ಕನ್ನಡ ಭಾಷೆ, ಸಂಸ್ಕೃತಿಯನ್ನು ಮರೆಯದೆ ಪೋಷಿಸಿಕೊಂಡು ಬಂದವರು ಡಾ. ವೆಂಕಟಸ್ವಾಮಿ: ಎನ್.ಸಿ. ಮುನಿಯಪ್ಪ
ಕೋಲಾರ,16 ನವೆಂಬರ್ (ಹಿ.ಸ.) ವೃತ್ತಿಜೀವನದ ಬಹುಪಾಲು ಸಮಯವನ್ನು ಉತ್ತರ ಭಾರತದಲ್ಲಿ ಕಳೆದರೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಮರೆಯದೆ ಪೋಷಿಸಿಕೊಂಡು ಬಂದವರು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆಯ ನಿವೃತ್ತ ಭೂವಿಜ್ಞಾನಿ ಹಾಗೂ ಉಪ ಮಹಾನಿರ್ದೇಶಕ ಡಾ. ಎಂ. ವೆಂಕಟಸ್ವಾಮಿ ಎಂದು ರಾಜ್ಯ ಚುನಾವ
ಡಾ. ವೆಂಕಟಸ್ವಾಮಿ ಅವರ ಜೀವನಚರಿತ್ರೆ ಕೃತಿ ‘ನೂರಾರು ಮಹನೀಯರು ಸಾವಿರಾರು ಹೆಜ್ಜೆಗಳು’ ಪುಸ್ತಕವನ್ನು ಕೆಜಿಎಫ್ ಕ್ಲಬ್ನಲ್ಲಿ ರಾಜ್ಯ ಚುನಾವಣಾ ಆಯೋಗದ ಮಾಜಿ ಆಯುಕ್ತ ಎನ್.ಸಿ. ಮುನಿಯಪ್ಪ ಹಾಗೂ ಇತರರು ಬಿಡುಗಡೆ ಮಾಡಿದರು.


ಕೋಲಾರ,16 ನವೆಂಬರ್ (ಹಿ.ಸ.)

ವೃತ್ತಿಜೀವನದ ಬಹುಪಾಲು ಸಮಯವನ್ನು ಉತ್ತರ ಭಾರತದಲ್ಲಿ ಕಳೆದರೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಮರೆಯದೆ ಪೋಷಿಸಿಕೊಂಡು ಬಂದವರು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆಯ ನಿವೃತ್ತ ಭೂವಿಜ್ಞಾನಿ ಹಾಗೂ ಉಪ ಮಹಾನಿರ್ದೇಶಕ ಡಾ. ಎಂ. ವೆಂಕಟಸ್ವಾಮಿ ಎಂದು ರಾಜ್ಯ ಚುನಾವಣಾ ಆಯೋಗದ ಮಾಜಿ ಆಯುಕ್ತ ಎನ್.ಸಿ. ಮುನಿಯಪ್ಪ ಅಭಿಪ್ರಾಯಪಟ್ಟರು.

ಕೆಜಿಎಫ್ ನಗರದ ಬಿಜಿಎಂಎಲ್ ಸಂಸ್ಥೆಯ ಕೆಜಿಎಫ್ ಕ್ಲಬ್‌ನಲ್ಲಿ ನಡೆದ ಡಾ. ಎಂ. ವೆಂಕಟಸ್ವಾಮಿ ಅವರ ಜೀವನಚರಿತ್ರೆ ‘ನೂರಾರು ಮಹನೀಯರು ಸಾವಿರಾರು ಹೆಜ್ಜೆಗಳು’ ಕೃತಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

