ಜನರ ಸಮಸ್ಯೆಗಳಿಗೆ ಸ್ಪಂಧಿಸದ ಅಧಿಕಾರಿಗಳ ವಿರುದ್ಧ ಕ್ರಮ ; ಸಂಸದ ಮಲ್ಲೇಶ್ ಬಾಬು
ಜನರ ಸಮಸ್ಯೆಗಳಿಗೆ ಸ್ಪಂಧಿಸದ ಅಧಿಕಾರಿಗಳ ವಿರುದ್ಧ ಕ್ರಮ ; ಸಂಸದ ಮಲ್ಲೇಶ್ ಬಾಬು
ಕೋಲಾರದಲ್ಲಿ ಸಂಸದ ಎಂ. ಮಲ್ಲೇಶ್ ಬಾಬು ಅಧ್ಯಕ್ಷತೆಯಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ತ್ರೈಮಾಸಿಕ ಸಭೆ ನಡೆಯಿತು.


ಕೋಲಾರ, 02 ನವೆಂಬರ್ (ಹಿ.ಸ.):

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳು ಕಾಗದದ ಮೇಲಷ್ಟೇ ಉಳಿಯದೆ ಕಟ್ಟಕಡೆಯ ಫಲಾನುಭವಿಗೆ ತಲುಪಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೆ, ಜನಪ್ರತಿನಿಧಿಗಳ ಕರೆಗಳನ್ನು ಸ್ವೀಕರಿಸದೆ ನಿರ್ಲಕ್ಷ್ಯ ತೋರುವ ಮತ್ತು ಸಭೆಗಳಿಗೆ ಬೇಜವಾಬ್ದಾರಿಯಿಂದ ಗೈರಾಗುವ ಯಾವುದೇ ಇಲಾಖೆಯ ಅಧಿಕಾರಿಯ ಕರ್ತವ್ಯಲೋಪವನ್ನು ಸಹಿಸಲು ಸಾಧ್ಯವಿಲ್ಲ. ಜನರ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಂ. ಮಲ್ಲೇಶಬಾಬು ಅಧಿಕಾರಿಗಳಿಗೆ ನೇರ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಂಸದರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದರು.

ಸಭೆಯ ಆರಂಭದಿ0ದ ಅಂತ್ಯದವರೆಗೂ ಆಡಳಿತ ಯಂತ್ರದ ಜಡ್ಡುಗಟ್ಟಿದ ಮನಸ್ಥಿತಿ, ಹೆದ್ದಾರಿ ಪ್ರಾಧಿಕಾರದ ಅವಾಂತರಗಳು, ಕುಡಿಯುವ ನೀರಿನ ಸಮಸ್ಯೆ, ಆಸ್ಪತ್ರೆ ಹಾಗೂ ಶಾಲೆಗಳ ದುರವಸ್ಥೆಯ ವಿರುದ್ಧ ಸಂಸದರು ಹಾಗೂ ಶಾಸಕರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು.

ದಿಶಾ ಸಭೆಯಂತಹ ಮಹತ್ವದ ಸಭೆಗೆ ಗಣಿ, ಎನ್ಎಚ್ಎಐ, ಕಂದಾಯ ಸೇರಿದಂತೆ ಹಲವು ಇಲಾಖೆಗಳ ಹಿರಿಯ ಅಧಿಕಾರಿಗಳು ಗೈರುಹಾಜರಾಗಿ ಕೆಳಹಂತದ ಸಿಬ್ಬಂದಿಯನ್ನು ಕಳುಹಿಸಿರುವುದಕ್ಕೆ ಸಂಸದ ಎಂ. ಮಲ್ಲೇಶಬಾಬು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಶಾಸಕರಾದ ಸಮೃದ್ಧಿ ವಿ. ಮಂಜುನಾಥ್, ಜಿ.ಕೆ. ವೆಂಕಟಶಿವಾರೆಡ್ಡಿ ಹಾಗೂ ಕೊತ್ತೂರು ಜಿ. ಮಂಜುನಾಥ್ ಅವರು ಅಧಿಕಾರಿಗಳ ವಿರುದ್ಧ ಧ್ವನಿ ಎತ್ತಿ, ತುರ್ತು ಪರಿಸ್ಥಿತಿಗಳಲ್ಲಿ ಕರೆ ಮಾಡಿದರೆ ಅಧಿಕಾರಿಗಳು ಫೋನ್ ಎತ್ತುವುದಿಲ್ಲ, ಪಿಎಗಳು ರಿಸೀವ್ ಮಾಡಿ ಮೀಟಿಂಗ್ನಲ್ಲಿದ್ದಾರೆ ಎನ್ನುತ್ತಾರೆ. ಜನಪ್ರತಿನಿಧಿಗಳಿಗೇ ಈ ಸ್ಥಿತಿಯಾದರೆ ಜನಸಾಮಾನ್ಯರ ಕತೆಯೇನು? ಎಂದು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಸ್ಪಷ್ಟ ಸೂಚನೆ ನೀಡಿದ ಸಂಸದರು, ಅಧಿಕಾರಿಗಳು ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ಕರೆಗಳಿಗೆ ತಕ್ಷಣ ಸ್ಪಂದಿಸಬೇಕು. ಕರ್ತವ್ಯಲೋಪ ತೋರುವವರ ವಿರುದ್ಧ ಸರ್ಕಾರಕ್ಕೆ ತಕ್ಷಣವೇ ವರದಿ ಸಲ್ಲಿಸಲಾಗುವುದು ಎಂದು ತಾಕೀತು ಮಾಡಿದರು.

ಮುಳುಬಾಗಿಲು ವ್ಯಾಪ್ತಿಯ ಬೆಂಗಳೂರು-ಚೆನ್ನೆ ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್ಪ್ರೆಸ್ವೇ ಕಾಮಗಾರಿಗಳು ೫ ವರ್ಷಗಳಿಂದ ಅರ್ಧಕ್ಕೆ ನಿಂತಿದ್ದು, ೨೦ ಅಡಿ ಆಳದ ಗುಂಡಿಗಳಿAದಾಗಿ ೩೦ ರಿಂದ ೪೦ ಅಪಘಾತಗಳು ಸಂಭವಿಸಿ ೪ ಮಂದಿ ಮೃತಪಟ್ಟಿರುವುದಕ್ಕೆ ಸಂಸದರು ಹಾಗೂ ಶಾಸಕರು ಎನ್ಎಚ್ಎಐ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕೆಜಿಎಫ್ ಎಸ್ಪಿ ಶಿವಾಂಶು ರಜಪೂತ್ ಅವರು, ಎಕ್ಸ್ಪ್ರೆಸ್ವೇನಲ್ಲಿ ವೇಗ ಮಿತಿ ಸೈನ್ಬೋರ್ಡ್ಗಳಿಲ್ಲದೆ, ಕಿರಿದಾದ ಕಲ್ವರ್ಟಗಳ ಬಳಿ ಸರಣಿ ಅಪಘಾತಗಳಾಗಿ ಸುಮಾರು ೩೦ ಸಾವುಗಳು ಸಂಭವಿಸಿವೆ, ೭೦ ಕಿ.ಮೀ ವ್ಯಾಪ್ತಿಯಲ್ಲಿ ವಿಶ್ರಾಂತಿ ಕೊಠಡಿ, ಶೌಚಾಲಯ ಹಾಗೂ ಆಂಬುಲೆನ್ಸ್ ವ್ಯವಸ್ಥೆಯಿಲ್ಲ ಎಂದು ಸಭೆಯ ಗಮನಕ್ಕೆ ತಂದರು.

ಸಂಸದರು ಗರಂ ಆಗಿ, ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಜನರ ಪ್ರಾಣದ ಜೊತೆ ಚೆಲ್ಲಾಟವಾಡಲು ಬಿಡುವುದಿಲ್ಲ. ವಡ್ಡಹಳ್ಳಿ ಫ್ಲೈಓವರ್ ಕಾಮಗಾರಿಯನ್ನು ಫೆಬ್ರವರಿ ಅಂತ್ಯಕ್ಕೆ ಒಂದು ಬದಿ ಹಾಗೂ ಮಾರ್ಚ್ ಅಂತ್ಯಕ್ಕೆ ಸಂಪೂರ್ಣವಾಗಿ ಮುಗಿಸಬೇಕು; ನರಸಿಂಹತೀರ್ಥ ಬಳಿಯ ಕಾಮಗಾರಿಯನ್ನು ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಬೇಕು. ಹೈಮಾಸ್ಟ್ ದೀಪಗಳನ್ನು ೪ ದಿನಗಳಲ್ಲಿ ದುರಸ್ತಿಪಡಿಸಬೇಕು. ತಪ್ಪಿದಲ್ಲಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಎನ್ಎಚ್ಎಐ ಅಧಿಕಾರಿಗಳ ವಿರುದ್ಧವೇ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.

ಮುಳುಬಾಗಿಲು ನಗರದಲ್ಲಿ ೧೬೭ ಬೋರ್ವೆಲ್ಗಳು ಬತ್ತಿಹೋಗಿದ್ದು, ೭ ವಾರ್ಡ್ಗಳಲ್ಲಿ ನೀರಿನ ತೀವ್ರ ಸಮಸ್ಯೆಯಿರುವುದನ್ನು ಶಾಸಕ ಸಮೃದ್ಧಿ ಮಂಜುನಾಥ್ ಪ್ರಸ್ತಾಪಿಸಿದರು. ತಾಲೂಕಿಗೆ ಬಂದ ₹೧ ಕೋಟಿ ಎಸ್ಡಿಆರ್ಎಫ್ ಹಾಗೂ ಟಾಸ್ಕ್ ಫೋರ್ಸ್ ಅನುದಾನದ ವಿವರಗಳನ್ನು ಅಧಿಕಾರಿಗಳು ಶಾಸಕರಿಗೆ ನೀಡದೆ ಕತ್ತಲಲ್ಲಿಟ್ಟಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಅಲ್ಲದೆ, ತಾಲೂಕು ಕಚೇರಿ ಮುಂಭಾಗದಲ್ಲಿದ್ದ ಎರಡು ಶ್ರೀಗಂಧದ ಮರಗಳನ್ನು ರಾತ್ರೋರಾತ್ರಿ ಕಳವು ಮಾಡಿರುವ ಬಗ್ಗೆ ಪೊಲೀಸರ ವೈಫಲ್ಯವನ್ನು ಪ್ರಶ್ನಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಂಸದ ಮಲ್ಲೇಶಬಾಬು ಅವರು, ಕುಡಿಯುವ ನೀರಿನ ವಿಚಾರದಲ್ಲಿ ಯಾವುದೇ ತಾರತಮ್ಯ ಅಥವಾ ರಾಜಕೀಯಕ್ಕೆ ಆಸ್ಪದ ನೀಡಬಾರದು. ಶ್ರೀನಿವಾಸಪುರ, ಮುಳುಬಾಗಿಲು, ಮಾಲೂರು, ಕೋಲಾರ ಹಾಗೂ ಕೆಜಿಎಫ್ ವ್ಯಾಪ್ತಿಯಲ್ಲಿ ಟಾಸ್ಕ್ ಫೋರ್ಸ್ ಹಾಗೂ ಎಸ್ಡಿಆರ್ಎಫ್ ಅನುದಾನವನ್ನು ಸಮರ್ಪಕವಾಗಿ ಬಳಸಿ, ಟ್ಯಾಂಕರ್ ಮತ್ತು ಬೋರ್ವೆಲ್ ಮೂಲಕ ಸಮರೋಪಾದಿಯಲ್ಲಿ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚಿಸಿದರು.

ಮುಳುಬಾಗಿಲು ತಾಲೂಕಿನ ದೇವರಾಜಸಮುದ್ರ ಗ್ರಾಮದ ಸ.ನಂ. ೧೯೯ ರಲ್ಲಿ ಗ್ರಾಮಸ್ಥರ ವಸತಿ ಪ್ರದೇಶಕ್ಕೆ ಹೊಂದಿಕೊAಡAತೆ ೫೦೦ ಮೀಟರ್ ಅಂತರದಲ್ಲಿ ಗ್ರಾಮ ಪಂಚಾಯಿತಿ, ಅರಣ್ಯ ಹಾಗೂ ಕಂದಾಯ ಇಲಾಖೆಯ ಯಾವುದೇ ಎನ್ಒಸಿ ಇಲ್ಲದೆ ಆಂಧ್ರ ಮೂಲದ ವ್ಯಕ್ತಿಗಳು ಅಕ್ರಮವಾಗಿ ಕಲ್ಲು ಕ್ರಷರ್ ಯಂತ್ರಗಳನ್ನು ಅಳವಡಿಸುತ್ತಿರುವುದಕ್ಕೆ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಗಣಿ ಇಲಾಖೆಯ ಬೇಜವಾಬ್ದಾರಿ ಉತ್ತರಕ್ಕೆ ಸಿಡಿಮಿಡಿಗೊಂಡ ಸಂಸದರು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನಪ್ರತಿನಿಧಿಗಳು ಜನರಿಗೆ ಉತ್ತರಿಸಬೇಕಾಗಿದೆ. ತಕ್ಷಣವೇ ನೋಟಿಸ್ ಜಾರಿ ಮಾಡಿ ೨೪ ಗಂಟೆಯೊಳಗೆ ಅಕ್ರಮ ಕ್ರಷರ್ ಕಾಮಗಾರಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು.

ನರಸಾಪುರ ಮತ್ತು ವೇಮಗಲ್ ಕೈಗಾರಿಕಾ ಪ್ರದೇಶಗಳಲ್ಲಿರುವ ₹೫೦೦ ಕೋಟಿಗೂ ಅಧಿಕ ವಹಿವಾಟು ನಡೆಸುವ ೨೯ ಬೃಹತ್ ಕೈಗಾರಿಕೆಗಳು ಕೋಲಾರದ ಭೂಮಿ, ನೀರು, ಗಾಳಿಯನ್ನು ಬಳಸಿಕೊಂಡು ತಮ್ಮ ಸಿಎಸ್ಆರ್ ನಿಧಿಯನ್ನು ಹೊರರಾಜ್ಯಗಳಿಗೆ ಅಥವಾ ಉತ್ತರ ಕರ್ನಾಟಕಕ್ಕೆ ನೀಡುತ್ತಿರುವುದಕ್ಕೆ ಸಭೆಯಲ್ಲಿ ಪ್ರಬಲ ಆಕ್ಷೇಪ ವ್ಯಕ್ತವಾಯಿತು. ಸಂಸದ ಮಲ್ಲೇಶಬಾಬು ಅವರು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಎಲ್ಲಾ ೨೯ ಕಂಪನಿಗಳ ಮುಖ್ಯಸ್ಥರ ತುರ್ತು ಸಭೆ ಕರೆಯಬೇಕು. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿಯನ್ನು ಕೋಲಾರ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗಳು, ಶಾಲೆ-ಅಂಗನವಾಡಿಗಳ ನವೀಕರಣಕ್ಕೆ ಕಡ್ಡಾಯವಾಗಿ ಬಳಸುವಂತೆ ಸೂಚಿಸಬೇಕು ಎಂದು ನಿರ್ಣಯಿಸಿದರು. ಇತ್ತೀಚೆಗೆ ನರಸಾಪುರ ಕಾರ್ಖಾನೆಯಲ್ಲಿ ಮೃತಪಟ್ಟ ಯುವತಿಯ ಕುಟುಂಬಕ್ಕೆ ಶೀಘ್ರ ಪರಿಹಾರ ಕೊಡಿಸಲು ಕಾರ್ಮಿಕ ಇಲಾಖೆಗೆ ತಾಕೀತು ಮಾಡಲಾಯಿತು.

ಸೈಂಟ್ ಆನ್ಸ್ ಅನುದಾನಿತ ಪ್ರೌಢಶಾಲೆಯಲ್ಲಿ ಪಿಟಿ ಶಿಕ್ಷಕನೊಬ್ಬ ಬಡ್ಡಿ ದಂಧೆ ನಡೆಸುತ್ತಿದ್ದು, ವಿದ್ಯಾರ್ಥಿಗಳ ಮುಂದೆಯೇ ಶಿಕ್ಷಕರು ಪರಸ್ಪರ ಚಪ್ಪಲಿಗಳಿಂದ ಹೊಡೆದಾಡಿಕೊಂಡ ವಿಡಿಯೋ ವೈರಲ್ ಆಗಿರುವುದನ್ನು ಶಾಸಕ ಸಮೃದ್ಧಿ ಮಂಜುನಾಥ್ ಸಭೆಯ ಗಮನಕ್ಕೆ ತಂದರು. ಶಿಕ್ಷಣ ಸಂಸ್ಥೆಯ ಪಾವಿತ್ರ್ಯತೆ ಹಾಳುಮಾಡಿದ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದ ಸಂಸದರು, ಶಿಕ್ಷಣ ಇಲಾಖೆಯ ಘನತೆಗೆ ಕಪ್ಪುಚುಕ್ಕೆ ತಂದಿರುವ ತಪ್ಪಿತಸ್ಥ ಶಿಕ್ಷಕರನ್ನು ತಕ್ಷಣವೇ ಅಮಾನತುಗೊಳಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಡಿಡಿಪಿಐಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಶ್ರೀನಿವಾಸಪುರ ಶಾಸಕ ಜಿ. ಕೆ. ವೆಂಕಟಶಿವಾರೆಡ್ಡಿ, ಮುಳುಬಾಗಿಲು ಶಾಸಕ ಸಮೃದ್ಧಿ ವಿ. ಮಂಜುನಾಥ್, ಕೋಲಾರ ಶಾಸಕ ಕೊತ್ತೂರು ಜಿ. ಮಂಜುನಾಥ್, ವಿಧಾನಪರಿಷತ್ ಸದಸ್ಯರಾದ ಎಂ. ಎಲ್. ಅನಿಲ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್ ಪಿ. ಬಾಗೇವಾಡಿ, ಅಪರ ಜಿಲ್ಲಾಧಿಕಾರಿ ಎಸ್.ಎಂ. ಮಂಗಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಟಿ.ಕೆ. ರಮೇಶ್ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande