
ಬೆಂಗಳೂರು, 17 ನವೆಂಬರ್ (ಹಿ.ಸ.):
ಇಂದಿನ ಯುವಜನತೆ ದೇಶದ ಸ್ವಾಭಿಮಾನ ಮತ್ತು ಇತಿಹಾಸದೊಂದಿಗೆ ಗಾಢವಾಗಿ ಬೆಸೆದುಕೊಂಡಿದ್ದು, ಭಾರತೀಯ ಸಂಸ್ಕೃತಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಲು ಯಾವುದೇ ಸಂಕೋಚ ಹೊಂದಿಲ್ಲ. ಕ್ರಿಕೆಟ್, ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಯುವಕರು ‘ಜೈ ಶ್ರೀರಾಮ್’, ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಗಳನ್ನು ಮುಕ್ತವಾಗಿ ಕೂಗುತ್ತಿದ್ದಾರೆ. ಇದು ಭಾರತೀಯ ಯುವಜನರಲ್ಲಿ ಹೆಚ್ಚುತ್ತಿರುವ ಸಾಂಸ್ಕೃತಿಕ ಆತ್ಮವಿಶ್ವಾಸದ ಸಂಕೇತವಾಗಿದೆ. ಇಂತಹ ಆತ್ಮವಿಶ್ವಾಸವನ್ನು ಪ್ರತಿಯೊಬ್ಬ ಭಾರತೀಯನಲ್ಲೂ ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಕಳೆದ ನೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಹೇಳಿದರು.
ಮಂಥನ ಸಂಸ್ಥೆ ಬೆಂಗಳೂರು ವತಿಯಿಂದ ಲೇಖಕಿ ರಶ್ಮಿ ಸಾಮಂತ್ ಸಂಪಾದಿಸಿರುವ ‘ಹಂಡ್ರೆಡ್ ಇಯರ್ಸ್ ಯಂಗ್: ರಾಷ್ಟ್ರೀಯ ಸ್ವಯಂಸೇವಕ ಸಂಘ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಯುವಜನರಿಗೆ ದೇಶದ ವ್ಯವಸ್ಥೆಯ ಮೇಲೆ ವಿಶ್ವಾಸ
ಭಾರತದ ಯುವಜನರನ್ನು ದಾರಿತಪ್ಪಿಸುವ ಪ್ರಯತ್ನಗಳು ವಿಶ್ವದ ವಿವಿಧೆಡೆಗಳಿಂದ ನಡೆಯುತ್ತಿವೆ. ಇಂತಹ ಪ್ರಯತ್ನಗಳು ಅನೇಕ ದೇಶಗಳಲ್ಲಿ ಯಶಸ್ವಿಯಾಗಿ ಅಲ್ಲಿನ ವ್ಯವಸ್ಥೆಗಳನ್ನು ಅಸ್ಥಿರಗೊಳಿಸಿವೆ. ಆದರೆ ಭಾರತದಲ್ಲಿ ಅಂತಹ ಷಡ್ಯಂತ್ರಗಳು ಫಲಿಸುತ್ತಿಲ್ಲ. ಇದಕ್ಕೆ ದೇಶದ ವ್ಯವಸ್ಥೆಗಳ ಮೇಲೆ ಯುವಜನರು ಹೊಂದಿರುವ ವಿಶ್ವಾಸವೇ ಕಾರಣ. ಅವರು ಸಂವಿಧಾನಬದ್ಧರಾಗಿದ್ದು, ದೇಶವನ್ನು ಎಂದಿಗೂ ಸೋಲಲು ಬಿಡುವುದಿಲ್ಲ. ಯುವಜನರ ಬಗ್ಗೆ ಅಪನಂಬಿಕೆ ಹೊಂದುವ ಬದಲು ಅವರ ಮೇಲೆ ವಿಶ್ವಾಸವಿಡಬೇಕು ಎಂದು ಹೇಳಿದರು.
ಸಂಘ ಮತ್ತು ಅದರ ಮನೋಭಾವ ಸದಾ ಯೌವನದಿಂದ ಕೂಡಿರುತ್ತದೆ. ಹೀಗಾಗಿ ಪ್ರತಿ ಪೀಳಿಗೆಯ ಯುವಜನರ ಧ್ವನಿಯಾಗಿ ಸಂಘ ಕಾರ್ಯನಿರ್ವಹಿಸುತ್ತಿದೆ. ಸಂಘಟನೆ ಹಳೆಯದಾಗಿದ್ದರೂ ಅದರ ಆಶಯಗಳು ಸದಾ ಪ್ರಸ್ತುತವಾಗಿವೆ ಎಂದರು.
ಸಂಘದ ಮೇಲಿನ ಆರೋಪಗಳೂ ಚರ್ಚೆಗೆ ಕಾರಣ
ಸಂಘದ ಮೇಲೆ ಆಗಾಗ ಆರೋಪಗಳು ಏಕೆ ಬರುತ್ತವೆ ಎಂಬ ಪ್ರಶ್ನೆ ಎದುರಾಗುತ್ತದೆ. ಆರೋಪಗಳಿಂದಲೂ ಸಮಾಜದಲ್ಲಿ ಸಂಘದ ಕುರಿತು ಚರ್ಚೆ ನಡೆಯುತ್ತದೆ. ಜನರಿಗೆ ಸಂಘದ ಬಗ್ಗೆ ಹೆಚ್ಚಿನ ಸ್ಪಷ್ಟತೆ ದೊರೆಯುತ್ತದೆ. ಸಂಘ ಸಮಾಜದ ಸಂಘಟನೆಯಾಗಿರುವುದರಿಂದ ಅದರ ಕುರಿತು ಪ್ರಶ್ನೆಗಳು, ಹೊಸ ಚರ್ಚೆಗಳು ಮತ್ತು ಹೊಸ ಆಲೋಚನೆಗಳು ಮೂಡುವುದು ಸಹಜ ಎಂದು ಅಭಿಪ್ರಾಯಪಟ್ಟರು.
ಹಿಂದೂ ಸಮಾಜದಲ್ಲಿ ಯಾವುದೇ ಕೊರತೆ ಕಂಡುಬಂದರೂ ಸಂಘವನ್ನು ಪ್ರಶ್ನಿಸಲಾಗುತ್ತದೆ. ಏಕೆಂದರೆ ಸಂಘ ಆರಂಭದಿಂದಲೂ ದೇಶ ನಮ್ಮದು, ಸಮಾಜ ನಮ್ಮದು ಎಂಬ ಭಾವನೆಯೊಂದಿಗೆ ತನ್ನ ಕರ್ತವ್ಯ ನಿರ್ವಹಿಸುತ್ತಿದೆ. ದೇಶ ಮತ್ತು ಸಮಾಜ ನಮ್ಮದು ಎಂದು ಭಾವಿಸಿದಾಗ ಮಾತ್ರ ಅವುಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.
ದೇಶದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ
ದೇಶದ ಜವಾಬ್ದಾರಿ ಕೆಲವರಿಗಷ್ಟೇ ಸೀಮಿತವಾಗಿರಬಾರದು. ಅದು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು. ಹಾಗೆಯೇ ಈ ಹೊಣೆಗಾರಿಕೆ ಒಂದು ಪೀಳಿಗೆಗೆ ಮಾತ್ರ ಸೇರಿದ್ದಲ್ಲ. ಮುಂದಿನ ಪ್ರತಿಯೊಂದು ಪೀಳಿಗೆಯೂ ಅದನ್ನು ಮುಂದುವರಿಸಬೇಕು. ಭಾರತದ ಉಜ್ವಲ ಭವಿಷ್ಯಕ್ಕಾಗಿ ಸಂಘ ಕಾರ್ಯನಿರ್ವಹಿಸುತ್ತಿದ್ದು, ಯುವಜನರ ಕನಸುಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತಿದೆ. ಇಂದಿನ ಯುವಜನರಿಗೆ ದೇಶದ ಮೇಲೆ ವಿಶ್ವಾಸವಿದ್ದು, ಭಾರತೀಯ ಸಂಸ್ಕೃತಿಯೊಂದಿಗೆ ಅವರು ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.
ಸಾಂಸ್ಕೃತಿಕ ಆತ್ಮವಿಶ್ವಾಸವನ್ನು ಹೆಚ್ಚಿಸುವ ಉದ್ದೇಶದಿಂದಲೇ ಡಾ. ಕೇಶವ ಬಲಿರಾಮ ಹೆಡಗೇವಾರ್ ಅವರು ಸಂಘವನ್ನು ಸ್ಥಾಪಿಸಿದರು. ಇಂದು ಲಕ್ಷಾಂತರ ಜನರು ಈ ಸಾಂಸ್ಕೃತಿಕ ಆತ್ಮವಿಶ್ವಾಸವನ್ನು ಹೊಂದಿದ್ದಾರೆ. ಯುವಜನರು ತಮ್ಮ ಭಾರತೀಯ ಅಸ್ಮಿತೆಯ ಬಗ್ಗೆ ಹೆಮ್ಮೆ ಮತ್ತು ವಿಶ್ವಾಸ ಹೊಂದಿದ್ದಾರೆ ಎಂದರು.
ಕೋಟ್ಯಂತರ ಯುವಜನರ ಭಾವನೆಗಳನ್ನು ಪ್ರತಿನಿಧಿಸುವ ಕೃತಿ
ಭಾರತದ ಭವಿಷ್ಯ ಉಜ್ವಲವಾಗಿದ್ದು, ಎದುರಾಗುವ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಇಂದಿನ ಯುವಜನರಿಗಿದೆ. ‘ಹಂಡ್ರೆಡ್ ಇಯರ್ಸ್ ಯಂಗ್’ ಕೃತಿಯಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಕೇವಲ 20 ಮಂದಿಗೆ ಸೀಮಿತವಾಗಿಲ್ಲ. ಅವರಂತಹ ಕೋಟ್ಯಂತರ ಯುವಜನರ ಭಾವನೆಗಳನ್ನು ಈ ಕೃತಿ ಪ್ರತಿನಿಧಿಸುತ್ತದೆ. ಕೃತಿಗೆ ನೀಡಿರುವ ಶೀರ್ಷಿಕೆಯೂ ಸೂಕ್ತವಾಗಿದೆ ಎಂದು ಹೇಳಿದರು.
ಕಠಿಣ ಸಂದರ್ಭಗಳಲ್ಲಿಯೂ ಸಮಾಜದಲ್ಲಿ ಸಂವಾದದ ಮನೋಭಾವವನ್ನು ಬೆಳೆಸುವ ಕೆಲಸವನ್ನು ಸಂಘ ಮಾಡಿದೆ. ಮಣಿಪುರದಂತಹ ಪ್ರದೇಶಗಳಲ್ಲಿ ಯುವಜನರೊಂದಿಗೆ ಸಂಘ ನಡೆಸಿದ ಸಂವಾದ ಇದಕ್ಕೆ ಉದಾಹರಣೆಯಾಗಿದೆ. ಯುವಜನರು ಭಾರತವನ್ನು ಸರಿಯಾಗಿ ಅರಿತುಕೊಂಡರೆ ದೇಶದ ರಕ್ಷಣೆಗಾಗಿ ದೃಢವಾಗಿ ನಿಲ್ಲುತ್ತಾರೆ ಎಂಬುದು ಇತಿಹಾಸದ ಹಲವು ಘಟನೆಗಳಿಂದ ಸಾಬೀತಾಗಿದೆ ಎಂದರು.
ವ್ಯಕ್ತಿಗಳ ಅನುಭವಗಳ ಮೂಲಕ ಸಂಘದ ಶತಮಾನದ ಪಯಣ
ಕೃತಿಯ ಸಂಪಾದಕಿ ರಶ್ಮಿ ಸಾಮಂತ್ ಮಾತನಾಡಿ, ಈ ಪುಸ್ತಕದ ಸಂಪಾದಕಿಯಾಗಿರುವುದು ತಮ್ಮ ಜೀವನದ ಅತ್ಯಂತ ಗೌರವದ ಕ್ಷಣಗಳಲ್ಲಿ ಒಂದಾಗಿದೆ ಎಂದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರು ವರ್ಷಗಳ ಪಯಣವನ್ನು ಕೇವಲ ಸಂಘಟನೆಯ ಇತಿಹಾಸವಾಗಿ ನೋಡದೆ, ಅದರೊಂದಿಗೆ ಬೆಸೆದುಕೊಂಡಿರುವ ವ್ಯಕ್ತಿಗಳ ಬದುಕಿನ ಅನುಭವಗಳ ಮೂಲಕ ಪರಿಚಯಿಸುವುದು ಕೃತಿಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
1925ರಲ್ಲಿ ಸಂಘ ಸ್ಥಾಪನೆಯಾದಾಗಿನಿಂದ ಅದರ ಬೆಳವಣಿಗೆಯಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ. ಇತಿಹಾಸದ ವಿವಿಧ ಘಟ್ಟಗಳಲ್ಲಿ ದೇಶದ ದಿಕ್ಕನ್ನು ರೂಪಿಸುವಲ್ಲಿ ಯುವಕರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಇದೇ ಚಿಂತನೆಯ ಹಿನ್ನೆಲೆಯಲ್ಲಿ ಪುಸ್ತಕದ ಪರಿಕಲ್ಪನೆ ರೂಪುಗೊಂಡಿತು ಎಂದರು.
ಭಾರತ ಮತ್ತು ವಿದೇಶಗಳ 20 ಮಂದಿ ತಮ್ಮ ವೈಯಕ್ತಿಕ ಅನುಭವಗಳ ಮೂಲಕ ಸಂಘದೊಂದಿಗಿನ ಸಂಬಂಧವನ್ನು ದಾಖಲಿಸಿದ್ದಾರೆ. ಕೆಲವರು ತಂದೆ, ತಾತ ಮತ್ತು ಕುಟುಂಬದ ಹಿರಿಯರಿಂದ ಪಡೆದ ಪ್ರೇರಣೆಯನ್ನು ಹಂಚಿಕೊಂಡಿದ್ದರೆ, ಇನ್ನು ಕೆಲವರು ಸಂಘದೊಂದಿಗಿನ ತಮ್ಮದೇ ಅನುಭವಗಳು ಹಾಗೂ ಸಂವಾದಗಳನ್ನು ವಿವರಿಸಿದ್ದಾರೆ.
ಕೃತಕ ಬುದ್ಧಿಮತ್ತೆ ಮತ್ತು ಗೂಗಲ್ನಂತಹ ತಂತ್ರಜ್ಞಾನಗಳ ಯುಗದಲ್ಲಿಯೂ ಪುಸ್ತಕಗಳ ಪ್ರಸ್ತುತತೆ ಕಡಿಮೆಯಾಗುವುದಿಲ್ಲ. ತಂತ್ರಜ್ಞಾನ ಮಾಹಿತಿ ಒದಗಿಸಬಹುದು. ಆದರೆ ವ್ಯಕ್ತಿಗಳ ಜೀವನಾನುಭವ, ನೆನಪುಗಳು ಮತ್ತು ಭಾವನೆಗಳನ್ನು ಪುಸ್ತಕಗಳು ವಿಶಿಷ್ಟವಾಗಿ ದಾಖಲಿಸುತ್ತವೆ ಎಂದು ಹೇಳಿದರು.
ಪ್ರಚಾರಕ್ಕಿಂತ ಸೇವೆಗೆ ಆದ್ಯತೆ
ಸಂಘದ ಪ್ರಮುಖ ಮೌಲ್ಯಗಳಲ್ಲಿ ಒಂದಾದ ‘ಪ್ರಸಿದ್ಧಿ ಪರಾನ್ಮುಖತೆ’ಯನ್ನು ಉಲ್ಲೇಖಿಸಿದ ರಶ್ಮಿ ಸಾಮಂತ್, ವೈಯಕ್ತಿಕ ಪ್ರಚಾರ ಅಥವಾ ಮನ್ನಣೆಯನ್ನು ಬಯಸದೆ ಸಮಾಜದ ಹಿತಕ್ಕಾಗಿ ನಿರಂತರವಾಗಿ ಕೆಲಸ ಮಾಡುವುದೇ ಇದರ ಅರ್ಥವಾಗಿದೆ ಎಂದರು.
ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಸಂಘದ ಸಾಧನೆಗಳು ಅದರ ಒಟ್ಟು ಕಾರ್ಯದ ಒಂದು ಸಣ್ಣ ಭಾಗವಷ್ಟೇ. ತೆರೆಮರೆಯಲ್ಲಿ ನಡೆಯುವ ಸಾವಿರಾರು ಸೇವಾ ಕಾರ್ಯಗಳು ಸಮಾಜದ ಗಮನಕ್ಕೆ ಬರುವುದಿಲ್ಲ. ಇಂತಹ ಕಾರ್ಯಗಳೇ ಸಂಘದ ಕಾರ್ಯವೈಖರಿಯ ಪ್ರಮುಖ ಭಾಗವಾಗಿವೆ ಎಂದು ತಿಳಿಸಿದರು.
ವಿವಿಧ ಕ್ಷೇತ್ರಗಳ 20 ಸಾಧಕರ ಅನುಭವಗಳು
ಕೃತಿಯಲ್ಲಿ ಕಾನೂನು, ಸಿನಿಮಾ, ಕ್ರೀಡೆ, ಪತ್ರಿಕೋದ್ಯಮ, ಉದ್ಯಮ, ಸಾರ್ವಜನಿಕ ಜೀವನ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳ ವ್ಯಕ್ತಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಆದಿತ್ಯ ಶ್ರೀನಿವಾಸನ್ ಅವರು ಉಚ್ಚತಮ ನ್ಯಾಯಾಲಯದ ವಕೀಲರು ಹಾಗೂ ಹಾರ್ವರ್ಡ್ ಪದವೀಧರರಾಗಿದ್ದು, ಸಂಘದ ಒಡನಾಟದಿಂದ ಕಲಿತ ಜೀವನಪಾಠಗಳನ್ನು ದಾಖಲಿಸಿದ್ದಾರೆ. ಚಲನಚಿತ್ರ ನಿರ್ಮಾಪಕ ವಿಜಯ್ ಸುಬ್ರಮಣಿಯನ್ ಅವರು ಭಾರತದ ಸಾಂಸ್ಕೃತಿಕ ಆತ್ಮವನ್ನು ಜೀವಂತವಾಗಿಡುವಲ್ಲಿ ಸಂಘದ ಪಾತ್ರವನ್ನು ವಿವರಿಸಿದ್ದಾರೆ.
ಜರ್ಮನಿಯ ಹೆಸ್ಸೆನ್ ರಾಜ್ಯದ ಶಾಸಕರೊಬ್ಬರು ತಮ್ಮ ಎಡಪಂಥೀಯ ಹಿನ್ನೆಲೆಯ ನಡುವೆಯೂ ಸಂಘದ ಮೂಲಕ ಭಾರತೀಯ ಅಸ್ಮಿತೆಯನ್ನು ಕಂಡುಕೊಂಡ ಅನುಭವ ಹಾಗೂ ಫ್ರಾಂಕ್ಫರ್ಟ್ನಲ್ಲಿ ಶಾಖೆ ಆರಂಭಿಸಿದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನಟ ವಿಕ್ರಾಂತ್ ಮಸ್ಸಿ ಅವರು ಚಿತ್ರೀಕರಣದ ಸಂದರ್ಭದಲ್ಲಿ ದೂರದ ಪ್ರದೇಶಗಳಲ್ಲಿ ಕಂಡ ಸಂಘದ ಉಚಿತ ಶಿಕ್ಷಣ ಮತ್ತು ಸೇವಾ ಚಟುವಟಿಕೆಗಳ ಕುರಿತು ಬರೆದಿದ್ದಾರೆ. ಪತ್ರಕರ್ತೆ ರುಬಿಕಾ ಲಿಯಾಕತ್ ಅವರು ಜೈಪುರದ ಮುಸ್ಲಿಂ ಕುಟುಂಬದಲ್ಲಿ ಬೆಳೆದ ತಮ್ಮ ಅನುಭವ ಮತ್ತು ರೇಶಿಂಬಾಗ್ ಭೇಟಿಯ ಕುರಿತು ದಾಖಲಿಸಿದ್ದಾರೆ.
ಅಂಕಿತ್ ಗುಪ್ತಾ ಅವರು ಕೋವಿಡ್ ಸಂದರ್ಭದಲ್ಲಿ ದುರ್ಬಲ ವರ್ಗಗಳಿಗೆ ಸಂಘದಿಂದ ದೊರೆತ ನೆರವನ್ನು ವಿವರಿಸಿದ್ದಾರೆ. ಅರ್ಜುನ ಪ್ರಶಸ್ತಿ ಪುರಸ್ಕೃತ ಬಾಸ್ಕೆಟ್ಬಾಲ್ ಆಟಗಾರ ವಿಶೇಷ್ ರಘುವಂಶಿ ಅವರು ಶಾಖೆಯ ಅನುಭವದಿಂದ ಅಸಾಂಪ್ರದಾಯಿಕ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡ ಪ್ರೇರಣೆಯನ್ನು ಹಂಚಿಕೊಂಡಿದ್ದಾರೆ.
ಮುಂಬೈ ಮೂಲದ ಉದ್ಯಮಿ ಬೃಂದಾ ಘೋಟಕ್ ಅವರು ಸಂಘದ ನಿರ್ವಹಣಾ ಪದ್ಧತಿ ಮತ್ತು ಸಂಘಟನಾ ವ್ಯವಸ್ಥೆಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ವಾಮಿ ಸರಸ್ವತಿ ಸಾಗರ್ ಅವರು ಸಂಘದಿಂದ ಪಡೆದ ಮೌಲ್ಯಗಳು ಮತ್ತು ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಸೇವಾ ಚಟುವಟಿಕೆಗಳನ್ನು ವಿವರಿಸಿದ್ದಾರೆ.
ನಟಿ ಭಾಷಾ ಸುಂಬ್ಲಿ ಅವರು ಸ್ಥಳಾಂತರಗೊಂಡ ಕಾಶ್ಮೀರಿ ಪಂಡಿತರಿಗಾಗಿ ಸಂಘ ನಡೆಸಿದ ಶಿಬಿರಗಳೊಂದಿಗಿನ ತಮ್ಮ ಬಾಲ್ಯದ ಅನುಭವಗಳನ್ನು ದಾಖಲಿಸಿದ್ದಾರೆ. ವಿಭಜನೆಯ ಸಂದರ್ಭದಲ್ಲಿ ನಿರಾಶ್ರಿತರಾದ ಕುಟುಂಬದ ಮೂರನೇ ತಲೆಮಾರಿನ ಸದಸ್ಯ ನಿಖಿಲ್ ಛಾಬ್ರಾ ಅವರು ಸಂಘದೊಂದಿಗಿನ ಬಾಂಧವ್ಯವನ್ನು ವಿವರಿಸಿದ್ದಾರೆ.
ಯುವಜನರ ನೇತೃತ್ವದ ಮಾದರಿ ವಿಶ್ವಸಂಸ್ಥೆಯ ಉಪಕ್ರಮವನ್ನು ಮುನ್ನಡೆಸುವ ರಿಷಭ್ ಷಾ ಅವರು ನಾಗಪುರದಲ್ಲಿ ಕಂಡ ಶಿಸ್ತು ಮತ್ತು ಸಂಘಟನಾ ವ್ಯವಸ್ಥೆಯ ಬಗ್ಗೆ ಬರೆದಿದ್ದಾರೆ. ಒಲಿಂಪಿಕ್ ಪದಕ ವಿಜೇತೆ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ತಮ್ಮ ಅನುಭವಗಳನ್ನು ಕೃತಿಯ ಕೊನೆಯ ಲೇಖನದಲ್ಲಿ ಹಂಚಿಕೊಂಡಿದ್ದಾರೆ. ಇದಲ್ಲದೆ ಬ್ರಿಟಿಷ್ ವಿದ್ವಾಂಸರೊಬ್ಬರು ಯುರೋಪಿನ ಉದಾರವಾದಿ ದೃಷ್ಟಿಕೋನದಿಂದ ಸಂಘದ ಶತಮಾನದ ಪಯಣವನ್ನು ವಿಶ್ಲೇಷಿಸಿದ್ದಾರೆ.
ಸಾವಿರಾರು ಸಾಮಾನ್ಯ ದಿನಗಳ ಪರಿಶ್ರಮವೇ ಶತಮಾನದ ಇತಿಹಾಸ
ಸೈನಾ ನೆಹ್ವಾಲ್ ಅವರ ಲೇಖನದ ಅಂಶವನ್ನು ಉಲ್ಲೇಖಿಸಿದ ರಶ್ಮಿ ಸಾಮಂತ್, ಯಾವುದೇ ಸಂಸ್ಥೆಯ ನೂರು ವರ್ಷಗಳ ಇತಿಹಾಸವು ಬೆರಳೆಣಿಕೆಯಷ್ಟು ಅಸಾಧಾರಣ ದಿನಗಳಿಂದ ನಿರ್ಮಾಣವಾಗುವುದಿಲ್ಲ. ಬದಲಾಗಿ ಹತ್ತಾರು ಸಾವಿರ ಸಾಮಾನ್ಯ ದಿನಗಳ ನಿರಂತರ ಪರಿಶ್ರಮದಿಂದ ರೂಪುಗೊಳ್ಳುತ್ತದೆ ಎಂಬ ಸಂದೇಶವನ್ನು ವಿವರಿಸಿದರು.
ವಿಪತ್ತು, ಯುದ್ಧ, ಬರಗಾಲ ಮತ್ತು ಕೋವಿಡ್ನಂತಹ ಸಂಕಷ್ಟದ ಸಂದರ್ಭಗಳಲ್ಲಿ ಸಂಘದ ಸ್ವಯಂಸೇವಕರು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಕಾರ್ಯಗಳನ್ನು ನಿರ್ವಹಿಸುವ ಸಾವಿರಾರು ಕಾರ್ಯಕರ್ತರು ವೈಯಕ್ತಿಕವಾಗಿ ಪ್ರಸಿದ್ಧರಾಗದಿದ್ದರೂ ಅವರ ನಿರಂತರ ಪರಿಶ್ರಮವೇ ಸಂಘದ ಶತಮಾನದ ಪಯಣಕ್ಕೆ ಆಧಾರವಾಗಿದೆ ಎಂದರು.
1962ರ ಭಾರತ-ಚೀನಾ ಯುದ್ಧದ ನಂತರ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು 1963ರ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಲು ಸುಮಾರು 3,500 ಸಂಘದ ಸ್ವಯಂಸೇವಕರನ್ನು ಆಹ್ವಾನಿಸಿದ್ದ ಘಟನೆಯನ್ನೂ ಅವರು ಉಲ್ಲೇಖಿಸಿದರು. ಈ ಐತಿಹಾಸಿಕ ಕ್ಷಣದ ಛಾಯಾಚಿತ್ರವನ್ನು ಪುಸ್ತಕದ ಮುಖಪುಟದಲ್ಲಿ ಬಳಸಲಾಗಿದೆ ಎಂದು ತಿಳಿಸಿದರು.
ಅನುಭವಗಳ ಮೂಲಕ ಸಂಘದ ನಿರಂತರ ಪಯಣ
ತಾವು ಕೂಡ ಸ್ವಯಂಸೇವಕರೊಬ್ಬರ ಮಗಳಾಗಿ ತಮ್ಮ ಅನುಭವವನ್ನು ಪುಸ್ತಕದಲ್ಲಿ ದಾಖಲಿಸಿರುವುದಾಗಿ ರಶ್ಮಿ ಸಾಮಂತ್ ಹೇಳಿದರು. ಕೃತಿಯಲ್ಲಿರುವ ಬಹುತೇಕ ಲೇಖಕರು ವೃತ್ತಿಪರ ಬರಹಗಾರರಲ್ಲ. ಬದಲಾಗಿ ತಮ್ಮ ಜೀವನದಲ್ಲಿ ಕಂಡು, ಅನುಭವಿಸಿ ಮತ್ತು ಅರ್ಥೈಸಿಕೊಂಡ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಹೀಗಾಗಿ ಇದು ಕೇವಲ ಸಾಹಿತ್ಯಿಕ ಕೃತಿಯಲ್ಲದೆ, ವಿಭಿನ್ನ ವ್ಯಕ್ತಿಗಳ ಬದುಕಿನ ಅನುಭವಗಳನ್ನು ಓದುಗರಿಗೆ ತಲುಪಿಸುವ ಪ್ರಯತ್ನವಾಗಿದೆ ಎಂದರು.
ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಸಂಘವನ್ನು ನಿರಂತರವಾಗಿ ರೂಪುಗೊಳ್ಳುತ್ತಿರುವ ಮತ್ತು ಬೆಳೆಯುತ್ತಿರುವ ಪ್ರಕ್ರಿಯೆ ಎಂದು ವಿವರಿಸಿರುವುದನ್ನು ಸ್ಮರಿಸಿದ ಅವರು, ಸಂಘದ ನೂರು ವರ್ಷಗಳ ಪಯಣ ಅಂತಿಮ ಗುರಿಯಲ್ಲ. ಅದು ನಿರಂತರವಾಗಿ ಸಾಗುತ್ತಿರುವ ಸಮಾಜಮುಖಿ ಪ್ರಯಾಣವಾಗಿದೆ ಎಂದು ಹೇಳಿದರು.
‘100 ಇಯರ್ಸ್ ಯಂಗ್: ರಾಷ್ಟ್ರೀಯ ಸ್ವಯಂಸೇವಕ ಸಂಘ’ ಕೃತಿಯು ಸಂಘದ ಇತಿಹಾಸವನ್ನು ಘಟನೆಗಳು ಮತ್ತು ಸಾಧನೆಗಳ ಮೂಲಕ ಮಾತ್ರವಲ್ಲದೆ, ಅದರೊಂದಿಗೆ ಬದುಕಿದ ಹಾಗೂ ಬೆಸೆದುಕೊಂಡಿರುವ 20 ವಿಭಿನ್ನ ವ್ಯಕ್ತಿಗಳ ಅನುಭವಗಳ ಮೂಲಕ ಪರಿಚಯಿಸುವ ಪ್ರಯತ್ನವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ, ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ ಡಾ. ಎಂ. ಜಯಪ್ರಕಾಶ್, ಶಿಕ್ಷಣತಜ್ಞ ಹಾಗೂ ಚಿಂತಕ ಡಾ. ಪಿ.ವಿ. ಕೃಷ್ಣಭಟ್, ಕರ್ನಾಟಕ ಮತ್ತು ಉತ್ತರ ಪ್ರಾಂತ ಪ್ರಚಾರ ಪ್ರಮುಖ್ ಅರುಣ್ ಕುಮಾರ್, ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಸೇರಿದಂತೆ ಚಿಂತಕರು, ಸಾಮಾಜಿಕ ಕಾರ್ಯಕರ್ತರು, ಲೇಖಕರು ಹಾಗೂ ಯುವ ಬರಹಗಾರರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.