
ಬೆಂಗಳೂರು, 16 ನವೆಂಬರ್ (ಹಿ.ಸ.):
ಪತ್ನಿ ತನ್ನನ್ನು ತೊರೆದು ತವರು ಮನೆಗೆ ತೆರಳಿದ್ದರಿಂದ ಆಕ್ರೋಶಗೊಂಡ ವ್ಯಕ್ತಿಯೊಬ್ಬ ನಗರದ ಹೊರವಲಯದಲ್ಲಿ ಐದಕ್ಕೂ ಹೆಚ್ಚು ಗುಜರಿ ಅಂಗಡಿಗಳು ಹಾಗೂ ಗೋದಾಮುಗಳಿಗೆ ಬೆಂಕಿ ಹಚ್ಚಿರುವ ಘಟನೆ ಬೆಳಕಿಗೆ ಬಂದಿದೆ.
ಈ ಅಗ್ನಿ ಅವಘಡದಲ್ಲಿ ಗೋದಾಮಿನೊಳಗೆ ಮಲಗಿದ್ದ ಕಾರ್ಮಿಕನೊಬ್ಬ ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ತಮಿಳುನಾಡು ಮೂಲದ ಜೀವನ್ ರಾಜ್ (35) ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಸುಧ್ದಗುಂಟೆಪಾಳ್ಯದಲ್ಲಿ ವಾಸವಾಗಿದ್ದು, ತರಕಾರಿ ವ್ಯಾಪಾರ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಜೀವನ್ ರಾಜ್ ಮತ್ತು ಆತನ ಪತ್ನಿ ನಡುವೆ ಕೌಟುಂಬಿಕ ಕಲಹವಿತ್ತು. ಕಳೆದ ಅಕ್ಟೋಬರ್ನಲ್ಲಿ ಪತ್ನಿ ಮಗನೊಂದಿಗೆ ಆತನನ್ನು ತೊರೆದು ಆನೇಕಲ್ನಲ್ಲಿರುವ ತನ್ನ ತವರು ಮನೆಗೆ ತೆರಳಿದ್ದಳು.
ಇದರಿಂದ ಮನನೊಂದಿದ್ದ ಜೀವನ್ ರಾಜ್, ಮದ್ಯದ ಅಮಲಿನಲ್ಲಿ ಅತ್ತೆಯ ಮನೆಗೆ ತೆರಳಿದ್ದಾನೆ. ಈ ವೇಳೆ ಪತ್ನಿ ಆತನನ್ನು ತರಾಟೆಗೆ ತೆಗೆದುಕೊಂಡು ಮನೆಯೊಳಗೆ ಪ್ರವೇಶಿಸಲು ನಿರಾಕರಿಸಿದ್ದಾಳೆ ಎನ್ನಲಾಗಿದೆ.
ಇದರಿಂದ ಮತ್ತಷ್ಟು ಆಕ್ರೋಶಗೊಂಡ ಜೀವನ್ ರಾಜ್, ವಾಪಸ್ ಮನೆಗೆ ತೆರಳುವ ಮಾರ್ಗಮಧ್ಯೆ ಬೆಂಕಿಪೊಟ್ಟಣ ಬಳಸಿ ಗುಜರಿ ಅಂಗಡಿಗಳು ಹಾಗೂ ಗೋದಾಮುಗಳಿಗೆ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ತಿಬೆಲೆ ಮತ್ತು ಆನೇಕಲ್ನಲ್ಲಿ ತಲಾ ಎರಡು ಹಾಗೂ ಜಿಗಣಿಯಲ್ಲಿ ಒಂದು ಸೇರಿದಂತೆ ಹಲವು ಕಡೆ ಅಗ್ನಿ ಅವಘಡಗಳು ಸಂಭವಿಸಿದ್ದವು. ಆರಂಭದಲ್ಲಿ ಅಂಗಡಿ ಮಾಲೀಕರು ಇವುಗಳನ್ನು ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡಗಳೆಂದೇ ಭಾವಿಸಿದ್ದರು.
ಆದರೆ, ನವೆಂಬರ್ 1ರಂದು ಅತ್ತಿಬೆಲೆಯಲ್ಲಿ ಸಂಭವಿಸಿದ ಎರಡು ಅಗ್ನಿ ಅವಘಡಗಳ ಪೈಕಿ ಒಂದು ಗೋದಾಮಿನಲ್ಲಿ ಮಲಗಿದ್ದ ಮಣಿಕಂಠ ಎಂಬ ಕಾರ್ಮಿಕ ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದ.
ಈ ಘಟನೆಗಳ ಕುರಿತು ತನಿಖೆ ಕೈಗೊಂಡ ಅತ್ತಿಬೆಲೆ ಪೊಲೀಸರು 120ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.
ಈ ವೇಳೆ ಗುಜರಿ ಅಂಗಡಿಗಳು ಹಾಗೂ ಗೋದಾಮುಗಳ ಸುತ್ತ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯ ಸುಳಿವು ಲಭಿಸಿದೆ. ಅದರ ಆಧಾರದ ಮೇಲೆ ತನಿಖೆ ಮುಂದುವರಿಸಿದ ಪೊಲೀಸರು ಶುಕ್ರವಾರ ಜೀವನ್ ರಾಜ್ನನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಪತ್ನಿಯೊಂದಿಗಿನ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾನೇ ವಿವಿಧೆಡೆ ಬೆಂಕಿ ಹಚ್ಚಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R