ಮಹಿಳೆಯರಿಗೆ ಸಮಾನ ಅವಕಾಶ, ನಿರ್ಧಾರ ಪ್ರಕ್ರಿಯೆಯಲ್ಲಿ ಪರಿಣಾಮಕಾರಿ ಪಾಲ್ಗೊಳ್ಳುವಿಕೆ ಅಗತ್ಯ: ಓಂ ಬಿರ್ಲಾ
ತಂತ್ರಜ್ಞಾನ ಯುಗದಲ್ಲಿ ಮಹಿಳೆಯರ ಡಿಜಿಟಲ್ ಸಬಲೀಕರಣ, ಸುರಕ್ಷಿತ ಅಂತರ್ಜಾಲ ವ್ಯವಸ್ಥೆ ನಮ್ಮೆಲ್ಲರ ಹೊಣೆ
-om-birla-promises-early-imple


ಬೆಂಗಳೂರು, 17 ನವೆಂಬರ್ (ಹಿ.ಸ.):

ಮಹಿಳೆಯರಿಗೆ ಗ್ರಾಮ ಪಂಚಾಯಿತಿಯಿಂದ ಸಂಸತ್ತಿನವರೆಗೆ ಸಮಾನ ಅವಕಾಶ, ಸುರಕ್ಷಿತ ವಾತಾವರಣ ಹಾಗೂ ನಿರ್ಧಾರ ಪ್ರಕ್ರಿಯೆಯಲ್ಲಿ ಪರಿಣಾಮಕಾರಿ ಪಾಲ್ಗೊಳ್ಳುವಿಕೆ ದೊರೆತಾಗ ಪ್ರಜಾಪ್ರಭುತ್ವದ ಬೇರುಗಳು ಮತ್ತಷ್ಟು ಗಟ್ಟಿಯಾಗಲಿವೆ ಎಂದು ಲೋಕಸಭಾಧ್ಯಕ್ಷ ಓಂ ಬಿರ್ಲಾ ಹೇಳಿದ್ದಾರೆ.

ಬೆಂಗಳೂರಿನ ವಿಧಾನಸೌಧದಲ್ಲಿ ಆಯೋಜಿಸಿದ್ದ ಮೊದಲ ಕಾಮನ್ವೆಲ್ತ್ ಮಹಿಳಾ ಸಂಸದೀಯ ಸದಸ್ಯರ ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಕಾಮನ್ವೆಲ್ತ್ ರಾಷ್ಟ್ರಗಳ ಮಹಿಳಾ ಸಂಸದರು ಹಾಗೂ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಆಗಮಿಸಿದ್ದ ಶಾಸಕರು ಮತ್ತು ಜನಪ್ರತಿನಿಧಿಗಳೊಂದಿಗೆ ಮಹಿಳಾ ನಾಯಕತ್ವ ಹಾಗೂ ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಅವರ ಪರಿಣಾಮಕಾರಿ ಪಾಲ್ಗೊಳ್ಳುವಿಕೆ ಕುರಿತು ವಿಚಾರಗಳನ್ನು ಹಂಚಿಕೊಂಡರು.

ಭಗವಾನ್ ಬಸವೇಶ್ವರರ ಅನುಭವ ಮಂಟಪದ ಶ್ರೇಷ್ಠ ಪ್ರಜಾಪ್ರಭುತ್ವ ಪರಂಪರೆ ಹಾಗೂ ಕಿತ್ತೂರಿನ ವೀರರಾಣಿ ಚೆನ್ನಮ್ಮ ಅವರ ಅಪ್ರತಿಮ ಶೌರ್ಯಕ್ಕೆ ಸಾಕ್ಷಿಯಾಗಿರುವ ಕರ್ನಾಟಕದ ನೆಲವು ಜ್ಞಾನ, ನಾವೀನ್ಯತೆ ಮತ್ತು ಪ್ರಗತಿಪರ ಚಿಂತನೆಗೆ ವಿಶಿಷ್ಟ ಗುರುತನ್ನು ಹೊಂದಿದೆ.

ಭಾರತದ ಸ್ವಾತಂತ್ರ್ಯ ಹೋರಾಟ, ಸಂವಿಧಾನ ರಚನೆ ಹಾಗೂ ರಾಷ್ಟ್ರದ ಪುನರ್ ನಿರ್ಮಾಣದಲ್ಲಿ ಮಹಿಳೆಯರ ಕೊಡುಗೆ ಅವಿಸ್ಮರಣೀಯವಾಗಿದೆ. ಇಂದು ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ಬಾಹ್ಯಾಕಾಶ, ರಕ್ಷಣಾ ಕ್ಷೇತ್ರ ಮತ್ತು ರಾಜಕೀಯ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ತಮ್ಮ ಪ್ರತಿಭೆ ಹಾಗೂ ನಾಯಕತ್ವದ ಮೂಲಕ ಹೊಸ ಸಾಧನೆಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಪ್ರಸ್ತುತ ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಮಾಧ್ಯಮಗಳ ಜವಾಬ್ದಾರಿಯುತ ಹಾಗೂ ನೈತಿಕ ಬಳಕೆಯಿಂದ ನೀತಿ ನಿರೂಪಣೆ, ಶಾಸನಸಭೆಗಳ ಕಾರ್ಯಕಲಾಪ, ಜನಸಂವಾದ ಮತ್ತು ಉತ್ತಮ ಆಡಳಿತವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಬಹುದು.

ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಈ ಯುಗದಲ್ಲಿ ಮಹಿಳೆಯರ ಡಿಜಿಟಲ್ ಸಬಲೀಕರಣ ಹಾಗೂ ಅವರಿಗೆ ಸುರಕ್ಷಿತ ಅಂತರ್ಜಾಲ ವಾತಾವರಣ ಕಲ್ಪಿಸುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಮಹಿಳಾ ಸಂಸದರು ಕೇವಲ ಜನಪ್ರತಿನಿಧಿಗಳಲ್ಲ, ಅವರೇ ಒಂದು ಸಂಸ್ಥೆಯಿದ್ದಂತೆ. ಅನುಭವಿ ಮಹಿಳಾ ಜನಪ್ರತಿನಿಧಿಗಳ ಮಾರ್ಗದರ್ಶನ, ನಿರಂತರ ಸಂವಾದ ಮತ್ತು ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳ ಮೂಲಕ ಹೊಸ ಪೀಳಿಗೆಯ ನಾಯಕತ್ವಕ್ಕೆ ಸೂಕ್ತ ದಿಕ್ಕು ಹಾಗೂ ಶಕ್ತಿ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಮಹಿಳಾ ನಾಯಕತ್ವದ ಶಕ್ತಿ, ಸೂಕ್ಷ್ಮ ಸಂವೇದನೆ ಮತ್ತು ಹೊಣೆಗಾರಿಕೆಯಿಂದ ಭಾರತದ ಪ್ರಜಾಪ್ರಭುತ್ವವು ಹೆಚ್ಚು ಒಳಗೊಳ್ಳುವಿಕೆ, ಪಾರದರ್ಶಕತೆ, ಉತ್ತರದಾಯಿತ್ವ ಹಾಗೂ ಸಬಲೀಕರಣವನ್ನು ಹೊಂದಲಿದೆ.

ಇದೇ ಸಾಮರ್ಥ್ಯವು 2047ರ ವಿಕಸಿತ ಭಾರತ ಸಂಕಲ್ಪವನ್ನು ಸಾಕಾರಗೊಳಿಸುವ ಪ್ರಮುಖ ಆಧಾರವಾಗಲಿದೆ ಎಂದು ಓಂ ಬಿರ್ಲಾ ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande