
ಬಳ್ಳಾರಿ, 20 ನವೆಂಬರ್ (ಹಿ.ಸ.)
2026–27ನೇ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗೆ ‘ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ' ಯೋಜನೆಯಡಿ ಕೃಷಿ ಬೆಳೆಗಳ ವಿಮೆ ನೋಂದಣಿ ವಿಮೆ ಮಾಡಿಸಿಕೊಳ್ಳುವಂತೆ ಬಳ್ಳಾರಿ-ಕುರುಗೋಡು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಗರ್ಜಪ್ಪ ಅವರು ಮನವಿ ಮಾಡಿದ್ದಾರೆ.
ಈ ವರ್ಷ ಎಲ್ ನಿನೋ ಪ್ರಭಾವದಿಂದ ಬರ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದ್ದು, ಬೆಳೆ ವಿಮೆ ಮಾಡಿಸುವುದರಿಂದ ರೈತರು ಆರ್ಥಿಕ ಸಂಕಷ್ಟದಿಂದ ಪಾರಾಗಲು ನೆರವಾಗಲಿದೆ ಎಂದಿದ್ದಾರೆ. ಅಲ್ಲದೆ ಆಲಿಕಲ್ಲು ಮಳೆ, ಭೂಕುಸಿತ ಮತ್ತು ಬೆಳೆ ಮುಳುಗಡೆಯಂತಹ ನೈಸರ್ಗಿಕ ವಿಕೋಪಗಳಿಂದ ಬೆಳೆ ಹಾನಿಯಾದಾಗ ವಿಮಾ ಯೋಜನೆಯಿಂದ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಬೆಳೆ ಹಾನಿ ಸಂಭವಿಸಿದ 72 ಗಂಟೆಗಳ ಒಳಗಾಗಿ ರೈತರು ಕೃಷಿ ಇಲಾಖೆಗೆ ಅಥವಾ ವಿಮಾ ಕಂಪನಿಯ ಟೋಲ್ ಫ್ರೀ ಸಂಖ್ಯೆ 1800-209-1111 ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಪರಿಹಾರ ಪಡೆಯಲು ಇದು ಅತ್ಯಗತ್ಯ ಹಂತವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
*ಬೆಳೆವಾರು ವಿಮಾ ಕಂತು ಮತ್ತು ಕೊನೆಯ ದಿನಾಂಕಗಳು:*
ನೀರಾವರಿ ಜೋಳ: ಎಕರೆಗೆ ರೂ.319, ಕೊನೆಯ ದಿನಾಂಕ: ಡಿಸೆಂಬರ್ 15.
ಮೆಕ್ಕೆಜೋಳ: ಎಕರೆಗೆ ರೂ.463, ಕೊನೆಯ ದಿನಾಂಕ: ಡಿಸೆಂಬರ್ 15.
ಕಡಲೆ (ಮಳೆಯಾಶ್ರಿತ ಆಧಾರಿತ): ಎಕರೆಗೆ ರೂ.253, ಕೊನೆಯ ದಿನಾಂಕ: ಡಿಸೆಂಬರ್ 31.
ಕಡಲೆ (ನೀರಾವರಿ): ಎಕರೆಗೆ ರೂ.280, ಕೊನೆಯ ದಿನಾಂಕ: ಡಿಸೆಂಬರ್ 31.
ಬೇಸಿಗೆ ಹಂಗಾಮಿನ ನೀರಾವರಿ ಭತ್ತ: ಎಕರೆಗೆ ರೂ.659, ಕೊನೆಯ ದಿನಾಂಕ: 2027 ರ ಫೆಬ್ರವರಿ 26.
ಶೇಂಗಾ (ನೀರಾವರಿ): ಎಕರೆಗೆ ರೂ.472, ಕೊನೆಯ ದಿನಾಂಕ: 2027 ರ ಫೆಬ್ರವರಿ 26.
ನೋಂದಣಿ ಮತ್ತು ಹೆಚ್ಚಿನ ಮಾಹಿತಿಗೆ ರೈತರು ತಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರ ಅಥವಾ ತಾವು ವ್ಯವಹಾರ ನಡೆಸುವ ಬ್ಯಾಂಕ್ಗಳಲ್ಲಿ ಬೆಳೆ ವಿಮೆ ನೋಂದಣಿ ಮಾಡಿಸಬಹುದು.
ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಅಥವಾ ಬಳ್ಳಾರಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್