ಕೋಲಾರದಲ್ಲಿ ಬಿಜೆಪಿಯಿಂದ ಪ್ರಜಾಪ್ರಭುತ್ವ ಉಳಿಸಿ ಆಂದೋಲನ
ಕೋಲಾರದಲ್ಲಿ ಬಿಜೆಪಿಯಿಂದ ಪ್ರಜಾಪ್ರಭುತ್ವ ಉಳಿಸಿ ಆಂದೋಲನ
ಬಿಜೆಪಿ ಮುಖಂಡ ವಾಸುದೇವ


ಕೋಲಾರ, 02 ನವೆಂಬರ್ (ಹಿ.ಸ.)

ಜನರ ಮನಸ್ಸಿನಿಂದ ಶಾಶ್ವತವಾಗಿ ದೂರುವಾಗಿರುವ ಕಾಂಗ್ರೆಸ್ ಪಕ್ಷ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯುವ ಜನತೆ ಮನಸ್ಸಿನಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ವಾಸುದೇವ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ಕುತಂತ್ರ ವಿರುದ್ಧ ಮಂಗಳವಾರ ಕೋಲಾರದಲ್ಲಿ ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ಅಳಿಸಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ ಅವರು ಅಭಿಯಾನದಲ್ಲಿ ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ, ಬಿಜೆಪಿ ರಾಷ್ಟಿಯ ಪ್ರಧಾನ ಕಾರ್ಯದರ್ಶಿ ರಾಜ್ಯ ಪ್ರಭಾರಿ ಹರೀಶ್ ದ್ವಿವೇದಿ, ವಿರೋಧ ಪಕ್ಷದ ನಾಯಕ ಆಶೋಕ ಸೇರಿದಂತೆ ರಾಜ್ಯದ ಹಿರಿಯ ಬಿಜೆಪಿ ನಾಯಕರು ಸೇರಿದಂತೆ ಮಾಜಿ ಸಚಿವರು ಶಾಸಕರು ಭಾಗಿಯಾಗುವರು.

ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಯುವಜನರನ್ನು ಕಣ್ಮುಂದೆ ಇಟ್ಟುಕೊಂಡು ಅನೇಕ ಯೋಜನೆಗಳನ್ನು ಮಾಡಿದ್ದಾರೆ. ೭ ಐಐಟಿಗಳ ಸ್ಥಾಪನೆ, ತ್ರಿಬಲ್ ಐಐಟಿಗಳನ್ನು ೧೬ ಕಡೆ ಆರಂಭಿಸಲಾಗಿದೆ. ೮ ಕಡೆ ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ಪ್ರಾರಂಭಿಸಲಾಗಿದೆ. ೨೦೧೪ಕ್ಕೆ ಮೊದಲು ದೇಶದಲ್ಲಿ ೩೮೭ ವೈದ್ಯಕೀಯ ಕಾಲೇಜುಗಳಿದ್ದವು. ೧೨ ವರ್ಷಗಳಲ್ಲಿ ೪೩೧ ಹೊಸ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಾಗಿದೆ. ಮೋದಿಯವರು ಕೌಶಲ್ಯಾಭಿವೃದ್ಧಿಯ ಹೊಸ ಸಚಿವಾಲಯ ಪ್ರಾರಂಭಿಸಿದ್ದಾರೆ ಎಂದು ತಿಳಿಸಿದರು.

ಕ್ರೀಡಾ ಕ್ಷೇತ್ರದಲ್ಲಿ ಯುವಜನರಿಗಾಗಿ ಹೊಸ ಯೋಜನೆಗಳನ್ನು ನೀಡಿದ್ದಾರೆ, ಆದರೆ ಕಾಂಗ್ರೆಸ್ ಯುವಜನರ ಮನಸ್ಸನ್ನು ದಾರಿ ತಪ್ಪಿಸುವ ಯತ್ನ ಮಾಡುತ್ತಿದೆ.ಭಾರತವನ್ನು ಬಾಂಗ್ಲಾ, ಶ್ರೀಲಂಕಾ, ಫ್ರಾನ್ಸ್ ಮಾಡಲು, ಇಲ್ಲಿ ಅರಾಜಕತೆ ಸೃಷ್ಟಿಸಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ೧೨ ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ಆಗಿದೆ. ೧೦ ಬಾರಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗಲೇ ಆಗಿದೆ. ೨೦೦೪ರಲ್ಲಿ ಎಸ್ಐಆರ್ ಆಗಿದ್ದು, ಸುಮಾರು ೨ ದಶಕಗಳ ಬಳಿಕ ಮತದಾರರ ಪಟ್ಟಿ ಪರಿಷ್ಕರಿಸಲಾಗುತ್ತಿದೆ. ಈ ಕುರಿತು ಸುಳ್ಳು ಸುದ್ದಿ ಹಬ್ಬಿಸುವ ಪ್ರಯತ್ನ ಕಾಂಗ್ರೆಸ್ಸಿನದು ಎಂದು ವಾಗ್ದಾಳಿ ನಡೆಸಿದರು.

ದೇಶವನ್ನು ಅಸ್ಥಿರಗೊಳಿಸಲು ಯಾವ ಶಕ್ತಿಯಿಂದಲೂ ಅಸಾಧ್ಯ ಎಂದ ಅವರು ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಜೊತೆ ತಾವಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ೧೨೦ ವರ್ಷಗಳ ಇತಿಹಾಸವುಳ್ಳ ಪಕ್ಷ ಎಂದು ಹೇಳಿಕೊಳ್ಳುವ ಕಾಂಗ್ರೆಸ್ಗೆ ಈಗ ಸ್ವಂತಿಕೆ ಇಲ್ಲ. ಕೈ ಪಕ್ಷ ತನ್ನ ಇತಿಹಾಸ ಕಳೆದುಕೊಂಡು ಜಿರಲೆ ಆಗುತ್ತಿದೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಗೆದ್ದಿರುವ ರಾಜ್ಯಗಳಲ್ಲಿ ಎಲ್ಲವೂ ಸರಿಯಾಗಿರುತ್ತದೆ. ಆದರೆ, ಬಿಜೆಪಿ ಅಧಿಕಾರದಲ್ಲಿರುವ ಕಡೆ ನಡೆಯುವುದೆಲ್ಲವೂ ತಪುö್ಪ ಎಂಬ ಭಾವನೆ ಆ ಪಕ್ಷಕ್ಕಿದೆ. ಬದಲಾಗಬೇಕಿರುವುದು ಕೇಂದ್ರ ಸರ್ಕಾರವಲ್ಲ. ಬದಲಿಗೆ, ಕಾಂಗ್ರೆಸ್ ನಾಯಕತ್ವ' ಎಂದು ವ್ಯಂಗ್ಯವಾಡಿದರು.

ಎಸ್ಐಆರ್ ನೆಪದಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಗೆ ಕಾಂಗ್ರೆಸ್, ಕಮ್ಯುನಿಸ್ಟ್ ಸೇರಿದಂತೆ ವಿವಿಧ ಪಕ್ಷಗಳು ಹಾಗೂ ಸಂಘಟನೆಗಳು ವ್ಯವಸ್ಥಿತವಾಗಿ ಪ್ರಯತ್ನಿಸುತ್ತಿವೆ. ಕೇರಳದಲ್ಲಿ ಎಸ್ಐಆರ್ ಒಪ್ಪಿರುವ ಕಾಂಗ್ರೆಸ್ ಕರ್ನಾಟಕದಲ್ಲಿ ವಿರೋಧಿಸಿದೆ. ಇದು ಪಕ್ಷದ ಇಬ್ಬಂದಿತನಕ್ಕೆ ಸಾಕ್ಷಿ' ಎಂದು ಕಿಡಿಕಾರಿದರು.

---------------

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande