
ಕೋಲಾರ, 16 ನವೆಂಬರ್ (ಹಿ.ಸ.):
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಕ್ರೀಡೆ ಮಹತ್ವದ ಪಾತ್ರ ವಹಿಸುತ್ತದೆ. ಕ್ರೀಡೆಯು ಕೇವಲ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಸಾಧನವಲ್ಲ; ಅದು ಶಿಸ್ತು, ಆತ್ಮವಿಶ್ವಾಸ, ನಾಯಕತ್ವ, ಸಮಯಪ್ರಜ್ಞೆ ಹಾಗೂ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸುವ ಉತ್ತಮ ವೇದಿಕೆಯಾಗಿದೆ ಎಂದು ಜೆಡಿಎಸ್ ಮುಖಂಡ ಸಿ.ಎಂ.ಆರ್. ಶ್ರೀನಾಥ್ ಅಭಿಪ್ರಾಯಪಟ್ಟರು.
ಎಸ್.ಡಿ.ಸಿ. ಪದವಿ ಪೂರ್ವ ಕಾಲೇಜು, ಕೋಲಾರ ಹಾಗೂ ಟಾಪ್ ಕೋಚ್, ಬೆಂಗಳೂರು ಇವರ ಸಹಯೋಗದಲ್ಲಿ ೨೦೨೬-೨೭ನೇ ಸಾಲಿನ ವಾರ್ಷಿಕ ಕ್ರೀಡೋತ್ಸವವನ್ನು ಮಕ್ಕಳ ದಿನಾಚರಣೆಯ ಅಂಗವಾಗಿ ನಗರದ ಹೊರವಲಯದ ಛತ್ರಕೋಡಿಹಳ್ಳಿ ಸಮೀಪವಿರುವ ಮಾರುತಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.
ಎಸ್.ಡಿ.ಸಿ. ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಡಾ. ಉಷಾ ಗಂಗಾಧರ್ ಪಾರಿವಾಳಗಳನ್ನು ಹಾರಿ ಬಿಡುವುದರೊಂದಿಗೆ ಮತ್ತು ಸಮೂಹ ಸಂಸ್ಥೆಗಳ ಅಧ್ಯಕ್ಷ ಗಂಗಾಧರ್ ರವರು ಕ್ರೀಡಾ ಜ್ಯೋತಿಯನ್ನು ಸ್ವೀಕರಿಸುವ ಮೂಲಕ ಕ್ರೀಡೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ನಂತರ ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಜ್ಞಾವಿಧಿಯನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥ ವೇಣುಗೋಪಾಲ್ ನೆರವೇರಿಸಿದರು.
ಡಾ. ಉಷಾ ಗಂಗಾಧರ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಣದ ಜೊತೆಗೆ ಕ್ರೀಡೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಸ್ಪರ್ಧಾ ಮನೋಭಾವ, ಶಿಸ್ತು, ಪರಸ್ಪರ ಸಹಕಾರ ಮತ್ತು ತಂಡದ ಒಗ್ಗಟ್ಟನ್ನು ಬೆಳೆಸುತ್ತವೆ. ಗೆಲುವಿನ ಸಂದರ್ಭದಲ್ಲಿ ವಿನಯವನ್ನೂ, ಸೋಲಿನ ಸಂದರ್ಭದಲ್ಲಿ ಧೈರ್ಯವನ್ನೂ ಮೈಗೂಡಿಸಿಕೊಳ್ಳುವುದು ನಿಜವಾದ ಕ್ರೀಡಾಸ್ಫೂರ್ತಿಯಾಗಿದೆ ಎಂಬ ಸಂದೇಶವನ್ನು ನೀಡಿದರು.
ಕ್ರೀಡೋತ್ಸವದಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿಭಾಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡರು. ವಿದ್ಯಾರ್ಥಿನಿಯರ ೧೦೦ ಮೀಟರ್ ಓಟದ ಸ್ಪರ್ಧೆ, ವಾಲಿಬಾಲ್, ಥ್ರೋಬಾಲ್ ಕ್ರಿಕೆಟ್, ಚೆಸ್ ಹಾಗೂ ಕೇರಂ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಟಾಪ್ ಕೋಚ್ನ ನಿರ್ದೇಶಕ ರಾಮನಾಥ್, ಜಗದೀಶ್, ಹರೀಶ್, ಎಸ್.ಡಿ.ಸಿ. ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳು ದೈಹಿಕ ಶಿಕ್ಷಕರು ಬೋಧಕ, ಬೋಧಕೇತರ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್