ದೊಡ್ಡ ಬೆಕ್ಕುಗಳ ಸಂರಕ್ಷಣೆ ಹವಾಮಾನ ಬದಲಾವಣೆ ತಗ್ಗಿಸಲು ಪರಿಣಾಮಕಾರಿ ಮಾರ್ಗ: ಭೂಪೇಂದ್ರ ಯಾದವ್
ಅಂಟಲ್ಯ (ಟರ್ಕಿಯೆ), 17 ನವೆಂಬರ್(ಹಿ.ಸ.): ಹುಲಿ, ಸಿಂಹ, ಚಿರತೆ ಸೇರಿದಂತೆ ದೊಡ್ಡ ಬೆಕ್ಕುಗಳ ಸಂರಕ್ಷಣೆಯು ಹವಾಮಾನ ಬದಲಾವಣೆಯ ಪರಿಣಾಮ ತಗ್ಗಿಸುವುದರ ಜೊತೆಗೆ ಪರಿಸರ ವ್ಯವಸ್ಥೆಯ ಬಲವರ್ಧನೆಗೆ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾ
केंद्रीय पर्यावरण, वन एवं जलवायु परिवर्तन मंत्री भूपेन्द्र यादव ने तुर्किये के एंटाल्या में संयुक्त राष्ट्र जलवायु परिवर्तन सम्मेलन (कॉप-31) के दौरान बिग कैट के संरक्षण और जलवायु परिवर्तन के प्रभावों को कम करने में इसकी भूमिका पर आयोजित उच्चस्तरीय मंत्रीस्तरीय कार्यक्रम के दौरान ।


ಅಂಟಲ್ಯ (ಟರ್ಕಿಯೆ), 17 ನವೆಂಬರ್(ಹಿ.ಸ.):

ಹುಲಿ, ಸಿಂಹ, ಚಿರತೆ ಸೇರಿದಂತೆ ದೊಡ್ಡ ಬೆಕ್ಕುಗಳ ಸಂರಕ್ಷಣೆಯು ಹವಾಮಾನ ಬದಲಾವಣೆಯ ಪರಿಣಾಮ ತಗ್ಗಿಸುವುದರ ಜೊತೆಗೆ ಪರಿಸರ ವ್ಯವಸ್ಥೆಯ ಬಲವರ್ಧನೆಗೆ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಹೇಳಿದರು.

ಟರ್ಕಿಯೆಯ ಅಂಟಲ್ಯದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಾವೇಶದ 31ನೇ ಅಧಿವೇಶನದ ಅಂಗವಾಗಿ ಆಯೋಜಿಸಿದ್ದ ‘ದೊಡ್ಡ ಬೆಕ್ಕುಗಳು: ಹವಾಮಾನ ಬದಲಾವಣೆ ತಗ್ಗಿಸುವಲ್ಲಿ ಪಾತ್ರ’ ಎಂಬ ಉನ್ನತ ಮಟ್ಟದ ಸಚಿವರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೇಂದ್ರ ಸಚಿವಾಲಯ ಮತ್ತು ಅಂತಾರಾಷ್ಟ್ರೀಯ ದೊಡ್ಡ ಬೆಕ್ಕುಗಳ ಒಕ್ಕೂಟ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದ್ದವು. ನೇಪಾಳ, ವೆನೆಜುವೆಲಾ, ಕಾಂಬೋಡಿಯಾ, ಶ್ರೀಲಂಕಾ ಸೇರಿದಂತೆ ಹಲವು ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ದೊಡ್ಡ ಬೆಕ್ಕುಗಳ ಏಳು ಪ್ರಮುಖ ಪ್ರಭೇದಗಳು ಮತ್ತು ಅವುಗಳ ನೈಸರ್ಗಿಕ ಆವಾಸಸ್ಥಾನಗಳ ಸಂರಕ್ಷಣೆಯು ಹವಾಮಾನ ಬದಲಾವಣೆ ತಗ್ಗಿಸುವುದು, ಪರಿಸರ ವ್ಯವಸ್ಥೆಯ ಸ್ಥಿರತೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಹೇಗೆ ನೆರವಾಗುತ್ತದೆ ಎಂಬ ಕುರಿತು ಚರ್ಚಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಕೈಗೊಂಡಿರುವ ವನ್ಯಜೀವಿ ಸಂರಕ್ಷಣಾ ಪ್ರಯತ್ನಗಳು, ವಿಶೇಷವಾಗಿ ಚೀತಾ ಮರುಪರಿಚಯ ಯೋಜನೆಯನ್ನು ಪ್ರತಿನಿಧಿಗಳು ಶ್ಲಾಘಿಸಿದರು.

ಅಂತಾರಾಷ್ಟ್ರೀಯ ದೊಡ್ಡ ಬೆಕ್ಕುಗಳ ಒಕ್ಕೂಟವು ಜಾಗತಿಕ ಮಟ್ಟದಲ್ಲಿ ಈ ಪ್ರಭೇದಗಳ ಸಂರಕ್ಷಣೆಗೆ ವೇದಿಕೆಯಾಗಿದೆ. ಭಾರತದ ಯಶಸ್ವಿ ಸಂರಕ್ಷಣಾ ಮಾದರಿಯನ್ನು ಹಂಚಿಕೊಳ್ಳುವುದು, ಜ್ಞಾನ ವಿನಿಮಯ, ಅಂತಾರಾಷ್ಟ್ರೀಯ ಸಹಕಾರ ಮತ್ತು ಏಳು ಪ್ರಭೇದಗಳ ಸಂರಕ್ಷಣೆಗೆ ಸಾಮರ್ಥ್ಯ ವೃದ್ಧಿಸುವುದು ಇದರ ಉದ್ದೇಶವಾಗಿದೆ ಎಂದು ಯಾದವ್ ತಿಳಿಸಿದರು.

ದೊಡ್ಡ ಬೆಕ್ಕುಗಳು ನೇರವಾಗಿ ಇಂಗಾಲವನ್ನು ಹೀರಿಕೊಳ್ಳುವುದಿಲ್ಲ. ಆದರೆ ಅವುಗಳ ಸಂರಕ್ಷಣೆಯಿಂದ ಅರಣ್ಯ, ಹುಲ್ಲುಗಾವಲು, ಜೌಗು ಪ್ರದೇಶ ಮತ್ತು ಪರ್ವತ ಪರಿಸರ ವ್ಯವಸ್ಥೆಗಳನ್ನು ರಕ್ಷಿಸಬಹುದು. ಈ ಪ್ರದೇಶಗಳಲ್ಲಿ ಅಪಾರ ಪ್ರಮಾಣದ ಇಂಗಾಲ ಸಂಗ್ರಹವಾಗಿರುತ್ತದೆ. ನೈಸರ್ಗಿಕ ಆವಾಸಸ್ಥಾನಗಳ ನಾಶದಿಂದ ಉಂಟಾಗುವ ಇಂಗಾಲದ ಹೊರಸೂಸುವಿಕೆಯನ್ನು ತಡೆಯಲು ಮತ್ತು ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಸಾಮರ್ಥ್ಯ ಹೆಚ್ಚಿಸಲು ಇದು ನೆರವಾಗುತ್ತದೆ ಎಂದು ವಿವರಿಸಿದರು.

ಭಾರತದಲ್ಲಿ 58 ಹುಲಿ ಸಂರಕ್ಷಿತ ಪ್ರದೇಶಗಳು ಸುಮಾರು 85 ಸಾವಿರ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿವೆ. ಇವು ವಿಶಾಲ ಅರಣ್ಯ ಪ್ರದೇಶಗಳು ಮತ್ತು ಅವುಗಳಲ್ಲಿನ ಇಂಗಾಲ ಸಂಗ್ರಹವನ್ನು ರಕ್ಷಿಸುತ್ತಿವೆ. ಇಂಗಾಲ ಹೀರಿಕೊಳ್ಳುವಿಕೆ, ನೀರಿನ ಶುದ್ಧೀಕರಣ, ಮಣ್ಣಿನ ಸಂರಕ್ಷಣೆ ಮತ್ತು ಅಂತರ್ಜಲ ಮರುಪೂರಣದಂತಹ ಪ್ರಮುಖ ಪರಿಸರ ಸೇವೆಗಳನ್ನು ಒದಗಿಸುತ್ತಿವೆ. ಈ ಪ್ರದೇಶಗಳಿಂದ 600ಕ್ಕೂ ಹೆಚ್ಚು ನದಿಗಳು ಹುಟ್ಟುತ್ತವೆ ಅಥವಾ ಹರಿದುಹೋಗುತ್ತವೆ ಎಂದು ಸಚಿವರು ಮಾಹಿತಿ ನೀಡಿದರು.

ವನ್ಯಜೀವಿ ಸಂರಕ್ಷಣಾ ಕಾಯ್ದೆ-1972 ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಕಾನೂನುಬದ್ಧ ವ್ಯವಸ್ಥೆಯ ಬೆಂಬಲದೊಂದಿಗೆ ಜಾರಿಯಲ್ಲಿರುವ ‘ಹುಲಿ ಯೋಜನೆ’ ಸಂರಕ್ಷಣೆಗೆ ಬಲವಾದ ವ್ಯವಸ್ಥೆ ರೂಪಿಸಿದೆ. 2022ರಲ್ಲಿ ಭಾರತದಲ್ಲಿನ ಹುಲಿಗಳ ಸಂಖ್ಯೆ 3,682ಕ್ಕೆ ಏರಿದ್ದು, ಇದು ವಿಶ್ವದ ಒಟ್ಟು ಕಾಡು ಹುಲಿಗಳ ಸಂಖ್ಯೆಯ ಶೇ.70ಕ್ಕೂ ಅಧಿಕವಾಗಿದೆ ಎಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರಂತರ ಅನುದಾನ, ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಯ ಸೇವೆ, ತಂತ್ರಜ್ಞಾನ ಆಧಾರಿತ ನಿಗಾ, ವೈಜ್ಞಾನಿಕ ನಿರ್ವಹಣೆ ಹಾಗೂ ಸ್ಥಳೀಯ ಸಮುದಾಯಗಳ ಪಾಲ್ಗೊಳ್ಳುವಿಕೆ ಈ ಸಾಧನೆಗೆ ಪ್ರಮುಖ ಕಾರಣಗಳಾಗಿವೆ. ಹುಲಿ ಸಂರಕ್ಷಣಾ ಯೋಜನೆಯಿಂದ ಪ್ರತಿ ವರ್ಷ ಸುಮಾರು 60 ಲಕ್ಷ ಮಾನವ-ದಿನಗಳ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿದ್ದು, ಸ್ಥಳೀಯ ಸಮುದಾಯಗಳ ಜೀವನೋಪಾಯಕ್ಕೂ ನೆರವಾಗುತ್ತಿದೆ ಎಂದು ಭೂಪೇಂದ್ರ ಯಾದವ್ ಹೇಳಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande