
ನವದೆಹಲಿ, 20 ನವೆಂಬರ್ (ಹಿ.ಸ.):
ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳ ಕಾರ್ಯಾಚರಣೆಗೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿದೆ. ಬೈಕ್ ಟ್ಯಾಕ್ಸಿ ಸಂಚಾರಕ್ಕೆ ಅನುಮತಿ ನೀಡಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹಾಗೂ ಆಟೋ ಮತ್ತು ಟ್ಯಾಕ್ಸಿ ಸಂಘಟನೆಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ಮಹತ್ವದ ತೀರ್ಪು ಪ್ರಕಟಿಸಿದೆ. ಇದರಿಂದ ಓಲಾ, ಉಬರ್, ರ್ಯಾಪಿಡೋ ಸೇರಿದಂತೆ ಬೈಕ್ ಟ್ಯಾಕ್ಸಿ ಸೇವಾ ಸಂಸ್ಥೆಗಳು ಹಾಗೂ ಈ ಸೇವೆಯನ್ನು ಅವಲಂಬಿಸಿರುವ ಲಕ್ಷಾಂತರ ಪ್ರಯಾಣಿಕರಿಗೆ ನಿರಾಳತೆ ಸಿಕ್ಕಿದೆ. ಮತ್ತೊಂದೆಡೆ, ರಾಜ್ಯ ಸರ್ಕಾರ ಮತ್ತು ಆಟೋ-ಟ್ಯಾಕ್ಸಿ ಸಂಘಟನೆಗಳಿಗೆ ಹಿನ್ನಡೆಯಾಗಿದೆ.
ಕೈಗೆಟಕುವ ಸಾರಿಗೆಯ ಅಗತ್ಯ ಒತ್ತಿಹೇಳಿದ ನ್ಯಾಯಮೂರ್ತಿಗಳು
ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರು ತಮ್ಮ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಬೈಕ್ ಟ್ಯಾಕ್ಸಿ ಬಳಸುವ ಯುವತಿಯರೊಂದಿಗಿನ ಸಂಭಾಷಣೆಯನ್ನು ಪ್ರಸ್ತಾಪಿಸಿದರು.
'ನೀವು ಕಚೇರಿಗೆ ಹೇಗೆ ಬರುತ್ತೀರಿ?' ಎಂದು ಕೇಳಿದಾಗ, ಕ್ಯಾಬ್ ಬಾಡಿಗೆ ಭರಿಸಲು ಸಾಧ್ಯವಾಗದ ಕಾರಣ ಬೈಕ್ ಟ್ಯಾಕ್ಸಿ ಬಳಸುವುದಾಗಿ ಯುವತಿಯರು ತಿಳಿಸಿದ್ದರು. ಆಟೋದಲ್ಲಿ ಏಕೆ ಬರುವುದಿಲ್ಲ ಎಂಬ ಪ್ರಶ್ನೆಗೆ, ಆಟೋ ದರ ಐದು ಪಟ್ಟು ಹೆಚ್ಚಿರುತ್ತದೆ ಎಂದು ಉತ್ತರಿಸಿದ್ದರು ಎಂದು ನ್ಯಾಯಮೂರ್ತಿಗಳು ಸ್ಮರಿಸಿದರು.
ಈ ಪ್ರಸಂಗದ ಮೂಲಕ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಸಾರಿಗೆ ಸೇವೆ ಲಭ್ಯವಾಗುವುದರ ಮಹತ್ವವನ್ನು ನ್ಯಾಯಪೀಠ ಒತ್ತಿಹೇಳಿತು.
ಪ್ರಕರಣದ ಹಿನ್ನೆಲೆ
ಬೈಕ್ ಟ್ಯಾಕ್ಸಿಗಳಿಗೆ ಸೂಕ್ತ ನಿಯಮಾವಳಿ ರೂಪಿಸುವವರೆಗೆ ಅವುಗಳ ಸೇವೆ ಸ್ಥಗಿತಗೊಳಿಸುವಂತೆ ಈ ಹಿಂದೆ ಕರ್ನಾಟಕ ಉಚ್ಚ ನ್ಯಾಯಾಲಯದ ಏಕಸದಸ್ಯ ಪೀಠ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಓಲಾ, ಉಬರ್, ರ್ಯಾಪಿಡೋ, ಬೈಕ್ ಮಾಲೀಕರು ಹಾಗೂ ಬೈಕ್ ಟ್ಯಾಕ್ಸಿ ಕಲ್ಯಾಣ ಸಂಘ ಮೇಲ್ಮನವಿ ಸಲ್ಲಿಸಿದ್ದವು.
ಪ್ರಕರಣದ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರನ್ನೊಳಗೊಂಡ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ 2026ರ ಜನವರಿ 23ರಂದು ಬೈಕ್ ಟ್ಯಾಕ್ಸಿಗಳ ಮೇಲಿನ ನಿಷೇಧ ತೆರವುಗೊಳಿಸಿತ್ತು.
ದ್ವಿಚಕ್ರ ವಾಹನಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸಿ ಒಪ್ಪಂದದ ಆಧಾರದಲ್ಲಿ ಪ್ರಯಾಣಿಕರನ್ನು ಸಾಗಿಸುವ ವಾಹನಗಳಾಗಿ ಬಳಸಬಹುದು. ಸರ್ಕಾರ ನಿಯಂತ್ರಣ ಷರತ್ತುಗಳನ್ನು ವಿಧಿಸಬಹುದೇ ಹೊರತು, ಅವು ದ್ವಿಚಕ್ರ ವಾಹನಗಳೆಂಬ ಕಾರಣಕ್ಕೆ ಪರವಾನಗಿ ನಿರಾಕರಿಸುವಂತಿಲ್ಲ ಎಂದು ಉಚ್ಚ ನ್ಯಾಯಾಲಯ ಸ್ಪಷ್ಟಪಡಿಸಿತ್ತು.
ಸುಪ್ರೀಂಕೋರ್ಟ್ನಲ್ಲಿ ನಡೆದ ವಾದ-ಪ್ರತಿವಾದ
ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಕರ್ನಾಟಕ ಸರ್ಕಾರ, ಪ್ರಯಾಣಿಕರ ಸುರಕ್ಷತೆ, ವಿಮಾ ಸೌಲಭ್ಯದ ಕೊರತೆ ಹಾಗೂ 2019ರ ತಜ್ಞರ ಸಮಿತಿಯ ವರದಿಯನ್ನು ಮುಂದಿಟ್ಟುಕೊಂಡು ವಾದಿಸಿತ್ತು.
ರಾಜ್ಯದ ಇತರ ಪ್ರದೇಶಗಳಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡುವ ಕುರಿತು ಪರಿಶೀಲಿಸಬಹುದಾದರೂ, ಬೆಂಗಳೂರಿನಲ್ಲಿನ ಸಂಚಾರ ದಟ್ಟಣೆಯ ಹಿನ್ನೆಲೆಯಲ್ಲಿ ಈ ಸೇವೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ಪ್ರತಿಪಾದಿಸಿತ್ತು. ಐದು ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳೂ ಸರ್ಕಾರದ ನಿಲುವನ್ನು ಬೆಂಬಲಿಸಿದ್ದವು.
ಇದಕ್ಕೆ ಪ್ರತಿಯಾಗಿ, ರಾಜ್ಯದಲ್ಲಿ ಸುಮಾರು 4.5 ಲಕ್ಷ ಪ್ರಯಾಣಿಕರು ಬೈಕ್ ಟ್ಯಾಕ್ಸಿ ಸೇವೆ ಬಳಸುತ್ತಿದ್ದಾರೆ ಎಂದು ಸೇವಾ ಸಂಸ್ಥೆಗಳ ಪರ ವಕೀಲರು ವಾದಿಸಿದ್ದರು. 2004 ಮತ್ತು 2024ರ ಕೇಂದ್ರ ಸರ್ಕಾರದ ಅಧಿಸೂಚನೆಗಳ ಅನ್ವಯ ದ್ವಿಚಕ್ರ ವಾಹನಗಳನ್ನು ಟ್ಯಾಕ್ಸಿಗಳಾಗಿ ಬಳಸಲು ಅವಕಾಶವಿದೆ ಎಂದು ಕೇಂದ್ರ ಸರ್ಕಾರವೂ ನ್ಯಾಯಪೀಠಕ್ಕೆ ತಿಳಿಸಿತ್ತು.
ಕಾರುಗಳಿಗೆ ಹೋಲಿಸಿದರೆ ಬೈಕ್ಗಳು ರಸ್ತೆಯಲ್ಲಿ ಕಡಿಮೆ ಜಾಗ ಆಕ್ರಮಿಸುವುದರ ಜತೆಗೆ ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಸೇವೆ ಒದಗಿಸುತ್ತವೆ ಎಂಬ ಅಂಶವೂ ವಿಚಾರಣೆಯಲ್ಲಿ ಪ್ರಸ್ತಾಪವಾಗಿತ್ತು. ಅಂತಿಮವಾಗಿ ರಾಜ್ಯ ಸರ್ಕಾರ ಮತ್ತು ಆಟೋ ಸಂಘಟನೆಗಳ ಮೇಲ್ಮನವಿ ಅರ್ಜಿಗಳನ್ನು ನ್ಯಾಯಪೀಠ ವಜಾಗೊಳಿಸಿದೆ.
ವಾದ ಮಂಡಿಸಿದ ವಕೀಲರು
ಪ್ರಕರಣದಲ್ಲಿ ಕರ್ನಾಟಕ ಸರ್ಕಾರದ ಪರ ಹಿರಿಯ ವಕೀಲರಾದ ವಿಕಾಸ್ ಸಿಂಗ್ ಮತ್ತು ಪರಾಗ್ ತ್ರಿಪಾಠಿ ವಾದ ಮಂಡಿಸಿದ್ದರು. ಆಟೋ ಸಂಘಟನೆಗಳು ಹಾಗೂ ಚಾಲಕರ ಪರವಾಗಿ ವಕೀಲ ಕೆ. ಶಿವ ಪ್ರತಿನಿಧಿಸಿದ್ದರು.
ಉಬರ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಹಾಗೂ ಟ್ರೈಲೀಗಲ್ ಸಂಸ್ಥೆಯ ಅನುಜ್ ಬೆರ್ರಿ, ಅನುಷಾ ರಮೇಶ್, ಉತ್ಕರ್ಷ್ ಶ್ರೀವಾಸ್ತವ ಮತ್ತು ಅಥರ್ವ ಕೊಪ್ಪಳ ಅವರ ತಂಡ ವಾದ ಮಂಡಿಸಿತ್ತು. ಓಲಾ ಪರವಾಗಿ ಲುಥ್ರಾ ಮತ್ತು ಲುಥ್ರಾ ಸಂಸ್ಥೆಯ ಪಾಲುದಾರ ಫೈಸಲ್ ನೇತೃತ್ವದ ವಕೀಲರ ತಂಡ ವಾದಿಸಿತ್ತು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R