35 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಪ್ರತಿದಿನವೂ ದಿನಚರಿ ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದರಿಂದ ಇಂದು 40ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಲು ಡಾ. ವೆಂಕಟಸ್ವಾಮಿ ಅವರಿಗೆ ಸಾಧ್ಯವಾಗಿದೆ. ಯಾವುದೇ ಸಾಹಿತಿಗೂ ಕಡಿಮೆಯಿಲ್ಲದ ಅಸಾಧಾರಣ ವ್ಯಕ್ತಿತ್ವ ಅವರದ್ದಾಗಿದೆ. ಅವರ ಭಾಷೆ, ಭಾವನೆ ಮತ್ತು ಬರವಣಿಗೆಯ ಶೈಲಿ ವಿಶಿಷ್ಟವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಗ್ರಾಮೀಣ ಪ್ರದೇಶದ ಬಡ ಕುಟುಂಬದಲ್ಲಿ ಜನಿಸಿದ ವೆಂಕಟಸ್ವಾಮಿ ಅವರು ಯಾರನ್ನೂ ಅವಲಂಬಿಸದೆ ಸ್ವಂತ ಶಕ್ತಿ ಮತ್ತು ಸ್ವಾಭಿಮಾನದಿಂದ ಜೀವನದ ಪ್ರತಿಯೊಂದು ಮೆಟ್ಟಿಲನ್ನೂ ಏರಿದ್ದಾರೆ. ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆಯ ಉಪ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ ಜಿಲ್ಲೆಯ ಮೊದಲಿಗರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನೂ ಬೆಲ್ಲದ ಉಂಡೆಯನ್ನು ಸವಿದಂತೆ ಅನುಭವಿಸಿದ್ದಾರೆ ಎಂದು ಅವರ ಜೀವನಯಾನವನ್ನು ಬಣ್ಣಿಸಿದರು.

ಕೃತಿಯ ಕುರಿತು ಮಾತನಾಡಿದ ಲೇಖಕಿ ಡಾ. ಎಚ್.ಎಲ್. ಪುಷ್ಪ, ಡಾ. ವೆಂಕಟಸ್ವಾಮಿ ಅವರ ಜೀವನಚರಿತ್ರೆ ಕೇವಲ ಜೀವನಗಾಥೆಯಲ್ಲ, ಅದೊಂದು ಗೆಲುವಿನ ಸಕಾರಾತ್ಮಕ ಕಥನವಾಗಿದೆ. ವೈಜ್ಞಾನಿಕ ಬರಹಗಾರರಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅವರು, ತಮ್ಮ ಜೀವನವನ್ನೇ ಒಂದು ಪಯಣವಾಗಿ ಅನುಭವಿಸಿದ್ದಾರೆ. ಅವರ ಸಾಹಿತ್ಯಿಕ ಹಾಗೂ ವೈಜ್ಞಾನಿಕ ಸೇವೆ ಅನನ್ಯವಾಗಿದೆ ಎಂದು ಹೇಳಿದರು.

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಗಣೇಶ್ ಮಾತನಾಡಿದರು.

ಡಾ. ವೆಂಕಟಸ್ವಾಮಿ ಅವರ ಬದುಕಿನಲ್ಲಿ ಸಕಾರಾತ್ಮಕವಾಗಿ ಬೆಂಬಲ ನೀಡಿದ ಹಾಗೂ ಕಷ್ಟ-ಸುಖಗಳಲ್ಲಿ ಜೊತೆಯಾಗಿ ನಿಂತ ಆರು ಮಂದಿ ಹಿರಿಯರು ಮತ್ತು ಆತ್ಮೀಯರನ್ನು ಅವರ ದಂಪತಿ ಸಮೇತ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಸಂಚಾಲಕ ಲಕ್ಕೂರು ನಾರಾಯಣಸ್ವಾಮಿ, ಆದಿಮ ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ ಹಾಮಾ ರಾಮಚಂದ್ರ, ಲೇಖಕ ಡಾ. ಎಂ. ವೆಂಕಟಸ್ವಾಮಿ, ಸುಶೀಲಾ ವೆಂಕಟಸ್ವಾಮಿ, ಪುತ್ರ ಕ್ರಾಂತಿ ಸೇರಿದಂತೆ ನೂರಾರು ಸಾಹಿತಿಗಳು, ಅಭಿಮಾನಿಗಳು ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಚಿತ್ರ ಶೀರ್ಷಿಕೆ: ಕೆಜಿಎಫ್ ಕ್ಲಬ್‌ನಲ್ಲಿ ಡಾ. ಎಂ. ವೆಂಕಟಸ್ವಾಮಿ ಅವರ ಜೀವನಚರಿತ್ರೆ ‘ನೂರಾರು ಮಹನೀಯರು ಸಾವಿರಾರು ಹೆಜ್ಜೆಗಳು’ ಕೃತಿಯನ್ನು ರಾಜ್ಯ ಚುನಾವಣಾ ಆಯೋಗದ ಮಾಜಿ ಆಯುಕ್ತ ಎನ್.ಸಿ. ಮುನಿಯಪ್ಪ ಹಾಗೂ ಗಣ್ಯರು ಬಿಡುಗಡೆ ಮಾಡಿದರು.

---------------

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande