ಡಿಜಿಟಲ್, ರಕ್ಷಣಾ ಮತ್ತು ಬಾಹ್ಯಾಕಾಶ ಕ್ಷೇತ್ರಗಳಿಗೂ ಭಾರತ–ಆಸಿಯಾನ್ ಪಾಲುದಾರಿಕೆ ವಿಸ್ತರಣೆ: ಪ್ರಧಾನಿ ಮೋದಿ
ನವದೆಹಲಿ, 17 ನವೆಂಬರ್ (ಹಿ.ಸ.): ಭಾರತ ಮತ್ತು ಆಸಿಯಾನ್ ನಡುವಿನ ಪಾಲುದಾರಿಕೆ ಹಂಚಿಕೆಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಮೀರಿ ಡಿಜಿಟಲ್‌, ರಕ್ಷಣಾ ಮತ್ತು ಬಾಹ್ಯಾಕಾಶ ಕ್ಷೇತ್ರಗಳಿಗೂ ವಿಸ್ತರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ ನಡೆದ 23ನೇ ಭಾ
प्रधानमंत्री नरेन्द्र मोदी मंगलवार को 23वें आसियान-भारत शिखर सम्मेलन को संबोधित करते हुए


ನವದೆಹಲಿ, 17 ನವೆಂಬರ್ (ಹಿ.ಸ.):

ಭಾರತ ಮತ್ತು ಆಸಿಯಾನ್ ನಡುವಿನ ಪಾಲುದಾರಿಕೆ ಹಂಚಿಕೆಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಮೀರಿ ಡಿಜಿಟಲ್‌, ರಕ್ಷಣಾ ಮತ್ತು ಬಾಹ್ಯಾಕಾಶ ಕ್ಷೇತ್ರಗಳಿಗೂ ವಿಸ್ತರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ ನಡೆದ 23ನೇ ಭಾರತ–ಆಸಿಯಾನ್ ಶೃಂಗಸಭೆಯ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಅವರು, ಭಾರತ ಮತ್ತು ಆಸಿಯಾನ್ ಒಟ್ಟಾಗಿ ವಿಶ್ವದ ಸುಮಾರು ನಾಲ್ಕನೇ ಒಂದು ಭಾಗದಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುತ್ತವೆ. ಈ ಪ್ರದೇಶದ ಭವಿಷ್ಯ ಸ್ಪರ್ಧೆಯ ಬದಲಿಗೆ ಸಹಕಾರದ ಆಧಾರದ ಮೇಲೆ ರೂಪುಗೊಳ್ಳಬೇಕು ಎಂದು ಪ್ರತಿಪಾದಿಸಿದರು.

ಭಾರತದ ಪೂರ್ವಾಭಿಮುಖ ನೀತಿಯು ಕಳೆದ ಹಲವು ವರ್ಷಗಳಲ್ಲಿ ಭಾರತ–ಆಸಿಯಾನ್ ಸಂಬಂಧಗಳಿಗೆ ಹೊಸ ವೇಗ ಮತ್ತು ಆಳವನ್ನು ನೀಡಿದೆ. ಆಸಿಯಾನ್ ಅಧ್ಯಕ್ಷತೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಹಾಗೂ ಭಾರತದ ದೇಶ ಸಮನ್ವಯಕಾರರಾಗಿ ಮಹತ್ವದ ಕೊಡುಗೆ ನೀಡಿದ ಫಿಲಿಪ್ಪೀನ್ಸ್ ಅಧ್ಯಕ್ಷ ಮಾರ್ಕೋಸ್ ಅವರಿಗೆ ಮೋದಿ ಅಭಿನಂದನೆ ಸಲ್ಲಿಸಿದರು.

ಆಸಿಯಾನ್ ನಾಯಕರೊಂದಿಗೆ ಈ ಸ್ವರೂಪದಲ್ಲಿ ತಾವು ನಡೆಸುತ್ತಿರುವುದು 13ನೇ ಸಂವಾದವಾಗಿದೆ. 2014ರಿಂದ ಜನರ ನಡುವಿನ ಸಂಪರ್ಕ ಬಲಪಡಿಸಲು 100ಕ್ಕೂ ಹೆಚ್ಚು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಸುಮಾರು 250 ತ್ವರಿತ ಅನುಷ್ಠಾನದ ಯೋಜನೆಗಳನ್ನು ಆರಂಭಿಸಲಾಗಿದ್ದು, ಕೌಶಲಾಭಿವೃದ್ಧಿಗಾಗಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿವೇತನಗಳನ್ನು ನೀಡಲಾಗಿದೆ ಎಂದು ತಿಳಿಸಿದರು. ಭಾರತ ಮತ್ತು ಆಸಿಯಾನ್‌ನ ಒಂಬತ್ತು ರಾಷ್ಟ್ರಗಳ ನಡುವಿನ ನೇರ ವಿಮಾನಯಾನ ಹಾಗೂ ಪ್ರವಾಸೋದ್ಯಮದ ಬೆಳವಣಿಗೆ ಪರಸ್ಪರ ನಿಕಟತೆಯನ್ನು ಪ್ರತಿಬಿಂಬಿಸುತ್ತವೆ ಎಂದರು.

ಜಗತ್ತು ಕಳೆದ ಕೆಲವು ವರ್ಷಗಳಲ್ಲಿ ಸರಣಿ ಬಿಕ್ಕಟ್ಟುಗಳನ್ನು ಎದುರಿಸಿದೆ. ಇಂತಹ ಸಂದರ್ಭದಲ್ಲಿ ವಿಶ್ವಕ್ಕೆ ಶಾಂತಿ, ಸ್ಥಿರತೆ ಮತ್ತು ಭವಿಷ್ಯದ ಬಗ್ಗೆ ವಿಶ್ವಾಸಾರ್ಹತೆ ಅತ್ಯಂತ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಶೃಂಗಸಭೆಯ 'ಒಟ್ಟಾಗಿ ಭವಿಷ್ಯದ ಹಾದಿ ರೂಪಿಸುವುದು' ಎಂಬ ಧ್ಯೇಯವಾಕ್ಯ ವಿಶೇಷ ಮಹತ್ವ ಹೊಂದಿದೆ ಎಂದು ಹೇಳಿದರು.

ಭಾರತ ಮತ್ತು ಆಸಿಯಾನ್ ಈ ಪ್ರದೇಶವನ್ನು ಶಾಂತಿ ಹಾಗೂ ಸ್ಥಿರತೆಯ ಸಂಕೇತವನ್ನಾಗಿ ರೂಪಿಸುವ ಸಾಮರ್ಥ್ಯ ಮತ್ತು ಸಂಕಲ್ಪ ಹೊಂದಿವೆ. ಭಾರತದ ಅಭಿವೃದ್ಧಿ ಹಾಗೂ ಆಸಿಯಾನ್‌ನ ಸಮೃದ್ಧಿ ಪರಸ್ಪರ ನಿಕಟವಾಗಿ ಬೆಸೆದುಕೊಂಡಿವೆ. ಮುಂಬರುವ ವರ್ಷಗಳಲ್ಲಿ ಆಸಿಯಾನ್ ಸಮುದಾಯದ ದೃಷ್ಟಿಕೋನ 2045 ಮತ್ತು ವಿಕಸಿತ ಭಾರತ 2047ರ ಗುರಿ ಸಾಧನೆಯಲ್ಲಿ ಎರಡೂ ಕಡೆಯ ಸಹಭಾಗಿತ್ವ ಪ್ರಮುಖ ಪಾತ್ರ ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ 12 ವರ್ಷಗಳಲ್ಲಿ ಭಾರತ–ಆಸಿಯಾನ್ ಪಾಲುದಾರಿಕೆ ಹೊಸ ವೇಗ ಪಡೆದುಕೊಂಡಿದೆ. ಆಸಿಯಾನ್‌ನ ಏಕತೆ ಮತ್ತು ಕೇಂದ್ರ ಸ್ಥಾನಕ್ಕೆ ಭಾರತದ ಬದ್ಧತೆ ಅಚಲವಾಗಿದೆ. ಈ ಶೃಂಗಸಭೆಯು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವುದರ ಜತೆಗೆ ಸುರಕ್ಷಿತ, ಎಲ್ಲರನ್ನೂ ಒಳಗೊಂಡ ಹಾಗೂ ಸಮೃದ್ಧ ಹಿಂದೂ ಮಹಾಸಾಗರ–ಪೆಸಿಫಿಕ್ ಪ್ರದೇಶ ನಿರ್ಮಾಣಕ್ಕೆ ಕೊಡುಗೆ ನೀಡಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಶೃಂಗಸಭೆಯಲ್ಲಿ ಭಾಗವಹಿಸಿರುವ ಎಲ್ಲ ನಾಯಕರ ಅಭಿಪ್ರಾಯ ಮತ್ತು ಸಲಹೆಗಳನ್ನು ಆಲಿಸಲು ಉತ್ಸುಕನಾಗಿದ್ದೇನೆ ಎಂದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande