ ಜಗತ್ತಿನ ಇತರ ಪ್ರಜಾಪ್ರಭುತ್ವ ರಾಷ್ಟ್ರಗಳಿಗೂ ಮಾರ್ಗದರ್ಶಿಯಾಗಿವೆ ಎಂದು ತಿಳಿಸಿದರು.

ಸಂವಿಧಾನ ಸಭೆಯ ಕಾರ್ಯಕಲಾಪಗಳನ್ನು ಉಲ್ಲೇಖಿಸಿದ ಅವರು, ಸಂವಿಧಾನ ರಚನೆಗಾಗಿ ಸಭೆಯ ಸದಸ್ಯರು ಎರಡು ವರ್ಷ ಹನ್ನೊಂದು ತಿಂಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ದರು. ವಿವಿಧ ದೃಷ್ಟಿಕೋನಗಳಿಗೆ ಅವಕಾಶ ನೀಡಲಾಗಿತ್ತು. ಸಂಕೀರ್ಣ ವಿಷಯಗಳ ಕುರಿತು ಚರ್ಚಿಸಿ, ಸಂವಾದ, ತಾರ್ಕಿಕ ವಾದ ಮತ್ತು ಪರಸ್ಪರ ತಿಳಿವಳಿಕೆಯ ಮೂಲಕ ಪರಿಹಾರಗಳನ್ನು ಕಂಡುಕೊಳ್ಳಲಾಗಿತ್ತು.

ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ಸದಸ್ಯರು ಒಮ್ಮತ ಮೂಡಿಸಲು ಮತ್ತು ರಾಷ್ಟ್ರಹಿತಕ್ಕೆ ಮೊದಲ ಆದ್ಯತೆ ನೀಡಲು ತೋರಿದ ಮನೋಭಾವ ಅನುಕರಣೀಯವಾಗಿದೆ. ಸಂವಿಧಾನ ಸಭೆಯ ಈ ಪಯಣವು ಸಂವಾದ, ಚರ್ಚೆ ಮತ್ತು ಒಮ್ಮತದ ಮೂಲಕ ನಿರ್ಧಾರ ಕೈಗೊಳ್ಳುವ ಭಾರತದ ಪ್ರಜಾಪ್ರಭುತ್ವ ಪರಂಪರೆಗೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದರು.

ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಸಂವಿಧಾನದ ಮೂಲತತ್ವಗಳು

ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೂಲತತ್ವಗಳನ್ನು ಸಂವಿಧಾನ ಒಳಗೊಂಡಿದೆ. ಈ ತತ್ವಗಳು ಎಲ್ಲ ನಾಗರಿಕರಿಗೆ ಸಾಮಾನ್ಯ ಸಾಂವಿಧಾನಿಕ ಗುರುತನ್ನು ನೀಡಿದ್ದು, ರಾಷ್ಟ್ರದ ಭವಿಷ್ಯದ ಬಗ್ಗೆ ಸಾಮೂಹಿಕ ದೃಷ್ಟಿಕೋನವನ್ನು ರೂಪಿಸಿವೆ. ಭಾರತದ ಸಂಸದೀಯ ಪ್ರಜಾಪ್ರಭುತ್ವದ ಶಕ್ತಿ ಮತ್ತು ವಿಶ್ವಾಸಾರ್ಹತೆ ಈ ಸಾಂವಿಧಾನಿಕ ಆದರ್ಶಗಳು ಹಾಗೂ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ಜನರ ವಿಶ್ವಾಸದಿಂದ ಬರುತ್ತದೆ ಎಂದು ಹೇಳಿದರು.

ಆಡಳಿತದ ಮೂರು ಅಂಗಗಳ ಪಾತ್ರವನ್ನು ವಿವರಿಸಿದ ಅವರು, ಶಾಸಕಾಂಗವು ಕಾನೂನು ಮತ್ತು ನೀತಿಗಳ ಮೂಲಕ ಜನರ ಆಶಯಗಳನ್ನು ವ್ಯಕ್ತಪಡಿಸುತ್ತದೆ. ಕಾರ್ಯಾಂಗವು ಅವುಗಳನ್ನು ಜಾರಿಗೊಳಿಸುತ್ತದೆ. ನ್ಯಾಯಾಂಗವು ಸಂವಿಧಾನವನ್ನು ರಕ್ಷಿಸುವುದರ ಜೊತೆಗೆ ನಾಗರಿಕರ ಹಕ್ಕುಗಳನ್ನು ಕಾಪಾಡಿ ನ್ಯಾಯ ಒದಗಿಸುತ್ತದೆ. ಈ ಮೂರೂ ಸಂಸ್ಥೆಗಳು ತಮ್ಮ ತಮ್ಮ ಸಾಂವಿಧಾನಿಕ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯನ್ನು ಬಲಪಡಿಸುತ್ತವೆ ಎಂದು ತಿಳಿಸಿದರು.

ಸಂವಿಧಾನ ರಚನಾಕಾರರು ದೂರದೃಷ್ಟಿಯಿಂದ ರೂಪಿಸಿರುವ ವ್ಯವಸ್ಥೆಯು ಅಂದಿನ ಸವಾಲುಗಳನ್ನು ಮೀರಿ, ಬದಲಾಗುತ್ತಿರುವ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳಲ್ಲೂ ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುವ ಸಾಮರ್ಥ್ಯ ಹೊಂದಿದೆ. ಸಂಸತ್ತು ಮತ್ತು ಇತರ ಪ್ರಜಾಪ್ರಭುತ್ವ ಸಂಸ್ಥೆಗಳು ಜನರ ಆಶಯಗಳು ಹಾಗೂ ವಿಭಿನ್ನ ವಿಚಾರಗಳನ್ನು ವ್ಯಕ್ತಪಡಿಸುವ ಮತ್ತು ಅವುಗಳನ್ನು ಅರ್ಥಪೂರ್ಣ ಫಲಿತಾಂಶಗಳಾಗಿ ಪರಿವರ್ತಿಸುವ ಜೀವಂತ ವೇದಿಕೆಗಳಾಗಿ ಕಾರ್ಯನಿರ್ವಹಿಸಬೇಕು ಎಂದರು.

ವಿಕಸಿತ ಭಾರತದ ನಿರ್ಮಾಣದಲ್ಲಿ ಯುವಜನರ ಪಾತ್ರ ಮಹತ್ವದ್ದು

ಭಾರತದ ಯುವಜನರು ದೇಶದ ಅತಿದೊಡ್ಡ ಶಕ್ತಿಯಾಗಿದ್ದಾರೆ. ಅವರಲ್ಲಿ ಪ್ರತಿಭೆ, ಉದ್ಯಮಶೀಲತೆ, ನಾವೀನ್ಯತೆ ಮತ್ತು ಸೃಜನಶೀಲತೆಯ ಅಪಾರ ಸಾಮರ್ಥ್ಯವಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ಜ್ಞಾನಾಧಾರಿತ ಹೊಸ ಕ್ಷೇತ್ರಗಳಲ್ಲಿ ಯುವ ಭಾರತೀಯರು ಸಾಧಿಸುತ್ತಿರುವ ಯಶಸ್ಸು ದೇಶದ ಉಜ್ವಲ ಭವಿಷ್ಯದ ಸೂಚನೆಯಾಗಿದೆ. ಯುವಜನರ ಶಕ್ತಿ, ದೂರದೃಷ್ಟಿ ಮತ್ತು ದೃಢಸಂಕಲ್ಪ ವಿಕಸಿತ ಭಾರತದ ಗುರಿ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ಓಂ ಬಿರ್ಲಾ ಹೇಳಿದರು.

ಯುವಜನರು ತಮ್ಮ ಸಾಂವಿಧಾನಿಕ ಹಕ್ಕುಗಳು ಮತ್ತು ಅವಕಾಶಗಳ ಬಗ್ಗೆ ಜಾಗೃತರಾಗಿರುವುದರ ಜೊತೆಗೆ ಸಮಾಜ ಹಾಗೂ ರಾಷ್ಟ್ರದ ಬಗೆಗಿನ ತಮ್ಮ ಕರ್ತವ್ಯಗಳನ್ನೂ ಅರ್ಥಮಾಡಿಕೊಳ್ಳಬೇಕು. ಸಾಂವಿಧಾನಿಕ ಅರಿವು, ಕಾನೂನಿನ ತಿಳಿವಳಿಕೆ ಮತ್ತು ಜನಸೇವೆಯ ಬಗೆಗಿನ ಬದ್ಧತೆಯ ಮೂಲಕ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಬಲಪಡಿಸಲು ಯುವಜನರು ಮಹತ್ವದ ಕೊಡುಗೆ ನೀಡಬಹುದು ಎಂದು ತಿಳಿಸಿದರು.

ಸಂವಿಧಾನ ಸದನದಲ್ಲಿ ಪಡೆದ ಅನುಭವ ಮತ್ತು ಕಲಿಕೆಯನ್ನು ತಮ್ಮ ರಾಜ್ಯಗಳು, ಶಿಕ್ಷಣ ಸಂಸ್ಥೆಗಳು, ಕಾರ್ಯಸ್ಥಳಗಳು ಹಾಗೂ ಸಮುದಾಯಗಳಿಗೂ ಕೊಂಡೊಯ್ಯಬೇಕು. ಯುವಜನರು ಸಂವಿಧಾನದ ರಾಯಭಾರಿಗಳಾಗಿ ಇತರ ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ ಸಾಂವಿಧಾನಿಕ ಆದರ್ಶಗಳ ಮಹತ್ವವನ್ನು ತಿಳಿಸುವುದರ ಜೊತೆಗೆ ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಅರ್ಥಪೂರ್ಣವಾಗಿ ಪಾಲ್ಗೊಳ್ಳಲು ಪ್ರೇರಣೆ ನೀಡಬೇಕು ಎಂದು ಕರೆ ನೀಡಿದರು.

ಅಭಿವೃದ್ಧಿ, ನ್ಯಾಯ ಮತ್ತು ಅವಕಾಶಗಳ ಪ್ರಯೋಜನಗಳು ಸಮಾಜದ ಪ್ರತಿಯೊಬ್ಬರಿಗೂ, ವಿಶೇಷವಾಗಿ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ ಎಂದರು.

ದೇಶಭಕ್ತಿ, ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಸಾಂವಿಧಾನಿಕ ಮೌಲ್ಯಗಳ ಬಗೆಗಿನ ಅಚಲ ಬದ್ಧತೆಯನ್ನು ಜೀವನದ ಮಾರ್ಗದರ್ಶಿ ತತ್ವಗಳನ್ನಾಗಿ ಮಾಡಿಕೊಳ್ಳುವಂತೆ ಯುವಜನರಿಗೆ ಓಂ ಬಿರ್ಲಾ ಕರೆ ನೀಡಿದರು.

ಸಂವಿಧಾನದ ಪದಗಳು ಮತ್ತು ಅದರ ಮೂಲ ಆಶಯಕ್ಕೆ ಅನುಗುಣವಾಗಿ ಅದನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ನಾಗರಿಕರ ಸಾಮೂಹಿಕ ಬದ್ಧತೆಯೇ ಬಲಿಷ್ಠ, ಎಲ್ಲರನ್ನೂ ಒಳಗೊಳ್ಳುವ, ಪ್ರಗತಿಪರ ಹಾಗೂ ವಿಕಸಿತ ಭಾರತದ ನಿರ್ಮಾಣಕ್ಕೆ ಭದ್ರ ಬುನಾದಿಯಾಗಲಿದೆ ಎಂದು ಅವರು ಹೇಳಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande