ತ್ಯಾಜ್ಯ ನಿರ್ವಹಣೆ ಬಲವರ್ಧನೆಗೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ–ಸಾಹಸ್ ಸಂಸ್ಥೆ ಒಪ್ಪಂದ
ಬೆಂಗಳೂರು, 20 ನವೆಂಬರ್ (ಹಿ.ಸ.): ಬೆಂಗಳೂರನ್ನು ಸ್ವಚ್ಛ, ಸುಸ್ಥಿರ ಹಾಗೂ ಸಂಪನ್ಮೂಲ-ಸಮರ್ಥ ನಗರವನ್ನಾಗಿ ರೂಪಿಸುವ ಉದ್ದೇಶದಿಂದ ಬೆಂಗಳೂರು ದಕ್ಷಿಣ ನಗರ ಪಾಲಿಕೆಯು ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಬಲಪಡಿಸಲು ಮುಂದಾಗಿದೆ. ಈ ಸಂಬಂಧ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಮತ್ತು ಲಾಭರಹಿತ ಸ್ವಯಂಸೇ
bengaluru-saahas-waste-pact


ಬೆಂಗಳೂರು, 20 ನವೆಂಬರ್ (ಹಿ.ಸ.):

ಬೆಂಗಳೂರನ್ನು ಸ್ವಚ್ಛ, ಸುಸ್ಥಿರ ಹಾಗೂ ಸಂಪನ್ಮೂಲ-ಸಮರ್ಥ ನಗರವನ್ನಾಗಿ ರೂಪಿಸುವ ಉದ್ದೇಶದಿಂದ ಬೆಂಗಳೂರು ದಕ್ಷಿಣ ನಗರ ಪಾಲಿಕೆಯು ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಬಲಪಡಿಸಲು ಮುಂದಾಗಿದೆ.

ಈ ಸಂಬಂಧ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಮತ್ತು ಲಾಭರಹಿತ ಸ್ವಯಂಸೇವಾ ಸಂಸ್ಥೆ ಸಾಹಸ್ ನಡುವೆ ಗುರುವಾರ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಮತ್ತು ಸಾಹಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರ್ಚನಾ ತ್ರಿಪಾಠಿ ಒಪ್ಪಂದಕ್ಕೆ ಸಹಿ ಹಾಕಿದರು.

ಈ ಸಹಭಾಗಿತ್ವದ ಮೂಲಕ ನಗರದ ತ್ಯಾಜ್ಯ ನಿರ್ವಹಣಾ ಸಾಮರ್ಥ್ಯ ಹೆಚ್ಚಿಸುವುದು, ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಪದ್ಧತಿಗಳನ್ನು ಉತ್ತೇಜಿಸುವುದು ಹಾಗೂ ಸೇವಾ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶ ಹೊಂದಲಾಗಿದೆ ಎಂದು ಆಯುಕ್ತ ಕೆ.ಎನ್. ರಮೇಶ್ ತಿಳಿಸಿದರು.

ತ್ಯಾಜ್ಯ ನಿರ್ವಹಣೆಗೆ ತಾಂತ್ರಿಕ ನೆರವು

ಒಪ್ಪಂದದ ಅನ್ವಯ ಸಾಹಸ್ ಸಂಸ್ಥೆಯು ಬೆಂಗಳೂರು ದಕ್ಷಿಣ ನಗರ ಪಾಲಿಕೆಗೆ ತಾಂತ್ರಿಕ ಸಲಹೆ ಮತ್ತು ಸಹಾಯಕ ಪಾಲುದಾರನಾಗಿ ಕಾರ್ಯನಿರ್ವಹಿಸಲಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ, ಗುತ್ತಿಗೆದಾರರು ಹಾಗೂ ಇತರ ಪಾಲುದಾರರ ನಡುವೆ ಸಮನ್ವಯ ಸಾಧಿಸಿ ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣೆ ವ್ಯವಸ್ಥೆಯನ್ನು ಸುಧಾರಿಸಲು ನೆರವು ನೀಡಲಿದೆ.

ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳ ತ್ಯಾಜ್ಯ ನಿರ್ವಹಣಾ ಸೂಕ್ಷ್ಮ ಯೋಜನೆಗಳನ್ನು ಪರಿಶೀಲಿಸಿ ಬಲಪಡಿಸುವುದರ ಜತೆಗೆ, ಅಧಿಕಾರಿಗಳು, ಗುತ್ತಿಗೆದಾರರು, ಪೌರಕಾರ್ಮಿಕರು ಮತ್ತು ಕ್ಷೇತ್ರಮಟ್ಟದ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತದೆ.

ತ್ಯಾಜ್ಯ ನಿರ್ವಹಣೆಯ ಕಾರ್ಯಾಚರಣಾ ಮಾರ್ಗಸೂಚಿಗಳು ಹಾಗೂ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳ ರೂಪಿಸುವಿಕೆಗೂ ತಾಂತ್ರಿಕ ಬೆಂಬಲ ಒದಗಿಸಲಾಗುತ್ತದೆ.

ತಂತ್ರಜ್ಞಾನ ಬಳಕೆ ಮತ್ತು ನಾಗರಿಕರ ಸಹಭಾಗಿತ್ವ

ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸುವುದು ಮತ್ತು ಜವಾಬ್ದಾರಿಯುತವಾಗಿ ವಿಲೇವಾರಿ ಮಾಡುವ ಕುರಿತು ಮಾಹಿತಿ, ಶಿಕ್ಷಣ ಹಾಗೂ ಸಂವಹನ ಕಾರ್ಯಕ್ರಮಗಳ ಮೂಲಕ ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.

ತ್ಯಾಜ್ಯ ಸಾಗಣೆ ವಾಹನಗಳ ಸಂಚಾರದ ಮೇಲೆ ನಿಗಾ ಇಡಲು ಜಿಪಿಎಸ್ ಆಧಾರಿತ ವ್ಯವಸ್ಥೆ, ಡಿಜಿಟಲ್ ಮೇಲ್ವಿಚಾರಣೆ ಹಾಗೂ ಗುತ್ತಿಗೆದಾರರ ಕಾರ್ಯಕ್ಷಮತೆ ಮೌಲ್ಯಮಾಪನ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ಯೋಜಿಸಲಾಗಿದೆ.

ಇದರೊಂದಿಗೆ ಸೇವೆಗಳ ಗುಣಮಟ್ಟ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಹೆಚ್ಚಿಸಲು ಕಾರ್ಯಕ್ಷಮತೆ ಸೂಚಕಗಳು, ವರದಿಗಾರಿಕೆ ಹಾಗೂ ಪರಿಶೀಲನಾ ಚೌಕಟ್ಟುಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.

ಯಾವುದೇ ಶುಲ್ಕವಿಲ್ಲದ ಸಹಭಾಗಿತ್ವ

ಈ ಒಪ್ಪಂದವು ಸಂಪೂರ್ಣ ಹಣಕಾಸು ಮತ್ತು ಸಂಭಾವನೆ ರಹಿತ ಸಹಭಾಗಿತ್ವವಾಗಿದೆ. ಸಾಹಸ್ ಸಂಸ್ಥೆಯು ಪಾಲಿಕೆಯಿಂದ ಯಾವುದೇ ವೃತ್ತಿಪರ ಶುಲ್ಕ, ಸಲಹಾ ಶುಲ್ಕ ಅಥವಾ ಮರುಪಾವತಿಯನ್ನು ಪಡೆಯದೆ ಸ್ವಯಂಪ್ರೇರಿತವಾಗಿ ತಾಂತ್ರಿಕ ಸಲಹೆ ಹಾಗೂ ಸಾಮರ್ಥ್ಯ ವೃದ್ಧಿಗೆ ನೆರವು ನೀಡಲಿದೆ.

11 ರಾಜ್ಯಗಳಲ್ಲಿ ಸಾಹಸ್ ಕಾರ್ಯನಿರ್ವಹಣೆ

2001ರಲ್ಲಿ ಸ್ಥಾಪನೆಯಾದ ಸಾಹಸ್ ಸಂಸ್ಥೆಯು ದೇಶದ 11 ರಾಜ್ಯಗಳು, 12 ನಗರಗಳು ಮತ್ತು 528 ಗ್ರಾಮ ಪಂಚಾಯಿತಿಗಳಲ್ಲಿ ಸುಸ್ಥಿರ ತ್ಯಾಜ್ಯ ನಿರ್ವಹಣೆ ಹಾಗೂ ವೃತ್ತಾಕಾರದ ಆರ್ಥಿಕತೆಯ ಪರಿಹಾರಗಳ ಅನುಷ್ಠಾನದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಬೆಂಗಳೂರಿನ 21 ವಾರ್ಡ್‌ಗಳಲ್ಲಿ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಕೋರಮಂಗಲದಲ್ಲಿ 'ಕಸ ರಸ' ಎಂಬ ವಿಶೇಷ ತ್ಯಾಜ್ಯ ಸಂಗ್ರಹಣಾ ಕೇಂದ್ರ ಸ್ಥಾಪನೆ, 'ಕಸ ಕಿಯೋಸ್ಕ್' ಮಾದರಿ ಪರಿಚಯ ಹಾಗೂ ಕೋರಮಂಗಲದ ಜೈವಿಕ ಅನಿಲ ಘಟಕದ ಸಾಮರ್ಥ್ಯವನ್ನು ದಿನಕ್ಕೆ 4 ಟನ್‌ನಿಂದ 8 ಟನ್‌ಗೆ ಹೆಚ್ಚಿಸಿರುವುದು ಸಂಸ್ಥೆಯ ಪ್ರಮುಖ ಕಾರ್ಯಗಳಾಗಿವೆ. ಇ-ತ್ಯಾಜ್ಯ ಮತ್ತು ಬೃಹತ್ ತ್ಯಾಜ್ಯ ಸಂಗ್ರಹಣೆಯಲ್ಲಿಯೂ ಸಂಸ್ಥೆ ಕಾರ್ಯನಿರ್ವಹಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande