
ನವದೆಹಲಿ, 20 ನವೆಂಬರ್ (ಹಿ.ಸ.):
ಮ್ಯಾನ್ಮಾರ್ನಿಂದ ಸ್ಥಳಾಂತರಗೊಂಡಿರುವ ರೋಹಿಂಗ್ಯಾ ನಿರಾಶ್ರಿತರನ್ನು ಸುರಕ್ಷಿತವಾಗಿ, ತ್ವರಿತವಾಗಿ ಮತ್ತು ಶಾಶ್ವತವಾಗಿ ಅವರ ತಾಯ್ನಾಡಿಗೆ ಮರಳಿಸುವುದನ್ನು ಭಾರತ ಮತ್ತೊಮ್ಮೆ ಬೆಂಬಲಿಸಿದೆ.
ರೋಹಿಂಗ್ಯಾ ಜನಾಂಗೀಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ನ್ಯಾಯಾಲಯ ನವೆಂಬರ್ 19ರಂದು ನೀಡಿದ ತೀರ್ಪಿನ ಕುರಿತು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯಿಸಿದ್ದಾರೆ.
ತೀರ್ಪಿನ ಕುರಿತು ನೇರ ಅಭಿಪ್ರಾಯ ವ್ಯಕ್ತಪಡಿಸದ ಅವರು, ಮ್ಯಾನ್ಮಾರ್ನ ರಖೈನ್ ರಾಜ್ಯದಿಂದ ಸ್ಥಳಾಂತರಗೊಂಡಿರುವ ರೋಹಿಂಗ್ಯಾಗಳ ಸುರಕ್ಷಿತ, ತ್ವರಿತ ಮತ್ತು ಶಾಶ್ವತ ವಾಪಸಾತಿಗೆ ಭಾರತ ನಿರಂತರವಾಗಿ ಬೆಂಬಲ ನೀಡುತ್ತಿದೆ ಎಂದು ತಿಳಿಸಿದ್ದಾರೆ.
ಈ ಉದ್ದೇಶಕ್ಕಾಗಿ ಭಾರತ ಈ ಹಿಂದೆ 'ಆಪರೇಷನ್ ಇನ್ಸಾನಿಯತ್' ಅಡಿಯಲ್ಲಿ ಐದು ಹಂತಗಳಲ್ಲಿ ಬಾಂಗ್ಲಾದೇಶದಲ್ಲಿರುವ ರೋಹಿಂಗ್ಯಾ ನಿರಾಶ್ರಿತರ ಶಿಬಿರಗಳಿಗೆ ಪರಿಹಾರ ಸಾಮಗ್ರಿಗಳನ್ನು ಒದಗಿಸಿತ್ತು. ಅಲ್ಲದೆ, ಮ್ಯಾನ್ಮಾರ್ನ ರಖೈನ್ ರಾಜ್ಯ ಅಭಿವೃದ್ಧಿ ಕಾರ್ಯಕ್ರಮಕ್ಕೂ ಭಾರತ ಬೆಂಬಲ ನೀಡಿದೆ ಎಂದು ಅವರು ವಿವರಿಸಿದ್ದಾರೆ.
2017ರಲ್ಲಿ ರಖೈನ್ ರಾಜ್ಯದಲ್ಲಿ ನಡೆದ ಸೇನಾ ಕಾರ್ಯಾಚರಣೆಗಳ ಸಂದರ್ಭದಲ್ಲಿ ರೋಹಿಂಗ್ಯಾ ಜನಾಂಗದವರ ನರಮೇಧ ನಡೆದಿರುವುದಕ್ಕೆ ಮ್ಯಾನ್ಮಾರ್ ಹೊಣೆಗಾರ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ ನವೆಂಬರ್ 19ರಂದು ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಭಾರತದ ನಿಲುವು ಮಹತ್ವ ಪಡೆದಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.